ಕೋಲಾರ: ನಗರ ಮತ್ತು ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣಪನ ಮೂರ್ತಿಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆ ಶುಕ್ರವಾರ ಅದ್ದೂರಿಯಾಗಿ ನಡೆಯಿತು.
ವಿವಿಧ ಸಂಘಟನೆಗಳು, ಯುವಕ ಸಂಘಗಳು, ವಿವಿಧ ಬಡಾವಣೆಗಳಲ್ಲಿಟ್ಟಿದ್ದ ಗಣಪನ ಮೂರ್ತಿಗಳನ್ನು ಗಾಂಧಿವನದಿಂದ ಎಂ.ಜಿ.ರಸ್ತೆ ಮೂಲಕ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ಶ್ರದ್ಧಾಭಕ್ತಿ, ಅಭಿಮಾನಿಗಳ ಅಬ್ಬರ, ಜನಜಂಗುಳಿಗೆ ಈ ಮೆರವಣಿಗೆ ಸಾಕ್ಷಿಯಾಯಿತು.
ನಗರದ ಎಂ.ಜಿ.ರಸ್ತೆಯ ಗಾಂಧಿವನದಲ್ಲಿ ಧರ್ಮರಕ್ಷಣೆಯ ಸಂದೇಶ ಹೊತ್ತ ಬಾಲಗಂಗಾಧರ ತಿಲಕ್ ವಿನಾಯಕ ವಿಸರ್ಜನಾ ಸಮಿತಿಯಿಂದ ಪ್ರತಿಷ್ಠಾಪಿಸಿದ್ದ ಗಣೇಶ ವಿಗ್ರಹವನ್ನು ವಿಸರ್ಜಿಸಲಾಯಿತು. ಬಜರಂಗದಳದ ಮುಖಂಡರು ನೇತೃತ್ವ ವಹಿಸಿದ್ದರು.
ಗಣೇಶನ ವಿಸರ್ಜನೆಗೆ ಈ ಬಾರಿಯೂ ಕೋಲಾರಮ್ಮ ಕೆರೆ ಪಕ್ಕ ನಿರ್ಮಿಸಿರುವ ಬೃಹತ್ ನೀರಿನ ಹೊಂಡದಲ್ಲಿ ವ್ಯವಸ್ಥೆ ಮಾಡಲಾಗಿದೆ. ಬೃಹತ್ ಗಣಪನ ಮೂರ್ತಿಗಳ ವಿಸರ್ಜನೆಗೆ ಕ್ರೈನ್ ಅಳವಡಿಸಲಾಗಿದೆ. ನಗರದ ವಿವಿಧ ಬಡಾವಣೆಗಳಲ್ಲಿ ಇಟ್ಟ ಮೂರ್ತಿಗಳನ್ನು ವಿಸರ್ಜಿಸಲಾಯಿತು. ಕೆಲವರು ಒಂದೇ ದಿನಕ್ಕೆ ಮೂರ್ತಿ ವಿಸರ್ಜಿಸಿದರೆ, ಇನ್ನು ಕೆಲವರು ಮತ್ತಷ್ಟು ದಿನ ಪೂಜಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಹಲವೆಡೆ ಬ್ಯಾರಿಕೇಡ್‍ಗಳನ್ನು ಹಾಕಿ ತಾತ್ಕಾಲಿಕವಾಗಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.