ADVERTISEMENT

ಅಗ್ನಿ ಅವಘಡ: ಸಮಯ ಪ್ರಜ್ಞೆ ಮುಖ್ಯ

ಅಣಕು ಪ್ರದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಮಂಜುನಾಥ್‌ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 6:16 IST
Last Updated 18 ಜುಲೈ 2019, 6:16 IST
ಎನ್‌ಡಿಆರ್‌ಎಫ್‌ ಸಿಬ್ಬಂದಿಯು ಕೋಲಾರದಲ್ಲಿ ಬುಧವಾರ ನಡೆಸಿದ ಅಗ್ನಿ ಅನಾಹುತ ತಡೆ ಅಣಕು ಪ್ರದರ್ಶನವನ್ನು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ವೀಕ್ಷಿಸಿದರು.
ಎನ್‌ಡಿಆರ್‌ಎಫ್‌ ಸಿಬ್ಬಂದಿಯು ಕೋಲಾರದಲ್ಲಿ ಬುಧವಾರ ನಡೆಸಿದ ಅಗ್ನಿ ಅನಾಹುತ ತಡೆ ಅಣಕು ಪ್ರದರ್ಶನವನ್ನು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ವೀಕ್ಷಿಸಿದರು.   

ಕೋಲಾರ: ‘ಅಗ್ನಿ ಅನಾಹುತ ಅಥವಾ ಯಾವುದೇ ಅವಘಡ ಸಂಭವಿಸಿದಾಗ ತುರ್ತಾಗಿ ಪರಿಹಾರ ಕ್ರಮ ಕೈಗೊಳ್ಳಬೇಕು. ಇದರಿಂದ ಹೆಚ್ಚಿನ ಪ್ರಾಣ ಹಾಗೂ ಆಸ್ತಿ ಹಾನಿ ತಪ್ಪಿಸಬಹುದು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವು (ಎನ್‌ಡಿಆರ್‌ಎಫ್‌) ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಗ್ನಿ ಅನಾಹುತ ತಡೆ ಕಾರ್ಯಾಚರಣೆಯ ಅಣಕು ಪ್ರದರ್ಶನದಲ್ಲಿ ಮಾತನಾಡಿ, ‘ಅಗ್ನಿ ಅವಘಡ ಸಂಭವಿಸಿದಾಗ ಜನ ಆತಂಕಕ್ಕೆ ಒಳಗಾಗದೆ ಜನರ ರಕ್ಷಣಾ ಕಾರ್ಯಾಚರಣೆಯತ್ತ ಗಮನ ಹರಿಸಬೇಕು. ಅನಾಹುತದ ಸಂದರ್ಭದಲ್ಲಿ ಸಮಯ ಪ್ರಜ್ಞೆ ಮುಖ್ಯ’ ಎಂದು ಕಿವಿಮಾತು ಹೇಳಿದರು.

‘ಮನೆ, ಸರ್ಕಾರಿ ಕಚೇರಿಗಳು ಹಾಗೂ ಕಾರ್ಖಾನೆಗಳಲ್ಲಿ ಅಗ್ನಿ ಅನಾಹುತ ಮತ್ತು ವಿದ್ಯುತ್ ಅವಘಡ ಸಂಭವಿಸುತ್ತಿರುತ್ತವೆ. ಇಂತಹ ಸಂದರ್ಭದಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಯಾವುದೇ ನಿರ್ದಿಷ್ಟ ಕಾರಣದಿಂದ ಅಗ್ನಿ ಅವಘಡ ಸಂಭವಿಸುವುದಿಲ್ಲ. ಸಾಕಷ್ಟು ಬಾರಿ ನಮಗೆ ಅರಿವಿಲ್ಲದೆ ಬೆಂಕಿ ಹೊತ್ತಿಕೊಳ್ಳುತ್ತದೆ. ಈ ರೀತಿಯ ಪರಿಸ್ಥಿತಿ ಎದುರಾದಾಗ ಗಾಬರಿಯಾಗದೆ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಮೊದಲು ಕರೆ ಮಾಡಿ ಮಾಹಿತಿ ನೀಡಬೇಕು. ಕೂಡಲೇ ಕಟ್ಟಡದ ವಿದ್ಯುತ್‌ ಸಂಪರ್ಕ ಕಡಿತಗೊಳಿಸಬೇಕು’ ಎಂದು ತಿಳಿಸಿದರು.

ನೀರಿನ ಸಮಸ್ಯೆ: ‘ದೇಶದಲ್ಲಿ ಶೇ 41ರಷ್ಟು ಪ್ರದೇಶಗಳು ನೀರಿನ ಸಮಸ್ಯೆ ಎದುರಿಸುತ್ತಿವೆ. ಆದ್ದರಿಂದ ನೀರಿನ ಸಂರಕ್ಷಣೆ ಅತ್ಯಗತ್ಯ. ಜಿಲ್ಲೆಯಲ್ಲಿ ಸುಮಾರು 2,500 ಕೆರೆಗಳಿದ್ದು, ಈ ಪೈಕಿ 100 ಕೆರೆಗಳಲ್ಲಿ ಮಾತ್ರ ಸ್ವಲ್ಪ ನೀರಿದೆ. ಕೆ.ಸಿ ವ್ಯಾಲಿ ಯೋಜನೆ ನೀರಿನಿಂದ ಈಗಾಗಲೇ 20 ಕೆರೆಗಳು ತುಂಬಿವೆ. ಉಳಿದ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ವರ್ಷ ಪೂರ್ತಿ ಕೆರೆಗಳಲ್ಲಿ ನೀರು ಇರುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಕೆರೆಗಳು ತುಂಬಿದರೆ ಮೀನುಗಾರಿಕೆ ನಡೆಸಲು ಅನುಕೂಲವಾಗುತ್ತದೆ. ಕೆರೆಗಳು ತುಂಬಿದ ನಂತರ ಹೆಚ್ಚಿನ ಮಳೆ ಬಂದರೆ ನೀರು ತಗ್ಗು ಪ್ರದೇಶಗಳಲ್ಲಿ ಶೇಖರಣೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ಜನರಿಗೆ ಅರಿವಿರಬೇಕು’ ಎಂದು ಹೇಳಿದರು.

ಜಲಶಕ್ತಿ ಅಭಿಯಾನ: ‘ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ನೀರಿನ ಬವಣೆ ಹೆಚ್ಚುತ್ತಿದೆ. ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿದಿದೆ. ಅರಣ್ಯ ಸಂಪತ್ತು ವೃದ್ಧಿಗೆ ಮರ ಗಿಡ ಬೆಳೆಸಬೇಕು. ರಾಜ್ಯ ಸರ್ಕಾರ ಪ್ರಸಕ್ತ ವರ್ಷವನ್ನು ಜಲ ವರ್ಷವೆಂದು ಘೋಷಿಸಿದೆ. ಅದೇ ರೀತಿ ಕೇಂದ್ರ ಸರ್ಕಾರವು ದೇಶದ 256 ಜಿಲ್ಲೆಗಳಲ್ಲಿ ಜಲಶಕ್ತಿ ಅಭಿಯಾನ ಕೈಗೊಂಡಿದೆ. ಇದರಲ್ಲಿ ಕೋಲಾರ ಜಿಲ್ಲೆ ಸಹ ಒಂದಾಗಿದೆ’ ಎಂದು ಮಾಹಿತಿ ನೀಡಿದರು.

‘ರಾಜ್ಯ ಸರ್ಕಾರ ಕೆ.ಸಿ ವ್ಯಾಲಿ, ಎತ್ತಿನಹೊಳೆ, ಯರಗೋಳ್‌ ಯೋಜನೆ ಮೂಲಕ ಜಿಲ್ಲೆಯ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ವಹಿಸಿದೆ. ವಿದ್ಯಾರ್ಥಿಗಳು ಸಸಿ ನೆಟ್ಟು ಪೋಷಣೆ ಮಾಡಬೇಕು. ಖಾಲಿ ಇರುವ ಪ್ರದೇಶದಲ್ಲಿ ಗಿಡ ಬೆಳೆಸಬೇಕು. ಅರಣ್ಯ ಇಲಾಖೆ ಸಸಿ ಪೂರೈಸಲಿದೆ. ಸರ್ಕಾರಿ ಮತ್ತು ಖಾಸಗಿ ಶಾಲೆ, ಕಾಲೇಜು, ಕಚೇರಿ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ಅಡುಗೆ ಅನಿಲ ಸೋರಿಕೆ, ವಿದ್ಯುತ್‌ ಶಾರ್ಟ್‌ ಸರ್ಕಿಟ್‌ ಹಾಗೂ ಅಗ್ನಿ ಅವಘಡದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮ, ಬೆಂಕಿ ನಂದಿಸುವುದು, ಬಹು ಮಹಡಿ ಕಟ್ಟಡಗಳಿಂದ ಜನರನ್ನು ಸುರಕ್ಷಿತವಾಗಿ ಕೆಳಗಿಳಿಸುವ ವಿಧಾನದ ಬಗ್ಗೆ ಅಣಕು ಪ್ರದರ್ಶನ ನೀಡಲಾಯಿತು. ಗಡಿ ಭದ್ರತಾ ಪಡೆ ಸಹಾಯಕ ಕಮಿಷನರ್‌ ಸುಭೀಷ್ ನೇತೃತ್ವದ 30 ಮಂದಿ ತಂಡವು ಅಣಕು ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಿತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪುಷ್ಪಲತಾ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಾಘವೇಂದ್ರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ರಾಮಚಂದ್ರಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.