ADVERTISEMENT

ಒಂದು ದೇಶ ಒಂದೇ ಬೆಲೆ ನೀತಿ ಜಾರಿಗೆ ಒತ್ತಾಯ

ವಿತರಕರ ಮತ್ತು ವರ್ತಕರ ಕ್ಷೇಮಾಭಿವೃದ್ಧಿ ಸಂಘದಿಂದ ಧರಣಿ, ಅಂಗಡಿಗಳು ಬಂದ್

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2020, 13:23 IST
Last Updated 28 ಫೆಬ್ರುವರಿ 2020, 13:23 IST
ಕೋಲಾರದಲ್ಲಿ ಆನ್‌ಲೈನ್ ಕಂಪನಿಗಳ ಅನೈತಿಕ ವ್ಯಾಪಾರ ಖಂಡಿಸಿ ಗ್ರಾಹಕ ವಸ್ತುಗಳ ವಿತರಕರ ಕ್ಷೇಮಾಭಿವೃದ್ಧಿ ಸಂಘ, ವಿತರಕರು ಹಾಗೂ ವರ್ತಕರ ಸಂಘಗಳ ಒಕ್ಕೂಟದಿಂದ ನಗರದಲ್ಲಿ ಶುಕ್ರವಾರ ಧರಣಿ ನಡೆಸಿದರು.
ಕೋಲಾರದಲ್ಲಿ ಆನ್‌ಲೈನ್ ಕಂಪನಿಗಳ ಅನೈತಿಕ ವ್ಯಾಪಾರ ಖಂಡಿಸಿ ಗ್ರಾಹಕ ವಸ್ತುಗಳ ವಿತರಕರ ಕ್ಷೇಮಾಭಿವೃದ್ಧಿ ಸಂಘ, ವಿತರಕರು ಹಾಗೂ ವರ್ತಕರ ಸಂಘಗಳ ಒಕ್ಕೂಟದಿಂದ ನಗರದಲ್ಲಿ ಶುಕ್ರವಾರ ಧರಣಿ ನಡೆಸಿದರು.   

ಕೋಲಾರ: ಆನ್‌ಲೈನ್ ಕಂಪನಿಗಳ ವ್ಯಾಪಾರ ತಡೆದು ಒಂದು ದೇಶ ಒಂದು ತೆರಿಗೆಯಂತೆ ಒಂದು ದೇಶ ಒಂದೇ ಬೆಲೆ ನೀತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಗ್ರಾಹಕ ವಸ್ತುಗಳ ವಿತರಕರ ಕ್ಷೇಮಾಭಿವೃದ್ಧಿ ಸಂಘ, ವಿತರಕರು ಹಾಗೂ ವರ್ತಕರ ಸಂಘಗಳ ಒಕ್ಕೂಟದಿಂದ ನಗರದಲ್ಲಿ ಶುಕ್ರವಾರ ಧರಣಿ ನಡೆಸಿದರು.

ನಗರದ ಗಾಂಧಿ ಉದ್ಯಾನದ ಬಳಿ ಜಮಾಯಿಸಿದ ವರ್ತಕರು ಎಂ.ಜಿ ರಸ್ತೆ, ಎಂಬಿ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ತನಕ ಬೈಕ್‌ ರ್‌್ಯಾಲಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಬಂದ್‌ ಮಾಡಿದ್ದರು.

ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಜಿಲ್ಲಾಧ್ಯಕ್ಷ ಬಿ.ಸುರೇಶ್ ಮಾತನಾಡಿ, ‘ಆನ್‌ಲೈನ್ ಮತ್ತು ಇ ಕಾಮರ್ಸ್ನೈತಿಕವಲ್ಲದ ವ್ಯಾಪಾರ ಮತ್ತು ಆನ್‌ಲೈನ್ ವ್ಯವಹಾರ ರದ್ದು ಮಾಡಬೇಕು. ಒಂದು ದೇಶ- ಒಂದು ತೆರಿಗೆ, ಒಂದು ದೇಶ- ಒಂದೇ ಬೆಲೆ ನಿಗದಿ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಸ್ಥಳೀಯ ವ್ಯಾಪಾರಿಗಳನ್ನು ಉಳಿಸಿ, ಬೆಂಬಲಿಸಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು. ರಾಜ್ಯದಲ್ಲಿ ಪಾರಂಪರಿಕ ವ್ಯಾಪಾರಿಗಳೇ ಸಾರ್ವಭೌಮರಾಗಿದ್ದು, ಕಂಪನಿಗಳ ದ್ವಂದ್ವ ನೀತಿಗಳನ್ನು ಜಾರಿಗೊಳಿಸುತ್ತಿದೆ’ ಎಂದು ಆಕ್ರೋಶವ್ಯಕ್ತಪಡಿಸಿದರು.

‘ಆನ್‌ಲೈನ್‌ ಕಂಪನಿಗಳು ಹೆಚ್ಚು ರಿಯಾಯ್ತಿ ನೀಡದಂತೆ ನಿಯಮ ರೂಪಿಸಬೇಕು. ಊಟದಿಂದ ಹಿಡಿದು ಬಟ್ಟೆವರೆಗೆ ಎಲ್ಲ ವಸ್ತುಗಳನ್ನು ಆನ್‌ಲೈನ್ ಮೂಲಕ ಖರೀದಿಸಿದರೆ ಅದರ ಗುಣಮಟ್ಟದ ಬಗ್ಗೆ ಪ್ರಶ್ನಿಸುವ ಹಕ್ಕು ಗ್ರಾಹಕರು ಕಳೆದುಕೊಳ್ಳುತ್ತಾರೆ. ವಸ್ತುಗಳ ನೈಜ ಮೌಲ್ಯ ಮರೆಮಾಚಿ ದೊಡ್ಡ ಕಂಪನಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ತೆರಿಗೆ ವಂಚಿಸಲಾಗುತ್ತಿದೆ’ ಎಂದು ದೂರಿದರು.

‘ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಆನ್‌ಲೈನ್ ವ್ಯಾಪಾರಿಗಳ ಅನುಮತಿ ರದ್ದುಗೊಳಿಸಬೇಕು. ಸ್ಥಳೀಯ ಅಂಗಡಿ ವ್ಯಾಪಾರಸ್ಥರಿಗೆ ಸಹಕಾರ ನೀಡಬೇಕು. ಜಿಎಸ್‌ಟಿ ತೆರಿಗೆ ಕಟ್ಟುತ್ತಿರುವ ವ್ಯಾಪಾರಿಗಳಿಗೆ ವೃದ್ಧಾಪ್ಯ ವೇತನ, ಜೀವ ವಿಮೆ ಕಲ್ಪಿಸಬೇಕು, ವರ್ತಕರ ನಿಗಮ ಮಂಡಲಿ- ವರ್ತಕರಿಗೆ ಸರ್ಕಾರದಲ್ಲಿ ಸ್ಥಾನಮಾನ ಸಿಗಬೇಕು, ಆನ್‌ಲೈನ್ ವ್ಯಾಪಾರವನ್ನು ದಿಕ್ಕರಿಸಿ ಪಾರಂಪರಿಕ ವ್ಯಾಪಾರವನ್ನು ಬೆಳೆಸಬೇಕು’ ಎಂದು ಒತ್ತಾಯಿಸಿದರು.

‘ವಾರ್ಷಿಕ ಸರಿ ಸುಮಾರು ₹10 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿ ಕಟ್ಟಿ, ಸಾವಿರಾರು ಕುಟುಂಬಗಳಿಗೆ ಉದ್ಯೋಗ ಕಲ್ಪಿಸುವ ವ್ಯಾಪಾರಸ್ಥರ ಇಂದಿನಿ ಸ್ಥಿತಿಗೆ ನಮ್ಮ ಉದಾಸೀನತೆಯೆ ಕಾರಣವಾಗಿದ್ದು, ಅದು ಬದಲಾಗಬೇಕು. ಟ್ರೇಡ್‌ ಯೂನಿಯನ್‌ಗಳಿಗೆ ಅನುಮತಿ ನೀಡಲು ಹತ್ತಾರು ಇಲಾಖೆಗಳಿಗೆ ಅಲೆದಾಡಿಸುವುದನ್ನು ತಪ್ಪಿಸಿ, ಒಂದೇ ಇಲಾಖೆಯಲ್ಲಿ ಅನುಮತಿ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಉಪಾಧ್ಯಕ್ಷ ಚಲಪತಿ, ವಿತರಕರ ಸಂಘದ ಅಧ್ಯಕ್ಷ ವಿಜಿ ಕುಮಾರ್, ರಮೇಶ್, ರಾಜ್ಯ ಘಟಕದ ಖಜಾಂಚಿ ಗಣೇಶ್, ವರ್ತಕರ ಒಕ್ಕೂಟದ ಅಧ್ಯಕ್ಷ ಶ್ರೀಧರ್, ರವಿ, ಆನಂದ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.