ADVERTISEMENT

ಗಣೇಶ ಮೂರ್ತಿ ಮೆರವಣಿಗೆ: ಕಲ್ಲು ತೂರಾಟ

ನಗರದೆಲ್ಲೆಡೆ ಪೊಲೀಸ್‌ ಕಟ್ಟೆಚ್ಚರ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 14:39 IST
Last Updated 6 ಸೆಪ್ಟೆಂಬರ್ 2019, 14:39 IST
ಕೋಲಾರದ ಅಮ್ಮವಾರಿಪೇಟೆ ವೃತ್ತದಲ್ಲಿ ಗುರುವಾರ ರಾತ್ರಿ ಗಣೇಶ ಮೂರ್ತಿಗಳ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದ್ದು, ಘಟನೆಯಲ್ಲಿ ಮೂರ್ತಿಯ ಕಣ್ಣಿನ ಭಾಗಕ್ಕೆ ಹಾನಿಯಾಗಿರುವುದು.
ಕೋಲಾರದ ಅಮ್ಮವಾರಿಪೇಟೆ ವೃತ್ತದಲ್ಲಿ ಗುರುವಾರ ರಾತ್ರಿ ಗಣೇಶ ಮೂರ್ತಿಗಳ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದ್ದು, ಘಟನೆಯಲ್ಲಿ ಮೂರ್ತಿಯ ಕಣ್ಣಿನ ಭಾಗಕ್ಕೆ ಹಾನಿಯಾಗಿರುವುದು.   

ಕೋಲಾರ: ನಗರದಲ್ಲಿ ಗುರುವಾರ ತಡರಾತ್ರಿ ಗಣೇಶ ಮೂರ್ತಿಗಳ ಮೆರವಣಿಗೆ ವೇಳೆ ಎರಡು ಕೋಮುಗಳ ಯುವಕರ ನಡುವೆ ಘರ್ಷಣೆಯಾಗಿ ಕಲ್ಲು ತೂರಾಟ ನಡೆದಿದ್ದು, ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.

ಗಂಗಮ್ಮ ಪಾಳ್ಯದಿಂದ ಬಂಬೂ ಬಜಾರ್‌ ರಸ್ತೆ ಮಾರ್ಗವಾಗಿ ಕೋಲಾರಮ್ಮ ಕೆರೆ ಅಂಗಳದ ಪುಷ್ಕರಣಿವರೆಗೆ ಗಣೇಶ ಮೂರ್ತಿಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತಿತ್ತು. ಮೆರವಣಿಗೆ ಅಮ್ಮವಾರಿಪೇಟೆ ವೃತ್ತಕ್ಕೆ ಬಂದಾಗ ಒಂದು ಕೋಮಿನ ಯುವಕರ ಗುಂಪು ಕಲ್ಲು ತೂರಾಟ ನಡೆಸಿದೆ. ಇದರಿಂದ ಗಣೇಶ ಮೂರ್ತಿಯ ಕಣ್ಣಿನ ಭಾಗಕ್ಕೆ ಹಾನಿಯಾಯಿತು.

ಇದರಿಂದ ಆಕ್ರೋಶಗೊಂಡ ಮತ್ತೊಂದು ಕೋಮಿನ ಯುವಕರು ಎದುರಾಳಿ ಗುಂಪಿನ ಮೇಲೆ ಕಲ್ಲು ತೂರಿದ್ದಾರೆ. ಬಳಿಕ ಎರಡೂ ಕೋಮುಗಳ ಯುವಕರ ನಡುವೆ ಜಟಾಪಟಿ ನಡೆದು ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು. ಘಟನೆಯಲ್ಲಿ ಗಾಯಗೊಂಡ ಯುವಕರ ಗುಂಪು ಗಣೇಶ ಮೂರ್ತಿ ಮೇಲೆ ಕಲ್ಲು ತೂರಾಟ ನಡೆಸಿದವರನ್ನು ಬಂಧಿಸುವಂತೆ ಒತ್ತಾಯಿಸಿ ಇಟಿಸಿಎಂ ವೃತ್ತದಲ್ಲಿ ರಸ್ತೆ ತಡೆ ಮಾಡಿತು.

ADVERTISEMENT

ಹೀಗಾಗಿ ಮೆರವಣಿಗೆ ಸ್ಥಗಿತಗೊಂಡು ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿತು. ಪೊಲೀಸರ ಮನವೊಲಿಕೆಗೆ ಜಗ್ಗದ ಯುವಕರ ಗುಂಪು ಅಹೋರಾತ್ರಿ ಧರಣಿ ನಡೆಸಿತು. ಈ ವೇಳೆ ಪೊಲೀಸರು ಮತ್ತು ಧರಣಿನಿರತರ ನಡುವೆ ವಾಗ್ವಾದ ನಡೆಯಿತು. ಗಣೇಶ ಮೂರ್ತಿ ಮೆರವಣಿಗೆಯ ಟ್ರ್ಯಾಕ್ಟರ್‌ಗಳು ಕಿಲೋ ಮೀಟರ್‌ಗಟ್ಟಲೇ ಸಾಲುಗಟ್ಟಿ ನಿಂತವು. ಬಳಿಕ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ತಪ್ಪಿತಸ್ಥರನ್ನು ಬಂಧಿಸುವ ಭರವಸೆ ನೀಡಿ ಧರಣಿನಿರತರ ಮನವೊಲಿಸಿದರು.

ನಂತರ ಮೆರವಣಿಗೆ ಮುಂದುವರಿಸಿ ಕೋಲಾರಮ್ಮ ಕೆರೆ ಅಂಗಳದ ಪುಷ್ಕರಣಿಯಲ್ಲಿ ರಾತ್ರಿ 1 ಗಂಟೆ ಸುಮಾರಿಗೆ ಗಣೇಶ ಮೂರ್ತಿಗಳನ್ನು ಸಾಮೂಹಿಕವಾಗಿ ವಿಸರ್ಜನೆ ಮಾಡಲಾಯಿತು.

ಐಜಿಪಿ ಪರಿಶೀಲನೆ: ನಗರದೆಲ್ಲೆಡೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ. ಕೇಂದ್ರ ವಲಯ ಐಜಿಪಿ ಕೆ.ವಿ.ಶರತ್‌ಚಂದ್ರ ನಗರಕ್ಕೆ ಶುಕ್ರವಾರ ಭೇಟಿ ನೀಡಿ ಕಾನೂನು ಸುವ್ಯವಸ್ಥೆ ಪರಿಶೀಲಿಸಿದ್ದು, ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.

ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿದ ಶರತ್‌ಚಂದ್ರ ಘಟನೆಯ ಮಾಹಿತಿ ಪಡೆದರು. ನಗರದಲ್ಲಿ ಮೂರ್ನಾಲ್ಕು ದಿನಗಳ ಕಾಲ ಗಣೇಶ ಮೂರ್ತಿಗಳ ಮೆರವಣಿಗೆ ಮತ್ತು ವಿಸರ್ಜನೆ ನಡೆಯುವುದರಿಂದ ಯಾವುದೇ ಅಹಿತಕರ ಘಟನೆ ಜರುಗದಂತೆ ಎಚ್ಚರ ವಹಿಸಬೇಕೆಂದು ಅಧಿಕಾರಿಗಳಿಗೆ ಆದೇಶಿಸಿದರು.

ಕ್ಯಾಮೆರಾದಲ್ಲಿ ಸೆರೆ: ಅಮ್ಮವಾರಿಪೇಟೆ ವೃತ್ತದಲ್ಲಿನ ಸಿ.ಸಿ ಕ್ಯಾಮೆರಾದಲ್ಲಿ ಕಲ್ಲು ತೂರಾಟದ ದೃಶ್ಯಾವಳಿ ಸೆರೆಯಾಗಿದೆ. ಪೊಲೀಸರು ಈ ದೃಶ್ಯಾವಳಿ ಪರಿಶೀಲಿಸಿ ಮೂವರು ಯುವಕರನ್ನು ಬಂಧಿಸಿದ್ದಾರೆ. ಘಟನೆ ಸಂಬಂಧ ಕಾನೂನುಬಾಹಿರವಾಗಿ ಗುಂಪುಗೂಡುವಿಕೆ, ಅಪರಾಧ ಸಂಚು, ಹಲ್ಲೆ, ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿ ಗಲ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.