ADVERTISEMENT

ಗುಡ್‌ ಫ್ರೈಡೇ: ಸಾಮೂಹಿಕ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 15:12 IST
Last Updated 19 ಏಪ್ರಿಲ್ 2019, 15:12 IST
ಗುಡ್‌ ಫ್ರೈಡೇ ಅಂಗವಾಗಿ ಕೋಲಾರ ತಾಲ್ಲೂಕಿನ ಬೆತ್ತನಿ ಗ್ರಾಮದ ಚರ್ಚ್‌ನಲ್ಲಿ ಶುಕ್ರವಾರ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಕ್ರೈಸ್ತ ಸಮುದಾಯವರು ಪಾಲ್ಗೊಂಡರು.
ಗುಡ್‌ ಫ್ರೈಡೇ ಅಂಗವಾಗಿ ಕೋಲಾರ ತಾಲ್ಲೂಕಿನ ಬೆತ್ತನಿ ಗ್ರಾಮದ ಚರ್ಚ್‌ನಲ್ಲಿ ಶುಕ್ರವಾರ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಕ್ರೈಸ್ತ ಸಮುದಾಯವರು ಪಾಲ್ಗೊಂಡರು.   

ಕೋಲಾರ: ನಗರದಲ್ಲಿ ಕ್ರೈಸ್ತ ಸಮುದಾಯವರು ಶುಕ್ರವಾರ ‘ಗುಡ್‌ ಫ್ರೈಡೇ’ಯನ್ನು ಶ್ರದ್ಧಾ–­ಭಕ್ತಿಯಿಂದ ಆಚರಿಸಿದರು. ಮೆಥೋಡಿಸ್ಟ್ ಹಾಗೂ ಕ್ಯಾಥೊಲಿಕ್ ಚರ್ಚ್‌ನಲ್ಲಿ ಏಸು ಆರಾಧಕರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

‘ಏಸು ಮನುಷ್ಯನ ಪಾಪ ಪರಿಹಾರಕ್ಕಾಗಿ ತನ್ನನ್ನು ತಾನೇ ಬಲಿಯಾಗಿ ಸಮರ್ಪಿಸಿಕೊಂಡನು. ತಾನು ಶಿಲುಬೆಯಲ್ಲಿ ಪ್ರಾಣ ಬಿಡುವಾಗ ಆಡಿದ 7 ಮಾತುಗಳನ್ನು ಪ್ರತಿಯೊಬ್ಬರು ಸ್ಮರಿಸಬೇಕು’ ಎಂದು ಮೆಥೋಡಿಸ್ಟ್‌ ಚರ್ಚ್‌ನ ಮೇಲ್ವಿಚಾರಕ ರೆವರೆಂಡ್ ಆನಂದ ಹೊಸೂರ್ ಭೋದಿಸಿದರು.

‘ಸಮಾಜದಲ್ಲಿ ಕೊಲೆ, ಸುಲಿಗೆ, ವ್ಯಭಿಚಾರ ಹೆಚ್ಚಾಗಿದೆ. ಮತ್ತೊಬ್ಬರ ಹಿತ ಕಾಯುವ ವ್ಯಕ್ತಿಗಳು ಸಿಗುವುದೇ ಕಡಿಮೆ. ಇಂತಹ ಸ್ಥಿತಿಯಲ್ಲಿ ಯೇಸು ತನ್ನ ಪ್ರಾಣ ಹೋಗುತ್ತಿರುವಾಗಲೂ ಮನುಷ್ಯನನ್ನು ಕ್ಷಮಿಸಿದ ವಿಷಯ ಗಂಭೀರವಾದದ್ದು’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಕ್ರೈಸ್ತರಿಗೆ ಗುಡ್‌ ಫ್ರೈಡೇಯು ಬಹಳ ಶ್ರೇಷ್ಠವಾದದ್ದು. ಏಸು ಪ್ರೀತಿ ತ್ಯಾಗದ ಸಂಕೇತವಾಗಿದ್ದಾನೆ. ಮಾನವನ ಹಿತಕ್ಕಾಗಿ ಬಂದ ಯೇಸುವನ್ನು ಯೆಹೂದಿಗಳು ವಿನಾಕಾರಣ ಕೊಲ್ಲುತ್ತಾರೆ. ಆದರೆ, ಏಸು ಅದಕ್ಕೆ ವಿರೋಧವಾಗಿ ಮಾತನಾಡದೆ ಎಲ್ಲವನ್ನೂ ಸಹಿಸಿಕೊಳ್ಳುತ್ತಾನೆ. ಆತನನ್ನು ಕೊಂದವರನ್ನೇ ಕ್ಷಮಿಸು ಎಂದು ದೇವರನ್ನು ಬೇಡಿಕೊಂಡ ಸಂಗತಿ ಇಂದಿನ ಪ್ರಾರ್ಥನೆಯಲ್ಲಿ ವಿಶೇಷವಾಗಿರುತ್ತದೆ’ ಎಂದು ವಿವರಿಸಿದರು.

ತಾಲ್ಲೂಕಿನ ಬೆತ್ತನಿ ಗ್ರಾಮ ಚರ್ಚ್‌ನಲ್ಲಿ ಫಾದರ್ ಜೇಮ್ಸ್ ಧರ್ಮ ಸಂದೇಶ ನೀಡಿದರು. ನಗರದ ಮೇರಿಯಮ್ಮ, ತಾಲ್ಲೂಕಿನ ನಡುಪಲ್ಲಿ, ವಡಗೂರು, ಮಂಗಸಂದ್ರ, ಈಲಂ ಚರ್ಚ್‌ಗಳಲ್ಲಿ ಗುಡ್‌ ಫ್ರೈಡೇ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಪ್ರಾರ್ಥನೆ ನಂತರ ಸಮುದಾಯದವರಿಗೆ ಮಜ್ಜಿಗೆ, ಪಾನಕ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.