ಕೋಲಾರ: ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬುಧವಾರ ಹಾಗೂ ಗುರುವಾರ ಅದ್ದೂರಿಯಿಂದ ಗಣೇಶೋತ್ಸವ ನಡೆಯಿತು. ಯುವಕರು ಸಂಭ್ರಮದಿಂದ ಗಣೇಶ ಮೂರ್ತಿಯನ್ನು ಬರಮಾಡಿಕೊಂಡು ಪ್ರತಿಷ್ಠಾಪಿಸಿದರು.
ದೇಗುಲಗಳಲ್ಲಿ, ಯುವಕ ಮಂಡಲಿ, ಸಂಘ ಸಂಸ್ಥೆಗಳು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿವೆ. ಕೆಲವರು ಒಂದೇ ದಿನಕ್ಕೆ ಮೂರ್ತಿ ವಿಸರ್ಜಿಸಿದರೆ, ಇನ್ನು ಕೆಲವರು ಮತ್ತಷ್ಟು ದಿನ ಪೂಜಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ನಗರದ ಎಂ.ಜಿ.ರಸ್ತೆಯ ಗಾಂಧಿವನದಲ್ಲಿ ಧರ್ಮರಕ್ಷಣೆಯ ಸಂದೇಶ ಹೊತ್ತ ಬಾಲಗಂಗಾಧರ ತಿಲಕ್ ವಿನಾಯಕ ವಿಸರ್ಜನಾ ಸಮಿತಿಯು ಧರ್ಮಸ್ಥಳ ದೇಗುಲ ಮಾದರಿ ನಿರ್ಮಿಸಿ ಗಣಪನ ಪ್ರತಿಷ್ಠಾಪಿಸಿದೆ. ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆ ವೃತ್ತದಲ್ಲಿ ಅಖಂಡ ಭಾರತ ವಿನಾಯಕ ಸಭಾದಿಂದ ಆಪರೇಷನ್ ಸಿಂಧೂರದಡಿ ಸೈನಿಕ್ ವೇದಿಕೆಯಲ್ಲಿ 12ನೇ ವರ್ಷದ ಅದ್ದೂರಿ ಗಣೇಶೋತ್ಸವ ನಡೆಯಿತು.
ಬಜರಂಗದಳದ ಬಾಲಾಜಿ, ಬಾಬು, ಡಿ.ಆರ್.ನಾಗರಾಜ್, ವೆಂಕಟೇಶ್, ಬಿಆರ್‍ಎಂ ಸಂತೋಷ್, ಮಂಜುನಾಥ್, ವಿಶ್ವನಾಥ್, ರವಿ, ಶ್ರೀಧರ್, ವಿಶು, ಸಾಯಿಮೌಳಿ, ದೀಪು, ವಿಶಾಖ, ನಾಗೇಶ್ ಹಲವರು ನೇತೃತ್ವ ವಹಿಸಿದ್ದಾರೆ.
ಅಖಂಡ ಭಾರತ ವಿನಾಯಕ ಮಹಾಸಭಾದಿಂದ 12ನೇ ವರ್ಷದ ಗಣೇಶೋತ್ಸವ ನಡೆಯುತ್ತಿದ್ದು, ಈಚೆಗೆ ಆಪರೇಷನ್ ಸಿಂಧೂರ ಮೂಲಕ ದೇಶದ ಘನತೆ ಹೆಚ್ಚಿಸಿದ ವೀರ ಯೋಧರನ್ನು ಸ್ಮರಿಸಲಾಗುತ್ತಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ನೇತೃತ್ವದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಈ ಬಾರಿ ಕುದುರೆಗಳ ಮೇಲೆ ಕುಳಿತ ಗಣಪನ ಬೃಹತ್ ಮೂರ್ತಿಗಳನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಇಡೀ ದಿನ ಜನರು ಬಂದು ವೀಕ್ಷಣೆಯಲ್ಲಿ ತೊಡಗಿದ್ದು, ಪ್ರಸಾದ ವಿನಿಯೋಗ ನಡೆಯಿತು. ಸಂಸದ ಎಂ.ಮಲ್ಲೇಶ್ ಬಾಬು, ಮಾಜಿ ಸಂಸದ ಎಸ್.ಮುನಿಸ್ವಾಮಿ, ಮಾಜಿ ಸಚಿವ ವರ್ತೂರು ಪ್ರಕಾಶ್, ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್, ವೇಮಗಲ್ ಪಟ್ಟಣ ಪಂಚಾಯಿತಿ ಸದಸ್ಯ ಸಿ.ಎಸ್.ವೆಂಕಟೇಶ್, ಪತ್ರಕರ್ತ ಕೆ.ಎಸ್.ಗಣೇಶ್, ಮುಖಂಡರಾದ ಬೆಗ್ಲಿ ಪ್ರಕಾಶ್, ಮಲ್ಲಿಕಾಪ್ರಕಾಶ್, ಸಿ.ಡಿ ರಾಮಚಂದ್ರೇಗೌಡ, ಮೆಸ್ ಚಲಪತಿ ಮಧು, ಸಾಮಾ ಬಾಬು, ನಾಮಾಲ ಮಂಜು, ಅಪ್ಪಿ ನಾರಾಯಣಸ್ವಾಮಿ, ವಕೀಲ ನಾಗೇಂದ್ರ ಪಾಲ್ಗೊಂಡಿದ್ದರು.
ನಗರದ ಕೋಟೆಯ ಲಕ್ಷ್ಮಿ ಗಣಪತಿ ದೇವಾಲಯದಲ್ಲಿ, ಕೆಇಬಿ ಕಾಲೋನಿಯ ವಿದ್ಯಾಗಣಪತಿ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಗಣೇಶೋತ್ಸವದ ಅಂಗವಾಗಿ ವಿಶೇಷ ಪೂಜೆ ನಡೆಯಿತು.
ನಗರದ ವಿವಿಧೆಡೆಗಳಲ್ಲಿ ವಿಶಿಷ್ಟ ರೀತಿಯ ಗಣಪನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಕೃಷ್ಣ ವೇಷಧಾರಿ ಕೊಳಲು ಹಿಡಿದ ಗಣಪ, ಅಯ್ಯಪ್ಪ ಸ್ವಾಮಿ ಗಣಪ, ಬಾಲಾಜಿ ರೂಪಿ ಗಣಪ, ಕಮಲದ ಮೇಲೆ ನಿಂತ ನಾಟ್ಯ ಗಣಪ, ಗೋಲ್ಡನ್ ಗಣಪ, ಕೈಲಾಸಹೊತ್ತ ಗಣಪ ಸೇರಿದಂತೆ ವಿವಿಧ ರೂಪದ ಗಣಪಗಳನ್ನು ಪ್ರತಿಷ್ಠಾಪಿಸಲಾಗಿದೆ.
ಕೆಲವು ಬಡಾವಣೆಯ ಯುವಕರು ಪ್ರತಿಷ್ಠಾಪಿಸಿದ ದಿನವೇ ಮೂರ್ತಿಯ ಮೆರವಣಿಗೆ ನಡೆಸಿ ಮೂರ್ತಿಗಳನ್ನು ವಿಸರ್ಜಿಸಿದರು. ಜಯನಗರ 7ನೇ ಕ್ರಾಸ್‍ನ ಯುವಕರು ಕೇರಳದ ಕಲಾವಿದರನ್ನು ಮೆರವಣಿಗೆಯಲ್ಲಿ ಬಳಸಿಕೊಂಡಿದ್ದು ವಿಶೇಷವಾಗಿತ್ತು.
ಗಣೇಶನ ವಿಸರ್ಜನೆಗೆ ಈ ಬಾರಿಯೂ ಕೋಲಾರಮ್ಮ ಕೆರೆ ಪಕ್ಕ ನಿರ್ಮಿಸಿರುವ ಬೃಹತ್ ನೀರಿನ ಹೊಂಡದಲ್ಲಿ ವ್ಯವಸ್ಥೆ ಮಾಡಲಾಗಿದೆ. ಬೃಹತ್ ಗಣಪನ ಮೂರ್ತಿಗಳ ವಿಸರ್ಜನೆಗೆ ಕ್ರೈನ್ ಅಳವಡಿಸಿದ್ದು, ನಗರದ ವಿವಿಧ ಬಡಾವಣೆಗಳಲ್ಲಿ ಇಟ್ಟ ಮೂರ್ತಿಗಳನ್ನು ಗುರುವಾರವೇ ಕೆಲವು ಕಡೆಗಳಲ್ಲಿ ವಿಸರ್ಜಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.