ADVERTISEMENT

ಕೋಲಾರ: ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಸಿದ್ದರಾಮಯ್ಯ!

ಸರ್ಕಾರ ಸಾಧನೆ, ಗ್ಯಾರಂಟಿ ವಸ್ತುಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಎಂ.ಆರ್‌.ರವಿ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 6:38 IST
Last Updated 7 ಜುಲೈ 2025, 6:38 IST
ಕೋಲಾರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಸರ್ಕಾರದ ವಸ್ತುಪ್ರದರ್ಶನ ಉದ್ಘಾಟಿಸಿದ ಜಿಲ್ಲಾಧಿಕಾರಿ ಎಂ.ಆರ್‌.ರವಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೋಲುವ ಕಲಾಕೃತಿ ವೀಕ್ಷಿಸಿದರು
ಕೋಲಾರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಸರ್ಕಾರದ ವಸ್ತುಪ್ರದರ್ಶನ ಉದ್ಘಾಟಿಸಿದ ಜಿಲ್ಲಾಧಿಕಾರಿ ಎಂ.ಆರ್‌.ರವಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೋಲುವ ಕಲಾಕೃತಿ ವೀಕ್ಷಿಸಿದರು    

ಕೋಲಾರ: ರಾಜ್ಯ ಸರ್ಕಾರದ ಎರಡು ವರ್ಷಗಳ ಅಭಿವೃದ್ಧಿ ಸಾಧನೆ ಹಾಗೂ ಪಂಚ ಗ್ಯಾರಂಟಿ ಯೋಜನೆಗಳನ್ನು ಬಿಂಬಿಸುವ ವಸ್ತುಪ್ರದರ್ಶನಕ್ಕೆ ಭಾನುವಾರ ಜಿಲ್ಲಾಧಿಕಾರಿ ಎಂ.ಆರ್.ರವಿ ಚಾಲನೆ ನೀಡಿದರು.

ನಗರದ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ಮೂರು ದಿನ ವಸ್ತುಪ್ರದರ್ಶನ ನಡೆಯಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೋಲುವ ಕಲಾಕೃತಿಯನ್ನು ಬಸ್‌ ನಿಲ್ದಾಣದಲ್ಲಿ ಇರಿಸಲಾಗಿದೆ. ಪ್ರಯಾಣಿಕರು ಆ ಕಲಾಕೃತಿ ಮುಂದೆ ನಿಂತು ಫೋಟೊ ತೆಗೆಸಿಕೊಂಡರು, ಸೆಲ್ಫಿ ಕ್ಲಿಕ್ಕಿಸಿಕೊಂಡರು. ಅಲ್ಲದೇ, ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.‌ಶಿವಕುಮಾರ್ ಅವರ ಭಾವಚಿತ್ರ ಒಳಗೊಂಡ ಸೆಲ್ಫಿ ಪಾಯಿಂಟ್ ಕೂಡ ನಿರ್ಮಿಸಲಾಗಿದೆ.

ADVERTISEMENT

ಸರ್ಕಾರದ ಸಾಧನೆ ಫಲಕ ವೀಕ್ಷಿಸಿ ಮಾತನಾಡಿದ ಎಂ.ಆರ್.ರವಿ, ’ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಐದು ಗ್ಯಾರಂಟಿಗಳು ಅರ್ಹ ಫಲಾನುಭವಿಗಳಿಗೆ ತಲುಪುತ್ತಿವೆ. ಸರ್ಕಾರದ ಸಾಧನೆಗಳನ್ನು ಪರಿಚಯಿಸಲು ಈ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ’ ಎಂದರು.

ವಸ್ತುಪ್ರದರ್ಶನ ಮಳಿಗೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಿಸಲು ‘ಶಕ್ತಿ ಯೋಜನೆ’, ಸ್ವಾವಲಂಬಿ ಬದುಕು ನಡೆಸಲು ಯಜಮಾನಿಯರಿಗೆ ಪ್ರತಿ ತಿಂಗಳು ₹ 2 ಸಾವಿರ ನೀಡುವ ‘ಗೃಹಲಕ್ಷ್ಮಿ’ ಯೋಜನೆ, ‘ಅನ್ನಭಾಗ್ಯ’, ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು ₹ 3 ಸಾವಿರ ಹಾಗೂ ಡಿಪ್ಲೋಮಾ ಪದವೀಧರರಿಗೆ ₹ 1,500 ನೀಡುವ ‘ಯುವನಿಧಿ’, ಉಚಿತ ವಿದ್ಯುತ್ ನೀಡುವ ‘ಗೃಹ ಜ್ಯೋತಿ’, ಯೋಜನೆಗಳು ಹಾಗೂ ಇಂದಿರಾ ಕ್ಯಾಂಟೀನ್‌ಕುರಿತು ಮಾಹಿತಿ ಫಲಕಗಳು, ಪುಸ್ತಕಗಳು, ಯೋಶೋಗಾಥೆ ಇವೆ.

ಸೆಲ್ಫಿ ಪಾಯಿಂಟ್‍ಗಳಲ್ಲಿ ಗಣ್ಯರು, ಜನರು ಫೋಟೊ ಕ್ಲಿಕ್ಕಿಸಿಕೊಂಡರು. ಜುಲೈ 8 ರವರೆಗೆ ವಸ್ತುಪ್ರದರ್ಶನವು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುತ್ತದೆ.

‘ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳ ಲಾಭ ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ದೊರಕಿಸುವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳು ಒಳಗೊಂಡಂತೆ ಸರ್ಕಾರದ ಜನಪರ ಯೋಜನೆಗಳ, ಅಭಿವೃದ್ಧಿ ಸಾಧನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ’ ಎಂದು ವಾರ್ತಾ ಸಹಾಯಕ ಮಂಜೇಶ್ ಮಾಹಿತಿ ನೀಡಿದರು.

ಜಿಲ್ಲಾ ಗ್ಯಾರಂಟಿ ಅನುಷ್ಠಾನ ಯೋಜನಾ ಪ್ರಾಧಿಕಾರ ಅಧ್ಯಕ್ಷ ಶಿವಕುಮಾರ್, ಸದಸ್ಯರು, ಕೆಎಸ್‍ಆರ್‌ಟಿಸಿಯ ಶಿವಕುಮಾರ್, ಗ್ಯಾರಂಟಿ ಯೋಜನಾ ಪ್ರಾಧಿಕಾರದ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.