ADVERTISEMENT

ಕಾಡಾನೆ ಉಪಟಳ ಹೆಚ್ಚಳ: ಬೆಳೆ ನಾಶ

ಆತಂಕದಲ್ಲಿ ಕಾಡಂಚಿನ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 6:08 IST
Last Updated 13 ಡಿಸೆಂಬರ್ 2025, 6:08 IST
ಬಂಗಾರಪೇಟೆ ತಾಲ್ಲೂಕಿನ ಗಡಿ ಗ್ರಾಮದಲ್ಲಿ ಕಾಡಾನೆಗಳು ಬಾಳೆ ಬೆಳೆ ನಾಶ ಮಾಡಿರುವುದು
ಬಂಗಾರಪೇಟೆ ತಾಲ್ಲೂಕಿನ ಗಡಿ ಗ್ರಾಮದಲ್ಲಿ ಕಾಡಾನೆಗಳು ಬಾಳೆ ಬೆಳೆ ನಾಶ ಮಾಡಿರುವುದು   

ಬಂಗಾರಪೇಟೆ: ಗಡಿಭಾಗದ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಜನರ ಜೀವ ಮತ್ತು ಆಸ್ತಿಪಾಸ್ತಿಗೆ ನಷ್ಟ ಉಂಟಾಗುತ್ತಿದೆ.

ತಾಲ್ಲೂಕಿನ ಕಾಮಸಮುದ್ರ‌ ಅಭಯಾರಣ್ಯ ವ್ಯಾಪ್ತಿಯಲ್ಲಿ ಮೊಕ್ಕಾಂ ಹೂಡಿರುವ ಕಾಡಾನೆಗಳು ಪ್ರತಿ ದಿನ ಗಡಿಭಾಗದ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಜನರ ನೆಮ್ಮದಿ ಕೆಡಿಸುತ್ತಿವೆ.

ಕದಿರಿನತ್ತ, ಸಾಕರಸನಹಳ್ಳಿ, ತಳೂರು, ಮಲ್ಲೇಶ್ ಪಾಳ್ಯ, ಬತ್ತಲಹಳ್ಳಿ, ಭೀಮಗಾನಹಳ್ಳಿ, ಕೀರುಮಂದೆ ಸೇರಿದಂತೆ ಗಡಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಆರು ಕಾಡಾನೆಗಳ ಗುಂಪು ರೈತರು ಬೆಳೆದಿರುವ ರಾಗಿ, ಭತ್ತ, ಟೊಮೆಟೊ, ಬಾಳೆ ಇತ್ಯಾದಿ ಬೆಳೆಗಳನ್ನು ನಾಶಗೊಳಿಸುತ್ತಿವೆ. ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿಗಳ ನಷ್ಟ ಉಂಟಾಗುತ್ತಿವೆ.

ADVERTISEMENT

ಡಿ.11ರಂದು ಮುಂಜಾನೆ ಭೀಮಗಾನಹಳ್ಳಿ ಗ್ರಾಮದ ರೈತ ಜಿ.ವೆಂಕಟೇಶಪ್ಪ ಅವರ ಭತ್ತದ ಗುಡ್ಡೆ, ಮುರುಗೇಶ್‌ ಅವರ ಭತ್ತದ ರಾಶಿ, ನಾರಾಯಣಪ್ಪ ಅವರ ಜೋಳ, ಬಾಳೆ ಮತ್ತು ರಾಗಿ ಬೆಳೆ, ತಿಮ್ಮೇಗೌಡರ ರಾಗಿ ರಾಶಿ, ನಾಗಯ್ಯರ ರಾಗಿ ಮೇದೆ ನಾಶಗೊಳಿಸಿವೆ. ಕಾಡಾನೆಗಳು ರಾಗಿ ಮತ್ತು ಭತ್ತದ ರಾಶಿಯನ್ನು ತಿಂದು ಚೆಲ್ಲಾಪಿಲ್ಲಿ ಮಾಡಿದ್ದು, ಕೈಗೆ ಸಿಕ್ಕ ಬೆಳೆ ಬಾಯಿಗೆ ಬರದಂತಾಗಿದೆ ಎಂಬುದು ರೈತರ ಅಳಲಾಗಿದೆ.

ಕಾಡಾನೆ ನಿಯಂತ್ರಣಕ್ಕೆ ಸೋಲಾರ್ ಫೆನ್ಸಿಂಗ್ ಅಳವಡಿಸಿದ್ದರೂ ಅದು ಸರಿಯಾಗಿ ಕೆಲಸ ಮಾಡದ ಕಾರಣ ಕಾಡಿನಿಂದ ಆನೆಗಳು ನಾಡಿಗೆ ಬರುತ್ತಿದ್ದು, ರೈತರು ಬೆಳೆದ ಬೆಳೆಗಳು ನಾಶವಾಗುತ್ತಿವೆ. ಅರಣ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಬೆಳೆಗಳು ನಾಶವಾಗುತ್ತಿವೆ. ಹಾಗಾಗಿ ಬೆಳೆ ನಾಶಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.

ನಾಶವಾಗಿರುವ ಭತ್ತದ ರಾಶಿ
ನಾಶವಾಗಿರುವ ರಾಗಿ ರಾಶಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.