ADVERTISEMENT

ಕಾನೂನು ಅರಿವು ಪಡೆದುಕೊಳ್ಳಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 15:33 IST
Last Updated 8 ನವೆಂಬರ್ 2019, 15:33 IST

ಕೋಲಾರ: ‘ವಿದ್ಯಾರ್ಥಿಗಳು ಕಾನೂನಿನ ಅರಿವು ಪಡೆಯುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕು’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್ ಸಲಹೆ ನೀಡಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಇಲ್ಲಿನ ನಗರದ ಗೋಕುಲ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿ, ‘ಕಾನೂನಿನಲ್ಲಿ ಯಾವುದೇ ಭೇದವಿಲ್ಲ. ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು- ಮತ್ತು ಗಂಡು ಮಕ್ಕಳಿಗೆ ಸಮ ಪಾಲಿದೆ’ ಎಂದು ತಿಳಿಸಿದರು.

‘ಕಾನೂನಿನ ಅರಿವಿನ ಕೊರತೆಯಿಂದ ಅನೇಕ ತಪ್ಪು ಮಾಡಿ ನಂತರ ತಮಗೆ ಗೊತ್ತಿಲ್ಲ ಎಂದು ಉತ್ತರ ನೀಡುತ್ತಾರೆ. ಆದರೆ, ಕಾನೂನು ಅದನ್ನು ಒಪ್ಪುವುದಿಲ್ಲ. ಸಾಮಾನ್ಯ ಕಾನೂನುಗಳ ಬಗ್ಗೆ ಅಧ್ಯಯನ ಮಾಡಿ ಇತರರಿಗೂ ತಿಳಿಸಿ’ ಎಂದು ಕಿವಿಮಾತು ಹೇಳಿದರು.

ADVERTISEMENT

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಟಿ.ಆರ್.ಜಯರಾಮ್‌ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಯುವಕರು ಸಂಚಾರ ನಿಯಮ ಉಲ್ಲಂಘಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಇದರಿಂದ ಅಪಘಾತ ಸಂಭವಿಸುತ್ತಿವೆ. ಇದಕ್ಕೆ ಪೋಷಕರು ಅವಕಾಶ ನೀಡಬಾರದು’ ಎಂದು ತಿಳಿಸಿದರು.

‘ಸಂಚಾರ ನಿಮಯಗಳನ್ನು ಪ್ರತಿ ಹಂತದಲ್ಲೂ ಕಠಿಣಗೊಳಿಸಲಾಗಿದೆ. ಈ ಬಗ್ಗೆ ಅರಿವು ಪಡೆದುಕೊಂಡು ಕಡ್ಡಾಯವಾಗಿ ಚಾಲನಾ ಪರವಾನಗಿ ಮತ್ತು ವಿಮೆ ಮಾಡಿಸಬೇಕು. ಹೆಲ್ಮೆಟ್ ಬಳಕೆ ಮಾಡಬೇಕು’ ಎಂದು ಸಲಹೆ ನೀಡಿದರು.

ಜಾಗೃತಿ ಸೇವಾ ಸಂಸ್ಥೆ ಅಧ್ಯಕ್ಷ ಕೆ.ಆರ್.ಧನರಾಜ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಂ.ಎ.ಚಾರಿಣಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪ್ರೇಮಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.