
ಬಂಗಾರಪೇಟೆ: ತಾಲ್ಲೂಕಿನ ಕಳವಂಚಿ ವೃತ್ತದಲ್ಲಿ ಅರಣ್ಯ ಇಲಾಖೆಯಿಂದ ಅರಣ್ಯ ರಕ್ಷಣೆ ಕುರಿತು ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಯಿತು.
ಉಪ ವಲಯ ಅಧಿಕಾರಿ ನಾಗೇಶ್ ಮಾತನಾಡಿ, ನಾವು ಉಸಿರಾಡುವ ಪ್ರತಿಯೊಂದು ಉಸಿರಿಗೂ ಕಾಡಿನ ಮರ ಗಿಡಗಳೇ ಕಾರಣ. ಕಾಡು ಸುಡುವುದು ಎಂದರೆ ನಮ್ಮ ಉಸಿರಾಟದ ಮೂಲವನ್ನು ನಾವೇ ಕೈಯಾರೆ ಸುಟ್ಟುಕೊಂಡಂತೆ. ಕಾಡ್ಗಿಚ್ಚು ತಡೆಗಟ್ಟುವುದು ಇಂದಿನ ತುರ್ತು ಅಗತ್ಯಗಳಲ್ಲಿ ಒಂದಾಗಿದೆ. ಕಾಡ್ಗಿಚ್ಚಿನಿಂದ ಕೇವಲ ಮರಗಳು ಮಾತ್ರವಲ್ಲದೆ, ಇಡೀ ಪರಿಸರ ವ್ಯವಸ್ಥೆಯೇ ನಾಶವಾಗುತ್ತದೆ ಎಂದು ಹೇಳಿದರು.
ಬೆಂಕಿಯಿಂದ ಓಡಲಾರದ ಸಣ್ಣ ಪ್ರಾಣಿಗಳು, ಹಕ್ಕಿಗಳು ಮತ್ತು ಅವುಗಳ ಮೊಟ್ಟೆಗಳು ಬೆಂಕಿಯಲ್ಲಿ ಬೆಂದು ಹೋಗುತ್ತವೆ. ಕಾಡ್ಗಿಚ್ಚಿನಿಂದ ಹರಡುವ ಹೊಗೆ ಹತ್ತಿರದ ಹಳ್ಳಿಗಳ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಕಾಡಿನಲ್ಲಿರುವ ಅಮೂಲ್ಯವಾದ ಔಷಧೀಯ ಸಸ್ಯಗಳು ಮತ್ತು ಶ್ರೀಗಂಧದಂತಹ ಮರಗಳು ಸುಟ್ಟು ಬೂದಿಯಾಗುತ್ತವೆ. ಕಾಡಿಗೆ ಬೆಂಕಿ ಹಚ್ಚುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಜೈಲು ಶಿಕ್ಷೆ ಮತ್ತು ಭಾರಿ ದಂಡ ವಿಧಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಹೆಚ್ಚಿನ ಕಾಡ್ಗಿಚ್ಚುಗಳು ಮಾನವನ ಅಚಾತುರ್ಯದಿಂದಲೇ ಸಂಭವಿಸುತ್ತವೆ. ಕಾಡಿನ ಹಾದಿಯಲ್ಲಿ ಅಥವಾ ಕಾಡಿನ ಸಮೀಪ ಪ್ರಯಾಣಿಸುವಾಗ ಉರಿಯುತ್ತಿರುವ ಸಿಗರೇಟ್ ಅಥವಾ ಬಿಡಿ ತುಂಡುಗಳನ್ನು ಎಸೆಯಬಾರದು. ಇದು ಒಣಗಿದ ಎಲೆಗಳಿಗೆ ತಗುಲಿ ಕ್ಷಣಾರ್ಧದಲ್ಲಿ ಬೆಂಕಿ ಹರಡಬಹುದು. ಕಾಡಿನಂಚಿನ ಗ್ರಾಮಗಳಲ್ಲಿನ ರೈತರು ಜಮೀನುಗಳಲ್ಲಿ ಕಸ ಕಡ್ಡಿ ಸುಡುವಾಗ ಜಾಗರೂಕರಾಗಿರಬೇಕು. ಕಾಡಿನಲ್ಲಿ ಪ್ರವಾಸ ಮಾಡುವವರು ಅಡುಗೆಗಾಗಿ ಬೆಂಕಿ ಹಚ್ಚುವುದನ್ನು ನಿಷೇಧಿಸಲಾಗಿದೆ ಎಂದರು.
ಕಾಡಿನಲ್ಲಿ ಎಲ್ಲಾದರೂ ಸಣ್ಣ ಕಿಡಿ ಅಥವಾ ಹೊಗೆ ಕಂಡರೆ ತಕ್ಷಣವೇ ಅರಣ್ಯ ಇಲಾಖೆಯ ಉಚಿತ ಸಹಾಯವಾಣಿ ಸಂಖ್ಯೆ 1926 ಸಂಖ್ಯೆಗೆ ಕರೆ ಮಾಡಿ ಅಥವಾ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಬೇಕು ಎಂದರು.
ಮೈಸೂರಿನ ರಂಗಭೂಮಿ ಕಲಾವಿದರಾದ ಅಸ್ಮಾ ಭಾನು ಮತ್ತು ತಂಡದವರು ಬೀದಿ ನಾಟಕದ ಮೂಲಕ ಕಾಡ್ಗಿಚ್ಚಿನ ಅನಾಹುತಗಳ ಬಗ್ಗೆ ಅರಿವು ಮೂಡಿಸಿದರು.
ಈ ವೇಳೆ ಸರ್ಕಾರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಎಂ. ರವೀಂದ್ರ ನಾಥ್ , ಶಿಕ್ಷಕ ಕೃಷ್ಣಾರೆಡ್ಡಿ, ಅರಣ್ಯ ರಕ್ಷಕ ದರ್ಶನ್, ಮುರಳಿ ಹಾಗೂ ಸಿಬ್ಬಂದಿ ಸುರೇಶ್ , ನಾಗರಾಜ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.