ADVERTISEMENT

ಮಾಜಿ ಯೋಧರಿಗೆ ಭೂಮಿ ನೀಡಿ

ರೈತ ಸಂಘದ ಪ್ರತಿನಿಧಿಗಳಿಂದ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 4:43 IST
Last Updated 16 ಸೆಪ್ಟೆಂಬರ್ 2022, 4:43 IST
ಕೋಲಾರದಲ್ಲಿ ಮಾಜಿ ಸೈನಿಕರಿಗೆ ಸೌಲಭ್ಯ ದೊರಕಿಸಿ ಕೊಡುವಂತೆ ಆಗ್ರಹಿಸಿ ರೈತ ಸಂಘದ ಪ್ರತಿನಿಧಿಗಳು ಗುರುವಾರ ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಕೋಲಾರದಲ್ಲಿ ಮಾಜಿ ಸೈನಿಕರಿಗೆ ಸೌಲಭ್ಯ ದೊರಕಿಸಿ ಕೊಡುವಂತೆ ಆಗ್ರಹಿಸಿ ರೈತ ಸಂಘದ ಪ್ರತಿನಿಧಿಗಳು ಗುರುವಾರ ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಕೋಲಾರ: ದೇಶಕ್ಕಾಗಿ ತಮ್ಮ ಜೀವವನ್ನೇಮುಡುಪಾಗಿಟ್ಟಿರುವ ಮಾಜಿ ಸೈನಿಕರಿಗೆ ಭೂ ಮಂಜೂರಾತಿ ಮಾಡುವಂತೆ ಆಗ್ರಹಿಸಿ ರೈತ ಸಂಘದ ಪ್ರತಿನಿಧಿಗಳು ಗುರುವಾರ ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.

‘ದೇಶ ಕಾಯುವ ಯೋಧ, ಅನ್ನ ಹಾಕುವ ರೈತರನ್ನು ಸರ್ಕಾರಗಳು ನಿರ್ಲಕ್ಷ್ಯ ಮಾಡುತ್ತಾ ಬರುತ್ತಿವೆ. ಅತಿವೃಷ್ಟಿ, ಅನಾವೃಷ್ಟಿಯಾದಾಗ ಪರಿಹಾರಕ್ಕಾಗಿ ರೈತರು ಕಚೇರಿಗಳಿಗೆ ಅಲೆದಾಡಿದರೆ, ಮಾಜಿ ಯೋಧರು ಜಮೀನಿಗಾಗಿ ಕಚೇರಿ ಸುತ್ತಬೇಕಾಗಿದೆ. ಯೋಧರ ಸಮಸ್ಯೆ ಬಗೆಹರಿಸುವಲ್ಲಿ ಜಿಲ್ಲೆಯ ಕಂದಾಯ ಅಧಿಕಾರಿಗಳು ವಿಫಲವಾಗಿದ್ದಾರೆ’ ಎಂದು ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡಆಕ್ರೋಶ ವ್ಯಕ್ತಪಡಿಸಿದರು.

‘ಶೇ 90ರಷ್ಟು ಸೈನಿಕರ ಕೈ ಸೇರಿಲ್ಲ. ಎರಡು ದಶಕಗಳಿಂದ ಸರ್ಕಾರ ಹುಸಿ ಭರವಸೆ ನೀಡುತ್ತಲೇ ಬರುತ್ತಿವೆ. ಸೇವೆಯಲ್ಲಿದ್ದಾಗ ಹುತಾತ್ಮರಾದರೆ ಅಥವಾ ನಿವೃತ್ತರಾದರೆ ಸರ್ಕಾರದಿಂದ 4 ಎಕರೆ 18 ಗುಂಟೆ ಕೃಷಿ ಭೂಮಿ ನೀಡಬೇಕು’ ಎಂದರು.

ADVERTISEMENT

ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ, ‘ಯುದ್ಧ ಭೂಮಿಯಲ್ಲಿ ಹೋರಾಡಿ ಗೆಲ್ಲಬಹುದು. ಆದರೆ, ಭ್ರಷ್ಟಾಚಾರದ ಮಧ್ಯೆ ಸಿಲುಕಿರುವ ವ್ಯವಸ್ಥೆ ವಿರುದ್ಧ ಹೋರಾಡಿ ಗೆಲ್ಲಲು ಸಾಧ್ಯವಿಲ್ಲ’ ಎಂದು ಅಸಮಾಧಾನ
ವ್ಯಕ್ತಪಡಿಸಿದರು.

‘ಜಿಲ್ಲೆಯಾದ್ಯಂತ ಸಾವಿರಾರು ಎಕರೆ ಗೋಮಾಳಕ್ಕೆ ಅಕ್ರಮ ದಾಖಲೆ ಸೃಷ್ಟಿಸಿ ಜನಪ್ರತಿನಿಧಿಗಳು, ರಿಯಲ್‌ ಎಸ್ಟೇಟ್‌ ದಂಧೆಕೋರರು ಕೋಟಿ ಕೋಟಿಗೆ ಮಾರಾಟ ಮಾಡುತ್ತಿದ್ದಾರೆ. ಇಂತಹವರಿಗೆ ಭೂಮಿ ಸಿಗುತ್ತದೆ. ಆದರೆ, ನಿಜವಾದ ಹೀರೊ ಎನಿಸಿರುವ ಯೋಧರಿಗೆ ಸಿಗುತ್ತಿಲ್ಲ’ ಎಂದರು.

ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷ ಎ. ನಳಿನಿಗೌಡ, ಜಿಲ್ಲಾ ಅಧ್ಯಕ್ಷ ಈಕಂಬಳ್ಳಿ ಮಂಜುನಾಥ, ಮುಖಂಡರಾದ ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಯಲ್ಲಣ್ಣ, ತೆರ್ನಹಳ್ಳಿ ಆಂಜಿನಪ್ಪ, ಕೋಟೆ ಶ್ರೀನಿವಾಸ್, ಚಂದ್ರಪ್ಪ, ಪುತ್ತೇರಿ ರಾಜು, ಹರೀಶ್, ಸಂದೀಪ್‍ ರೆಡ್ಡಿ, ರಾಮಸಾಗರ ವೇಣು, ಕಿರಣ್, ಚಾಂದ್‍ಪಾಷ, ಪಾರುಕ್‍ಪಾಷ, ಸುನಿಲ್ ಕುಮಾರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.