ADVERTISEMENT

ಸರ್ಕಾರಿ ನೌಕರರ ಸಂಘ ದುರ್ಬಲ

ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಿ: ಸಭೆಯಲ್ಲಿ ಜಿಲ್ಲಾಧಿಕಾರಿ ಸಲಹೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2019, 14:49 IST
Last Updated 17 ಡಿಸೆಂಬರ್ 2019, 14:49 IST
ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಕ್ರೀಡಾಕೂಟ ಆಯೋಜನೆ ಸಂಬಂಧ ಕೋಲಾರದಲ್ಲಿ ಮಂಗಳವಾರ ಜಿಲ್ಲಾ ಸರ್ಕಾರಿ ನೌಕರರ ಸಂಘ ಪದಾಧಿಕಾರಿಗಳ ಸಭೆ ನಡೆಸಿದರು.
ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಕ್ರೀಡಾಕೂಟ ಆಯೋಜನೆ ಸಂಬಂಧ ಕೋಲಾರದಲ್ಲಿ ಮಂಗಳವಾರ ಜಿಲ್ಲಾ ಸರ್ಕಾರಿ ನೌಕರರ ಸಂಘ ಪದಾಧಿಕಾರಿಗಳ ಸಭೆ ನಡೆಸಿದರು.   

ಕೋಲಾರ: ‘ಜಿಲ್ಲಾ ಸರ್ಕಾರಿ ನೌಕರರ ಸಂಘ ದುರ್ಬಲ ಆಗಿದ್ದೇಕೆ? ನಿಮ್ಮಲ್ಲಿನ ಭಿನ್ನಾಭಿಪ್ರಾಯವನ್ನು ಪರಸ್ಪರ ಮಾತುಕತೆಯಿಂದ ಬಗೆಹರಿಸಿಕೊಳ್ಳಿ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಕಿವಿಮಾತು ಹೇಳಿದರು.

ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟ ಆಯೋಜನೆ ಸಂಬಂಧ ಇಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಒಡಕಿನ ವಿಚಾರ ಪ್ರಸ್ತಾಪಿಸಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಎಂ.ಎಲ್.ದೇವಿಕಾ, ‘ಸರ್ಕಾರಿ ನೌಕರರ ಸಂಘದಲ್ಲಿ 2 ಗುಂಪುಗಳಾಗಿವೆ’ ಎಂದರು.

‘ಅಡಾಕ್ ಸಮಿತಿ ಪದಾಧಿಕಾರಿಗಳು ಸಭೆಗೆ ಬಂದರೆ ತಾವು ಬರುವುದಿಲ್ಲ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕ್ ಹೇಳಿದ್ದಾರೆ’ ಎಂದು ದೇವಿಕಾ ತಿಳಿಸಿದರು.

ADVERTISEMENT

ಇದಕ್ಕೆ ಸಿಡಿಮಿಡಿಗೊಂಡ ಅಡಾಕ್ ಸಮಿತಿ ಗೌರವಾಧ್ಯಕ್ಷ ರವಿಚಂದ್ರ, ‘ನಮ್ಮದು ಅನಧಿಕೃತ ಸಂಘವಲ್ಲ. ನಮ್ಮ ಸಮಿತಿಗೆ ರಾಜ್ಯ ಸಮಿತಿ ಕಾರ್ಯದರ್ಶಿ, 4 ತಾಲ್ಲೂಕುಗಳ ಅಧ್ಯಕ್ಷರು ಸೇರಿದಂತೆ 50ಕ್ಕೂ ಹೆಚ್ಚು ಸದಸ್ಯರ ಬೆಂಬಲವಿದೆ. ನಿಯಮಾವಳಿ ಪ್ರಕಾರ ಅಡಾಕ್‌ ಸಮಿತಿ ರಚಿಸಿಕೊಂಡಿದ್ದೇವೆ’ ಎಂದು ಹೇಳಿದರು.

‘ಅಶೋಕ್‌ರ ಸರ್ವಾಧಿಕಾರಿ ಧೋರಣೆಯಿಂದ ಸಂಘ ಇಬ್ಭಾಗವಾಗಿದೆ. ತಾಲ್ಲೂಕು ಅಧ್ಯಕ್ಷರಿಗೆ ಮಾನ್ಯತೆ ನೀಡುತ್ತಿಲ್ಲ. ನೌಕರರ ಹಿತ ಕಾಯುವಲ್ಲಿ ಅಧ್ಯಕ್ಷ ಅಶೋಕ್‌ ವಿಫಲರಾಗಿದ್ದಾರೆ. ಕ್ರೀಡಾಕೂಟ ಆಯೋಜನೆಗೆ ನಮ್ಮ ವಿರೋಧವಿಲ್ಲ. ಆದರೆ, ಕ್ರೀಡಾಕೂಟದ ಬಗ್ಗೆ ವ್ಯಾಪಕ ಪ್ರಚಾರವಿಲ್ಲದೆ ಸಿದ್ಧತೆ ಮಾಡಿಕೊಂಡಿಲ್ಲ’ ಎಂದು ವಿವರಿಸಿದರು.

‘ಮುಳಬಾಗಿಲು, ಕೆಜಿಎಫ್, ಬಂಗಾರಪೇಟೆ ಮತ್ತು ಮಾಲೂರು ತಾಲ್ಲೂಕು ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು, ಕ್ರೀಡಾಪಟುಗಳು ಕ್ರೀಡಾಕೂಟ ಮುಂದೂಡುವಂತೆ ಮನವಿ ಮಾಡಿದ್ದಾರೆ. ಹೀಗಾಗಿ ಡಿ.20 ಮತ್ತು ಡಿ.21ರಂದು ನಡೆಸಲು ಉದ್ದೇಶಿಸಿರುವ ಕ್ರೀಡಾಕೂಟ ಮುಂದೂಡಬೇಕು’ ಎಂದು ಒತ್ತಾಯಿಸಿದರು.

ಕ್ರೀಡಾಕೂಟ ನಡೆಯಲಿ: ‘ಸರ್ಕಾರಿ ನೌಕರರ ಸಂಘದ ರಾಜ್ಯ ಮಟ್ಟದ ಕ್ರೀಡಾಕೂಟ 2020ರ ಜನವರಿ ಕೊನೆಯ ವಾರ ನಡೆಯಬಹುದು. ಅಷ್ಟರೊಳಗೆ ಸಂಘದ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳುವಂತೆ ರಾಜ್ಯ ಅಧ್ಯಕ್ಷರಿಗೆ ಮನವಿ ಮಾಡಲಾಗಿದೆ. ತೀರ್ಮಾನ ಆಗದಿದ್ದರೂ ಸರ್ಕಾರಿ ನೌಕರರ ಸಂಘದ ಕ್ರೀಡಾ ಮತ್ತು ಸಾಂಸ್ಕೃತಿಕ ಸಮಿತಿಗೆ ಜಿಲ್ಲಾಧಿಕಾರಿ ಅವರೇ ಅಧ್ಯಕ್ಷರಾಗಿರುವುದರಿಂದ ಕ್ರೀಡಾಕೂಟ ನಡೆಯಲಿ. ಎಲ್ಲಾ ನೌಕರರು ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ’ ಎಂದು ಅಡಾಕ್‌ ಸಮಿತಿ ಅಧ್ಯಕ್ಷ ಜಿ.ಸುರೇಶ್‌ಬಾಬು ತಿಳಿಸಿದರು.

ಜಿಲ್ಲೆಯಲ್ಲಿ ದುರ್ಬಲ: ‘ಎಲ್ಲಾ ಜಿಲ್ಲೆಗಳಲ್ಲಿ ನೌಕರರ ಸಂಘ ಬಲಿಷ್ಠವಾಗಿದ್ದರೆ ಕೋಲಾರ ಜಿಲ್ಲೆಯಲ್ಲಿ ದುರ್ಬಲವಾಗಿದೆ. ಸಂಘದಲ್ಲಿ ಒಡಕು ಇದ್ದರೆ ನೌಕರರ ಹಿತ ಕಾಪಾಡುವವರು ಯಾರು? ಗುಂಪುಗಾರಿಕೆ ಇದ್ದರೆ ಕ್ರೀಡಾಕೂಟ ನಡೆಸಲು ಆಗಲ್ಲ. ಮೊದಲು ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಿ’ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಅಡಾಕ್‌ ಸಮಿತಿ ಉಪಾಧ್ಯಕ್ಷರಾದ ರತ್ನಪ್ಪ, ಗೌತಮ್, ಶ್ರೀನಿವಾಸರೆಡ್ಡಿ, ಪ್ರಧಾನ ಕಾರ್ಯದರ್ಶಿ ಚೌಡಪ್ಪ, ಕ್ರೀಡಾ ಮತ್ತು ಸಾಂಸ್ಕೃತಿಕ ಸಮಿತಿ ಪದಾಧಿಕಾರಿಗಳಾದ ನಾಗರಾಜ್, ನಾರಾಯಣಸ್ವಾಮಿ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಮಂಜುನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.