ADVERTISEMENT

ಕೋಲಾರ | ಒತ್ತುವರಿ ತೆರವು; ಡಿಸಿಎಫ್‌ ಮೇಲೆ ಮುಗಿಬಿದ್ದ ಶಾಸಕರು!

ಜಂಟಿ ಸರ್ವೆ ಮುಗಿಯುವವರೆಗೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವಂತಿಲ್ಲ–ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 5:52 IST
Last Updated 16 ಜುಲೈ 2025, 5:52 IST
ಕೋಲಾರದಲ್ಲಿ ಮಂಗಳವಾರ ಸಂಸದ ಎಂ.ಮಲ್ಲೇಶ್‌ ಬಾಬು ನೇತೃತ್ವದಲ್ಲಿ ನಡೆದ ದಿಶಾ ಸಭೆಯಲ್ಲಿ ಇಂಚರ ಗೋವಿಂದರಾಜು, ಜಿ.ಕೆ.ವೆಂಕಟಶಿವಾರೆಡ್ಡಿ, ಎಂ.ಆರ್‌.ರವಿ ಚರ್ಚೆಯಲ್ಲಿ ತೊಡಗಿದ್ದ ಸಂದರ್ಭ
ಕೋಲಾರದಲ್ಲಿ ಮಂಗಳವಾರ ಸಂಸದ ಎಂ.ಮಲ್ಲೇಶ್‌ ಬಾಬು ನೇತೃತ್ವದಲ್ಲಿ ನಡೆದ ದಿಶಾ ಸಭೆಯಲ್ಲಿ ಇಂಚರ ಗೋವಿಂದರಾಜು, ಜಿ.ಕೆ.ವೆಂಕಟಶಿವಾರೆಡ್ಡಿ, ಎಂ.ಆರ್‌.ರವಿ ಚರ್ಚೆಯಲ್ಲಿ ತೊಡಗಿದ್ದ ಸಂದರ್ಭ   

ಕೋಲಾರ: ಅರಣ್ಯ ಜಮೀನು ತೆರವು ಕಾರ್ಯಾಚರಣೆ ಕೈಗೊಂಡಿರುವುದಕ್ಕೆ ಶಾಸಕರು ಪಕ್ಷಾತೀತವಾಗಿ ಅರಣ್ಯ ಉಪಸಂರಕ್ಷಣಾಧಿಕಾರಿ (ಡಿಸಿಎಫ್‌) ಸರೀನಾ ಸಿಕ್ಕಲಿಗರ್‌ ಮೇಲೆ ಮುಗಿಬಿದ್ದ ಪ್ರಸಂಗ ಮಂಗಳವಾರ ನಡೆದಿದ್ದು, ಜಂಟಿ ಸರ್ವೆ ಮುಗಿಯುವವರೆಗೆ ತೆರವು ಕಾರ್ಯಾಚರಣೆ ನಡೆಸುವಂತಿಲ್ಲ, ಒಕ್ಕಲೆಬ್ಬಿಸುವಂತಿಲ್ಲ ಎಂಬ ನಿರ್ಣಯಕ್ಕೆ ಬರಲಾಗಿದೆ.

ಸಂಸದ ಎಂ.ಮಲ್ಲೇಶ್‌ ಬಾಬು ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯ ಹೆಚ್ಚಿನ ಸಮಯವನ್ನು ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ಚರ್ಚೆ ನುಂಗಿ ಹಾಕಿತು. ಈ ಮೂಲಕ ಸಭೆಯು ಅರಣ್ಯ ಇಲಾಖೆಯ ಪರಿಶೀಲನೆ ಸಭೆಯಂತೆ ಭಾಸವಾಯಿತು. ಈ ಚರ್ಚೆ ನಿಲ್ಲಿಸೋಣ, ಎಲ್ಲೆಲ್ಲಿಗೋ ಹೋಗುತ್ತಿದೆ ಎಂದು ಸಂಸದರು ಹೇಳಿದರೂ ನಿಲ್ಲಲಿಲ್ಲ.

ಇತ್ತೀಚೆಗೆ ಕೋಲಾರ ತಾಲ್ಲೂಕಿನ ಹುತ್ತೂರು ಹೋಬಳಿಯ ಹರಟಿ, ಶಿಳ್ಳಂಗೆರೆ, ಕೋಟಿಗಾನಹಳ್ಳಿ ಭಾಗದಲ್ಲಿ ಅರಣ್ಯ ಇಲಾಖೆ ಕೈಗೊಂಡಿದ್ದ ಒತ್ತುವರಿ ತೆರವು ಕಾರ್ಯಾಚರಣೆ ಸಂಬಂಧ ಮಾತಿನ ಚಕಮಕಿ, ಆಕ್ರೋಶ, ಕೋಪ, ಸಭೆಯ ಬಹಿಷ್ಕಾರ ಬೆದರಿಕೆ, ಪ್ರತಿಭಟನೆಯ ಎಚ್ಚರಿಕೆ ನಡುವೆ ಒಂದು ತಾಸಿಗೂ ಅಧಿಕ ಸಮಯ ಚರ್ಚೆ ನಡೆದಿದ್ದು, ಅಷ್ಟು ಹೊತ್ತು ಉಳಿದೆಲ್ಲಾ ಅಧಿಕಾರಿಗಳು ಈ ಸನ್ನಿವೇಶಕ್ಕೆ ಮೌನ ಸಾಕ್ಷಿಯಾದರು.

ADVERTISEMENT

ಸಭೆಗೆ ಬರುತ್ತಿದ್ದಂತೆ ಬಂಗಾರಪೇಟೆ ಕಾಂಗ್ರೆಸ್‌ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಈ ವಿಚಾರ ಪ್ರಸ್ತಾಪಿಸಿದರು. ನಂತರ ವಿಧಾನ ಪರಿಷತ್‌ ಸದಸ್ಯರಾದ ಜೆಡಿಎಸ್‌ನ ಇಂಚರ ಗೋವಿಂದರಾಜು, ಕಾಂಗ್ರೆಸ್‌ನ ಎಂ.ಎಲ್.ಅನಿಲ್‌ ಕುಮಾರ್‌, ಜೆಡಿಎಸ್‌ ಶಾಸಕ ಸಮೃದ್ಧಿ ಮಂಜುನಾಥ್‌ ಧ್ವನಿಗೂಡಿಸಿ ಹಟಕ್ಕೆ ಬಿದ್ದವರಂತೆ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಒಬ್ಬರ ಮಾತು ಮುಗಿಯುತ್ತಿದ್ದಂತೆ ಇನ್ನೊಬ್ಬರು ವಿಚಾರ ಪ್ರಸ್ತಾಪಿಸುತ್ತಾ ಹೋದರು. ರೈತರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ನ್ಯಾಯ ಬೇಕೆಂದು ಒತ್ತಾಯಿಸಿದರು.

ಇತ್ತ ಡಿಸಿಎಫ್‌ ಮಾತ್ರ ಮಾತನಾಡಲು ತಮಗೆ ಸಿಕ್ಕ ಅಲ್ಪ ಕಾಲಾವಕಾಶದಲ್ಲಿ, ‘ಕಾನೂನಿನಂತೆ ಕೆಲಸ ಮಾಡುತ್ತಿದ್ದೇವೆ. ಒತ್ತುವರಿ ತೆರವು ಮಾಡಿದರೆ ನನಗೇನೂ ಕಿರೀಟ ತೊಡಿಸುವುದಿಲ್ಲ. ಈ ರೀತಿ ಬಯ್ಯಿಸಿಕೊಳ್ಳುವುದು ನಮಗೆ ಇಷ್ಟವಿಲ್ಲ. ಅರಣ್ಯ ಇಲಾಖೆಯದ್ದು ಜಾಗವೆಂದು ನೋಟಿಫಿಕೇಷನ್‌ ಆಗಿದೆ. ಅದರಂತೆ ಕ್ರಮ ವಹಿಸಿದ್ದೇವೆ’ ಎಂದು ತಿರುಗೇಟು ನೀಡಿದರು.

ಎಸ್‌.ಎನ್‌.ನಾರಾಯಣಸ್ವಾಮಿ ಮಾತನಾಡಿ, ‘ನೋಟಿಸ್ ನೀಡಿ ಜಂಟಿ ಸರ್ವೆ ಮಾಡಿ ನಂತರ ಕ್ರಮ ವಹಿಸಬೇಕು. ಆದರೆ, ಸರ್ಕಾರದಿಂದ ಸಾಗುವಳಿ, ಖಾತೆ ಪಡೆದು ಉಳುಮೆಯಲ್ಲಿ ತೊಡಗಿದ್ದ ರೈತರ ಜಮೀನಿಗೆ ಏಕಾಏಕಿ ಜೆಸಿಬಿ ತಂದು ನುಗ್ಗಿಸಿದ್ದೀರಿ, ಕಷ್ಟಪಟ್ಟು ಬೆಳೆ ಬೆಳೆದಿದ್ದ ಜಮೀನನನ್ನು ಏಕೆ ನಾಶ ಮಾಡಿದ್ದೀರಿ. ದಲಿತರು, ಅಮಾಯಕರಿಗೆ ಹಿಂಸೆ ನೀಡಲಾಗುತ್ತಿದೆ. ನಿಮಗೆ ಅಧಿಕಾರ ಕೊಟ್ಟವರಾರು?  ಡಿಸಿಎಫ್‌ ಸೇರಿದಂತೆ ಅರಣ್ಯ ಇಲಾಖೆಯ ಯಾವ ಅಧಿಕಾರಿಯೂ ಸೌಜನ್ಯಕ್ಕಾದರೂ ಶಾಸಕನಾದ ನನ್ನ ಗಮನಕ್ಕೆ ತಂದಿಲ್ಲ. ನಿಮ್ಮ ದೊಡ್ಡತನಕ್ಕೆ ನನ್ನ ನಮಸ್ಕಾರ’ ಎಂದು ಹರಿಹಾಯ್ದರು.

‘ರೈತರ ಹೆಸರಿನಲ್ಲಿ ಹದ್ದುಬಸ್ತು ಕಟ್ಟಲು ತಾವು ಯಾರು? ಅರಣ್ಯ ಇಲಾಖೆಯದ್ದೇ ಜಮೀನು ಆಗಿದ್ದರೆ ಇಷ್ಟು ವರ್ಷ ಏಕೆ ಸುಮ್ಮನಿದ್ದಿರಿ? ರೈತರು ಸಾಲ ಪಡೆದು, ಕೊಳವೆಬಾವಿ ಕೊರೆಯಿಸಿದ್ದಾರೆ. ಕಂದಾಯ ಪಾವತಿಸಿ, ಬೆಳೆ ಬೆಳೆದಿದ್ದಾರೆ. ಈಗ ಅರಣ್ಯ ಇಲಾಖೆಯವರು ಬಂದು ಜಮೀನು ತಮ್ಮದು ಎಂದರೆ ಹೇಗೆ’ ಎಂದು ಪ್ರಶ್ನಿಸಿದರು.

‘ಹಿಂದೆ ನರಸಾಪುರ ಜಮೀನಿನ ವಿಚಾರವಾಗಿ ಸಚಿವರ ನೇತೃತ್ವದಲ್ಲಿ ಸಭೆ ಆಗಿತ್ತು. ಜಂಟಿ ಸರ್ವೆ ಆಗುವವರೆಗೆ ಜಮೀನು ಮುಟ್ಟಬಾರದು ಎಂದಿದ್ದರು. ಅದರಲ್ಲೂ ಮೂರು ಎಕರೆ ಇರುವ ಸಣ್ಣ ರೈತರ ಜಮೀನು ಮುಟ್ಟಬಾರದು ಎಂಬ ಸೂಚನೆ ನೀಡಿದ್ದರು. ಆದರೂ ಅರಣ್ಯ ಇಲಾಖೆಯವರು ಆಡಿದ್ದೇ ಆಟವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜಿಲ್ಲಾಧಿಕಾರಿ ಈ ವಿಚಾರದಲ್ಲಿ ಸರಿಯಾಗಿ ನಡೆದುಕೊಂಡಿದ್ದಾರೆ. ಅವರ ಮಾತನ್ನಾದರೂ ಕೇಳುವುವುದು ಬೇಡವೇ’ ಎಂದರು.

ಎಂಎಲ್‌ಸಿ ಇಂಚರ ಗೋವಿಂದರಾಜು ಮಾತನಾಡಿ, ‘ಸಂಬಂಧಿತ ಪ್ರದೇಶದಲ್ಲಿ ಫಾರಂ ಇದ್ದು ಕೋಳಿ ಸಾಕಣೆ ಮಾಡುತ್ತಿದ್ದೇನೆ. ನನ್ನ ಜಮೀನು 2.13 ಎಕರೆ ಇದೆ. ಜಮೀನಿಗೆ ಸಂಬಂಧಿಸಿದ ದಾಖಲೆ ಪತ್ರಗಳು ನನ್ನ ಬಳಿ ಇವೆ. ನಾನು ಹೊರದೇಶಕ್ಕೆ ಚಿಕಿತ್ಸೆಗೆ ಹೋಗಿದ್ದಾಗ ಅರಣ್ಯಾಧಿಕಾರಿಗಳು ಅಕ್ರಮವಾಗಿ ಪ್ರವೇಶ ಮಾಡಿ ಟ್ರೆಂಚ್ ಹೊಡೆದಿದ್ದಾರೆ’ ಎಂದು ಹೇಳಿದರು.

ಸರೀನಾ ಸಿಕ್ಕಲಿಗಾರ್‌ ಮಾತನಾಡಿ, ‘ನಮ್ಮ ಜವಾಬ್ದಾರಿ, ಕರ್ತವ್ಯವನ್ನು ನಾವು ನಿಭಾಯಿಸುತ್ತಿದ್ದೇವೆ. ತಾವು ಹೇಳುತ್ತಿರುವ ಜಾಗ ಮೈನರ್ ಫಾರೆಸ್ಟ್ ಎಂದು ನೋಟಿಫಿಕೇಷನ್ ಆಗಿದೆ. ಮತ್ತೆಂದು ಡಿನೋಟಿಫಿಕೇಷನ್ ಆಗಿಲ್ಲ. ನೋಟಿಫೀಕೇಷನ್ ಆದ ಮೇಲೆ ಸಾಗುವಳಿ ‌ಕೊಡಲು ಅವಕಾಶ ‌ಇಲ್ಲ. ಅಲ್ಲಿ ಗೋಮಾಳವೂ ಇಲ್ಲ. ಮೂರು ಬಾರಿ ನೋಟಿಸ್ ಕೊಟ್ಟು ಪರಿಶೀಲನೆ ‌ಮಾಡಲಾಗಿದೆ. ಇದು ಅರಣ್ಯ ಇಲಾಖೆಯ ಜಾಗ’ ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು.

ಎಂಎಲ್‌ಸಿ ಅನಿಲ್ ಕುಮಾರ್‌ ಮಾತನಾಡಿ, ‘ಅರಣ್ಯ‌ ಇಲಾಖೆಯಿಂದ ದೌರ್ಜನ್ಯ ನಡೆಯುತ್ತಿದ್ದು, ವಶಪಡಿಸಿಕೊಂಡಿರುವ ಟ್ರ್ಯಾಕರ್ ವಾಪಸ್‌ ಕೊಟ್ಟಿಲ್ಲ. ಕಂದಾಯ ಇಲಾಖೆ‌ ಹೇಗೆ ಮಂಜೂರು ಮಾಡಿತು? ಯಾರ ತಪ್ಪು? ಅರಣ್ಯ ಇಲಾಖೆ ಅಧಿಕಾರಿಗಳದ್ದು ಸರ್ವಾಧಿಕಾರಿ ಆಡಳಿತವೇ? ಜಂಟಿ ಸರ್ವೆ ‌ಮಾಡುವವರೆಗೆ ಜಮೀನು ಮುಟ್ಟುವಂತಿಲ್ಲ. ಜಮೀನು ಅರಣ್ಯ ಇಲಾಖೆಯದ್ದೋ, ಕಂದಾಯ ಇಲಾಖೆಯದ್ದೋ ಎಂಬ ತೀರ್ಮಾನ ಆಗಬೇಕು’ ಎಂದು ಪಟ್ಟು ಹಿಡಿದರು.

ಆಗ ಮಧ್ಯ ಪ್ರವೇಶಿಸಿದ ಜಿಲ್ಲಾಧಿಕಾರಿ ಎಂ.ಆರ್‌.ರವಿ, ‘ಜಂಟಿ ಸರ್ವೆ ಆಗದೆ ಯಾರ ಜಮೀನನ್ನು‌ ಅರಣ್ಯ ಇಲಾಖೆ ಏನೂ ಮಾಡಬಾರದು, ಒಕ್ಕಲೆಬ್ಬಿಸಬಾರದು. ಈ ಸಂಬಂಧ ನಿರ್ಣಯ ಕೈಗೊಳ್ಳಲಾಗುವುದು’ ಎಂದಾಗ ಎಲ್ಲಾ ಶಾಸಕರು ಮೇಜು ತಟ್ಟಿ ಖುಷಿ ವ್ಯಕ್ತಪಡಿಸಿದರು.

‘ಜಂಟಿ ಸರ್ವೆ ನಡೆಸುವ ಬಗ್ಗೆ ಸುಪ್ರೀಂ ಕೋರ್ಟ್‌ ಆದೇಶವೂ ಇದೆ. ಅದರಂತೆ ಜಂಟಿ ಸರ್ವೆ ನಡೆಸೋಣ. ಈವರೆಗೆ ನ್ಯಾಯಸಮ್ಮತವಾಗಿ ಸರ್ವೆ ನಡೆದಿಲ್ಲ. ಸರ್ಕಾರದ ನಿಯಮಾನುಸಾರವಾಗಿಯೇ ಮಂಜೂರು ಆಗಿದೆ. ಕೆಲವು ದುರಸ್ತಿ ಆಗಿದೆ, ಕೆಲವು ಆಗಿಲ್ಲ’ ಎಂದರು.

ಅರಣ್ಯವನ್ನು ರೆಕಾರ್ಡ್, ಡೀಮ್ಡ್, ಮೀಸಲು ಅಂತ ಗುರುತಿಸಿ ನೋಟಿಫೈ ಮಾಡಲಾಗಿದೆ. ಅದರ ಆಧಾರದ ಮೇರೆಗೆ ದಾಖಲೆಯನ್ನು ಸ್ವೀಕರಿಸಿದ್ದು, ಇದನ್ನು ಇತ್ಯರ್ಥ ಮಾಡಲು ಪ್ರತಿ ತಾಲ್ಲೂಕಿನಲ್ಲೂ ತಂಡ ರಚನೆ ಮಾಡಲಾಗಿದೆ. ವರದಿ ಬಂದ ಕೂಡಲೇ ಕೆಡಿಪಿ ಸಭೆಯಲ್ಲಿ ಮಂಡಿಸಿ ನಂತರ ಸರ್ಕಾರದ ಗಮನಕ್ಕೆ ತಂದು ಇತ್ಯರ್ಥಪಡಿಸಲಾಗುವುದು ಎಂದು ಹೇಳಿದರು.

ಶಾಸಕ ಕೊತ್ತೂರು ಮಂಜುನಾಥ್‌, ‘ದಿಶಾ ಸಭೆಯಲ್ಲಿ ಅರಣ್ಯ ಇಲಾಖೆಯ ಚರ್ಚೆಗೆ ಸಮಯ ಸಾಲದು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಬಗ್ಗೆ ಸಭೆ ನಡೆಸಿ ಸುದೀರ್ಘವಾಗಿ ಚರ್ಚೆ ನಡೆಸೋಣ. ಯಾರದ್ದು ತಪ್ಪು ಕಂಡುಕೊಳ್ಳೋಣ’ ಎಂದು ಸಲಹೆ ನೀಡಿದರು.

ಶಾಸಕ ಕೆ.ವೈ.ನಂಜೇಗೌಡ, ಜಿಲ್ಲಾ ಪಂಚಾಯಿತಿ ಸಿಇಒ ಪ್ರವೀಣ್ ಪಿ.ಬಾಗೇವಾಡಿ, ಉಪಕಾರ್ಯದರ್ಶಿ ಟಿ.ಕೆ.ರಮೇಶ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಜಗದೀಶ್ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.

ರೈತರ ಮೇಲೆ ಹಾಕಿರುವ ಪ್ರಕರಣ ಹಿಂಪಡೆದು ಟ್ರ್ಯಾಕ್ಟರ್‌ ವಾಪಸು ‌ಕೊಡಬೇಕು. ಉಳುಮೆ ಮಾಡಲು ಅವಕಾಶ ಮಾಡಿಕೊಡಬೇಕು ಇಲ್ಲದಿದ್ದರೆ ಡಿಸಿಎಫ್ ಕಚೇರಿ ಮುಂದೆ ಧರಣಿ ನಡೆಸುತ್ತೇನೆ
ಎಸ್‌.ಎನ್‌.ನಾರಾಯಣಸ್ವಾಮಿ ಶಾಸಕ
ನ್ಯಾಯಬದ್ಧವಾಗಿರುವ ಜಮೀನನ್ನು ಒಬ್ಬ ಎಂಎಲ್‌ಸಿಯಾಗಿ ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ ಅರಣ್ಯ ಇಲಾಖೆಯಿಂದ ಅನ್ಯಾಯಕ್ಕೆ ಒಳಗಾಗಿರುವ ಜನರ ಸಮಸ್ಯೆಗೆ ಸ್ಪಂದಿಸುವುದು ಹೇಗೆ?
ಇಂಚರ ಗೋವಿಂದರಾಜು ವಿಧಾನ ಪರಿಷತ್‌ ಸದಸ್ಯ
ಅರಣ್ಯ ಜಮೀನ ಒತ್ತುವರಿ ತೆರವು ಮಾಡಿದರೆ ನಮಗೇನು ಕಿರೀಟ ಸಿಗಲ್ಲ. ನಮ್ಮ ಮೇಲೆ ಒತ್ತಡ ಹಾಕಬೇಡಿ. ಕಾನೂನಿನಂತೆ ನಾವು ನಡೆಯುತ್ತೇವೆ. ಬೇಕಾದರೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ
ಸರೀನಾ ಸಿಕ್ಕಲಿಗರ್‌ ಡಿಸಿಎಫ್‌
ಒತ್ತುವರಿ ತೆರವು ವಿಚಾರದಲ್ಲಿ ರೈತರು ಪ್ರತಿಭಟನೆ ಮಾಡಿದಾಗ ನಾನು ಸಭೆ ನಡೆಸಿದ್ದೆ. ರೈತರನ್ನು ಒಕ್ಕಲೆಬ್ಬಿಸಬಾರದೆಂದು ಸೂಚನೆ ನೀಡಿದ್ದೆ.‌ ಏಕೆಂದರೆ ಕೆಲವೆಡೆ ಜಂಟಿ ಸರ್ವೆ ಆಗಿರಲಿಲ್ಲ
ಎಂ.ಆರ್‌.ರವಿ ಜಿಲ್ಲಾಧಿಕಾರಿ

ಒಂದು ತಾಸು ಚರ್ಚೆ–ಡಿಸಿಎಫ್‌ಗೆ ಕೆಲವೇ ನಿಮಿಷ!

ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆಯಿಂದ ರೈತರಿಗೆ ಅನ್ಯಾಯವಾಗಿದೆ ಕಾನೂನು ಉಲ್ಲಂಘನೆ ಆಗಿದೆ ಎಂದು ಶಾಸಕರು ಒಬ್ಬರ ನಂತರ ಮತ್ತೊಬ್ಬರು ತಮ್ಮ ಆಕ್ರೋಶ ಹೊರಹಾಕುತ್ತಿದ್ದರು. ಸುಮಾರು ಒಂದು ತಾಸು ನಡೆದ ಚರ್ಚೆಯಲ್ಲಿ ಡಿಸಿಎಫ್‌ ಸರೀನಾ ಸಿಕ್ಕಲಿಗರ್‌ ಅವರಿಗೆ ಮಾತನಾಡಲು ಸಿಕ್ಕಿದ್ದು ಕೆಲವೇ ನಿಮಿಷಗಳು ಮಾತ್ರ. ಸರೀನಾ ಉತ್ತರ ನೀಡಲು ಮುಂದಾದರೆ ಮತ್ತೊಬ್ಬರು ಮಧ್ಯ ಪ್ರವೇಶಿಸಿ ಮಾತನಾಡುತ್ತಿದ್ದರು. ‘ನನಗೂ ಮಾತನಾಡಲು ಬಿಡಿ. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ’ ಎಂದು ಪದೇಪದೇ ಗೋಗರೆಯುತ್ತಿದ್ದರು. ಸಂಸದ ಮಲ್ಲೇಶ್‌ ಬಾಬು ಮಧ್ಯ ಪ್ರವೇಶಿಸಿ ‘ಬರೀ ನೀವೇ ಮಾತನಾಡುತ್ತಿದ್ದೀರಲ್ಲ. ಡಿಸಿಎಫ್‌ಗೂ ಮಾತನಾಡಲು ಅವಕಾಶ ಕೊಡಿ’ ಎಂದು ಕೇಳಿದರೂ ಹೆಚ್ಚು ಅವಕಾಶ ಸಿಗಲಿಲ್ಲ.

ಶಾಸಕರ ಕೆರಳಿಸಿದ ‘ರಿಯಲ್‌ ಎಸ್ಟೇಟ್‌ ಮಾಫಿಯಾ’!

ರೈತರ ಹೆಸರಿನಲ್ಲಿ ಅರಣ್ಯ ಪ್ರದೇಶವನ್ನು ರಿಯಲ್‌ ಎಸ್ಟೇಟ್‌ ಮಾಫಿಯಾದವರು ಅತಿಕ್ರಮಿಸಿಕೊಂಡಿದ್ದಾರೆ ಅಲ್ಲಿ ದಲಿತರು ರೈತರು ಇಲ್ಲ ಎಂದು ಡಿಸಿಎಫ್ ಸರೀನಾ ಸಿಕ್ಕಲಿಗರ್‌ ಹೇಳಿದ ಮಾತು ಶಾಸಕರಾದ ಎಸ್‌.ಎನ್‌.ನಾರಾಯಣಸ್ವಾಮಿ ಸಮೃದ್ಧಿ ಮಂಜುನಾಥ್‌ ಎಂಎಲ್‌ಸಿ ಇಂಚರ ಗೋವಿಂದರಾಜು ಅವರನ್ನು ಕೆರಳಿಸಿತು. ‘ಈ ಮಾತನ್ನು ಹೇಗೆ ಹೇಳುತ್ತೀರಿ? ತಮ್ಮಲ್ಲಿ ಏನು ಸಾಕ್ಷ್ಯವಿದೆ? ಈ ಮಾತನ್ನು ವಾಪಸ್‌ ಪಡೆಯಿರಿ’ ಎಂದು ಪಟ್ಟು ಹಿಡಿದರು. ‘ಒಬ್ಬ ಜಿಲ್ಲಾಮಟ್ಟದ ಅಧಿಕಾರಿಯಾಗಿ ಮಾತನಾಡುವ ರೀತಿಯೇ ಇದು? ರಿಯಲ್ ಎಸ್ಟೇಟ್ ಮಾಫಿಯಾ ಪದ ವಾಪಸ್ ಪಡೆಯಿರಿ’ ಎಂದು ನಾರಾಯಣಸ್ವಾಮಿ ಒತ್ತಾಯಿಸಿದರು. ಆ ಮಾತನ್ನು ವಾಪಸ್‌ ಪಡೆಯಬೇಕೆಂದು ಒತ್ತಾಯಿಸಿ ಇಂಚರ ಗೋವಿಂದರಾಜು ಸಭೆಯಿಂದ ನಿರ್ಗಮಿಸಲು ಮುಂದಾದರು.

ಬಿಡುವ ಪ್ರಶ್ನೆಯೇ ಇಲ್ಲ–ಡಿಸಿಎಫ್‌

ಸಭೆಯಲ್ಲಿ ಒಂದು ಕಡೆ ಶಾಸಕರು ಪಾಳಿಯಂತೆ ತಮ್ಮ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ ಇತ್ತ ಡಿಸಿಎಫ್‌ ಸರೀನಾ ಸಿಕ್ಕಲಿಗರ್‌ ‘ಅರಣ್ಯ ಕಾಯ್ದೆ ನ್ಯಾಯಾಲಯ ತೀರ್ಪುಗಳಂತೆ ಅರಣ್ಯ ಪ್ರದೇಶದಲ್ಲಿ ಒತ್ತುವರಿ ತೆರವುಗೊಳಿಸಿದ್ದು ವಶಪಡಿಸಿಕೊಂಡಿರುವ ಜಮೀನನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಹಿಂದೆ ಸರಿಯುವ ಪ್ರಮೇಯವೇ ಇ‌ಲ್ಲ’ ಎಂದು ತಿರುಗೇಟು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.