ADVERTISEMENT

ಸರ್ಕಾರಿ ಜಮೀನು ಒತ್ತುವರಿ: ಸ್ಥಳ ಪರಿಶೀಲಿಸಿದ ಶಾಸಕಿ ರೂಪಕಲಾ ಶಶಿಧರ್

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2024, 15:28 IST
Last Updated 9 ಸೆಪ್ಟೆಂಬರ್ 2024, 15:28 IST
ಕೆಜಿಎಫ್ ತಾಲ್ಲೂಕು ಪೀಲವಾರ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದ ಶಾಸಕಿ ಎಂ.ರೂಪಕಲಾ ಶಶಿಧರ್ ಸರ್ಕಾರಿ ಜಮೀನು ಪರಿಶೀಲನೆ ನಡೆಸಿದರು. ತಹಶೀಲ್ದಾರ್ ನಾಗವೇಣಿ ಇದ್ದರು 
ಕೆಜಿಎಫ್ ತಾಲ್ಲೂಕು ಪೀಲವಾರ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದ ಶಾಸಕಿ ಎಂ.ರೂಪಕಲಾ ಶಶಿಧರ್ ಸರ್ಕಾರಿ ಜಮೀನು ಪರಿಶೀಲನೆ ನಡೆಸಿದರು. ತಹಶೀಲ್ದಾರ್ ನಾಗವೇಣಿ ಇದ್ದರು    

ಕೆಜಿಎಫ್‌: ಆಂಧ್ರಪ್ರದೇಶದ ಮೂಲದವರು ತಾಲ್ಲೂಕು ವ್ಯಾಪ್ತಿಯಲ್ಲಿ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶಾಸಕಿ ಎಂ. ರೂಪಕಲಾ ಶಶಿಧರ್ ಸೋಮವಾರ ಪೀಲವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನೆರೆಯ ಆಂಧ್ರಪ್ರದೇಶಕ್ಕೆ ಹೊಂದಿಕೊಂಡ ಶ್ರೀನಿವಾಸಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೀಲವಾರ ಗ್ರಾಮದ ಸರ್ಕಾರಿ ಗೋಮಾಳ 98ರ ಸರ್ವೆ ನಂಬರ್‌ನಲ್ಲಿ 650 ಎಕರೆ ಜಮೀನು ಇದ್ದು, ಅದನ್ನು ಆಂಧ್ರಪ್ರದೇಶದವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ವ್ಯಾಪಕ ದೂರುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ನಾಗವೇಣಿ ಮತ್ತು ಇತರ ಸಿಬ್ಬಂದಿಯೊಡನೆ ಸ್ಥಳ ಪರಿಶೀಲನೆ ನಡೆಸಲಾಗಿದೆ. 650 ಎಕರೆ ಜಮೀನು ಪೈಕಿ ಉಳುಮೆ ನಡೆಸುತ್ತಿರುವ ಅಧಿಕೃತ ಮತ್ತು ಅಧಿಕೃತ ಸ್ವಾಧೀನದಾರರ ಬಗ್ಗೆ ಮಾಹಿತಿ ಕಲೆ ಹಾಕಿ ನೀಡಬೇಕು ಎಂದು ಶಾಸಕಿ ಅಧಿಕಾರಿಗಳಿಗೆ ಸೂಚಿಸಿದರು.

ಈ ಪ್ರದೇಶದಲ್ಲಿ ಬರುವ ಜಮೀನಿನ ಪೈಕಿ 200 ಎಕರೆ ಜಮೀನು ಅರಣ್ಯ ಇಲಾಖೆ ಸುಪರ್ದಿಗೆ ಬರುತ್ತದೆ ಎಂದು ತಹಶೀಲ್ದಾರ್ ಕೆ.ನಾಗವೇಣಿ ಮಾಹಿತಿ ನೀಡಿದರು.

ADVERTISEMENT

ಅರಣ್ಯ ಇಲಾಖೆ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ಕೆಲ ರೈತರು ತಮ್ಮ ಜಮೀನನ್ನು ಅರಣ್ಯ ಇಲಾಖೆಯಿಂದ ಬಿಡಿಸಿಕೊಡುವಂತೆ ಮನವಿ ಮಾಡಿದರು.

ಅವರ ಮನವಿಗೆ ಒಪ್ಪದ ಶಾಸಕಿ ಅರಣ್ಯ ಇಲಾಖೆಗೆ ಸೇರಿದ ಜಾಗ ನೀಡಲು ಸಾಧ್ಯವಿಲ್ಲ. ಅರಣ್ಯ ಉಳಿಸಿ, ಬೆಳೆಸುವುದು ಎಲ್ಲರ ಕರ್ತವ್ಯವಾಗಬೇಕು ಎಂದು ತಿಳಿಸಿದರು. ಕ್ಯಾಸಂಬಳ್ಳಿ ಕಂದಾಯ ಇನ್‌ಸ್ಪೆಕ್ಟರ್ ಲೋಕೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.