ADVERTISEMENT

ರೈತರಿಗೆ ಪರಿಹಾರ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2023, 6:52 IST
Last Updated 2 ಫೆಬ್ರುವರಿ 2023, 6:52 IST
ಬೇತಮಂಗಲ ಸಮೀಪದ ದೊಡ್ಡಕಾರಿ ಗ್ರಾಮದಲ್ಲಿರುವ ರೈತರ ಕೊಳವೆಬಾವಿ
ಬೇತಮಂಗಲ ಸಮೀಪದ ದೊಡ್ಡಕಾರಿ ಗ್ರಾಮದಲ್ಲಿರುವ ರೈತರ ಕೊಳವೆಬಾವಿ   

ಬೇತಮಂಗಲ: ಚೆನ್ನೈ ಹೆದ್ದಾರಿ ಕಾರಿಡಾರ್‌ಗೆ ರೈತರ 3 ಕೊಳವೆಬಾವಿಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಆದರೆ, ರೈತರಿಗೆ ಬರಬೇಕಾದ ಪರಿಹಾರ ಇನ್ನೂ ನೀಡಿಲ್ಲ ಎಂದು ರೈತ ಶ್ರೀನಾಥ್ ಆರೋಪಿಸಿದರು.

ಸಮೀಪದ ದೊಡ್ಡಕಾರಿ ಗ್ರಾಮದ ಬಳಿ ಚೆನ್ನೈ ಕಾರಿಡಾರ್ ರಸ್ತೆ ಕಾಮಗಾರಿ ನಡೆಯುತ್ತಿದ್ದು ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಈ ಭಾಗದ ರೈತರಿಗೆ ತುಂಬಾ ಸಮಸ್ಯೆಯಾಗಿದೆ ಎಂದು ತಿಳಿಸಿದರು.

ದೊಡ್ಡಕಾರಿ ಗ್ರಾಮದ ಸರ್ವೆ ನಂ. 42/3ರಲ್ಲಿ ಸುಮಾರು 28 ಗುಂಟೆ ಜಮೀನನಲ್ಲಿ ರೈತರು ಕೊಳವೆಬಾವಿ ಕೊರೆಯಿಸಿದ್ದರು. ಕೊಳವೆಬಾವಿಯಲ್ಲಿ ಉತ್ತಮ ನೀರು ದೊರಕಿದೆ. ದೊಡ್ಡಕಾರಿ ಗ್ರಾಮಕ್ಕೆ ಪ್ರತಿದಿನ 3 ಗಂಟೆಗಳ ಕಾಲ ನೀರು ಪೂರೈಸುತ್ತಿದ್ದರು. ಗ್ರಾಮ ಪಂಚಾಯಿತಿ ಕಡೆಯಿಂದ ತಿಂಗಳಿಗೆ ₹ 18 ಸಾವಿರ ನೀಡುತ್ತಿದ್ದರು. ಚೆನ್ನೈ ಕಾರಿಡಾರ್ ಕಾಮಗಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪರಿಹಾರ ದೊರೆಯುತ್ತಿಲ್ಲ ಎಂದು ರೈತರು ಸಮಸ್ಯೆ ತೋಡಿಕೊಂಡರು.

ADVERTISEMENT

ಒಂದು ಕೊಳವೆಬಾವಿಯಲ್ಲಿ 1,060 ಅಡಿಗೆ ನೀರು ದೊರಕಿದೆ. ಉಳಿದ ಎರಡರಲ್ಲಿ 1,200 ಅಡಿಗೆ ನೀರು ದೊರಕಿದೆ. ಅಧಿಕಾರಿಗಳು ಮಾತ್ರ ಕೊಳವೆಬಾವಿಯಲ್ಲಿ ನೀರಿಲ್ಲ ಎಂದು ಸುಳ್ಳು ವರದಿ ನೀಡಿರುವುದು ಸರಿಯಲ್ಲ. ರೈತರ ನೋವು ಅಧಿಕಾರಿಗಳಿಗೆ ಮುಟ್ಟುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಸರ್ಕಾರದಿಂದ ಬರಬೇಕಾದ ಪರಿಹಾರ ಕೆಲವು ರೈತರಿಗೆ ದೊರಕಿದೆ. ಇನ್ನೂ ಕೆಲವು ರೈತರಿಗೆ ದೊರಕಿಲ್ಲ. ರೈತರು ಪರಿಹಾರ ಕೇಳಿದರೆ ಕಾರಿಡಾರ್ ಅಧಿಕಾರಿಗಳು ನಮ್ಮ ಮೇಲೆ ದೌರ್ಜನ್ಯ ಎಸಗುತ್ತಾರೆ ಎಂದು ಆರೋಪಿಸಿದರು.

ಗ್ರಾಮದ ರೈತರಾದ ಬಾಬು, ಪ್ರಕಾಶ್, ಹಿರೀಶ್, ಕಿಶೋರ್, ಅಂಜಪ್ಪ, ಗಂಗಾಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.