ADVERTISEMENT

ಸರ್ಕಾರಿ ಶಾಲೆ ವಿಲೀನ ಆದೇಶ ಆಘಾತಕಾರಿ

ಎಸ್‌ಐಒ ರಾಜ್ಯ ಘಟಕದ ಕಾರ್ಯದರ್ಶಿ ಸಿದ್ಧಿಖಿ ಆತಂಕ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2018, 13:36 IST
Last Updated 10 ಆಗಸ್ಟ್ 2018, 13:36 IST

ಕೋಲಾರ: ‘ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳನ್ನು ಉಳಿಸುವ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಉದ್ದೇಶಕ್ಕಾಗಿ ಶಾಲೆಗಳ ವಿಲೀನಕ್ಕೆ ಮುಂದಾಗಿದೆ’ ಎಂದು ಸ್ಟುಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ (ಎಸ್‌ಐಒ) ರಾಜ್ಯ ಘಟಕದ ಕಾರ್ಯದರ್ಶಿ ಜೀಶಾನ್ ಅಖಿಲ್ ಸಿದ್ಧಿಖಿ ಆರೋಪಿಸಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸರ್ಕಾರವು ಜೂನ್ 5ರಂದು 28,847 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ವಿಲೀನ ಮಾಡುವ ಪ್ರಸ್ತಾಪ ಮಾಡಿತ್ತು. ಇದಕ್ಕೆ ಶಿಕ್ಷಣ ತಜ್ಞರು ಮತ್ತು ವಿದ್ಯಾರ್ಥಿ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು. ಆದರೂ ಸರ್ಕಾರ ಈಗ ಶಾಲೆಗಳ ವಿಲೀನ ಆದೇಶ ಹೊರಡಿಸಿರುವುದು ಆಘಾತಕಾರಿ’ ಎಂದು ಆತಂಕ ವ್ಯಕ್ತಪಡಿಸಿದರು.

‘ಸರ್ಕಾರದ ಆದೇಶದಿಂದ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದ್ದು, ಈ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ದೂರದ ಶಾಲೆಗಳಿಗೆ ಹೋಗಲಾಗದೆ ಶಿಕ್ಷಣದಿಂದಲೇ ದೂರವಾಗುವ ಅಪಾಯವಿದೆ’ ಎಂದು ವಿಷಾದಿಸಿದರು.

ADVERTISEMENT

‘ಸರ್ವರಿಗೂ ಉಚಿತ ಹಾಗೂ ಗುಣಮಟ್ಟದ ಸಮಾನ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯ, ಆದರೆ, ಈ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರ ಪರೋಕ್ಷವಾಗಿ ಶಿಕ್ಷಣದ ಖಾಸಗೀಕರಣಕ್ಕೆ ಒತ್ತು ನೀಡುತ್ತಿದೆ. ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿ ನೀಡಿರುವ ವರದಿ ಅನುಷ್ಠಾನಗೊಳಿಸದೆ ಶಾಲೆಗಳನ್ನೇ ಮುಚ್ಚಲು ಹೊರಟಿರುವುದು ಖಂಡನೀಯ’ ಎಂದು ದೂರಿದರು.

ಶೈಕ್ಷಣಿಕ ಪ್ರಗತಿಗೆ ಮಾರಕ: ‘ಸರ್ಕಾರವು 2016ರಲ್ಲಿ 10ಕ್ಕಿಂತ ಕಡಿಮೆ ಮಕ್ಕಳಿದ್ದ ಶಾಲೆಗಳನ್ನು ಒಂದು ಕಿ.ಮೀ ವ್ಯಾಪ್ತಿಯ ಬೇರೆ ಶಾಲೆಗಳ ಜತೆ ವಿಲೀನ ಮಾಡಿತ್ತು. ಆದರೆ, ವಿಲೀನಗೊಂಡ ಸ್ಥಳದಲ್ಲೇ ಮತ್ತಷ್ಟು ಖಾಸಗಿ ಶಾಲೆಗಳು ಹುಟ್ಟಿಕೊಂಡವು. ಈಗ ಮತ್ತಷ್ಟು ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಲು ಮುಂದಾಗಿರುವುದು ಶೈಕ್ಷಣಿಕ ಪ್ರಗತಿಗೆ ಮಾರಕವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ವಿಲೀನ ನಿಲ್ಲಿಸಬೇಕು: ‘ರಾಜ್ಯದಲ್ಲಿ ಶೂನ್ಯ ದಾಖಲಾತಿಯ ಶಾಲೆಗಳನ್ನು ಈಗಾಗಲೇ ಮುಚ್ಚಲಾಗಿದೆ. ಜಿಲ್ಲೆಯಲ್ಲಿ 10ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳು ಮುಚ್ಚುವ ಹಂತದಲ್ಲಿವೆ. ಶಾಲೆಗಳ ವಿಲೀನ ನಿಲ್ಲಿಸಬೇಕು. ಶಾಲಾ ಸಬಲೀಕರಣ ವರದಿ ಜಾರಿಗೆ ಆಯೋಗ ರಚಿಸಬೇಕು. ಶಿಕ್ಷಕರ ಹುದ್ದೆಗಳನ್ನು ತುಂಬಲು ನೇಮಕಾತಿ ಪ್ರಕ್ರಿಯೆ ನಡೆಸಬೇಕು’ ಎಂದು ಎಸ್‌ಐಒ ಬೆಂಗಳೂರು ಘಟಕದ ಕಾರ್ಯದರ್ಶಿ ರಿಯಾಜ್ ಒತ್ತಾಯಿಸಿದರು.


* ರಾಜ್ಯದಲ್ಲಿ 2016ರಲ್ಲಿ 2,168 ಶಾಲೆಗಳ ವಿಲೀನ
* ಶೂನ್ಯ ದಾಖಲಾತಿಯ 261 ಶಾಲೆಗಳು ಮುಚ್ಚಿವೆ
* ಜಿಲ್ಲೆಯಲ್ಲಿ 1,192 ಶಾಲೆ ವಿಲೀನಕ್ಕೆ ಚಿಂತನೆ
* ಹತ್ತು ಮಕ್ಕಳಿರುವ 241 ಶಾಲೆ ಮುಚ್ಚುವ ಹಂತದಲ್ಲಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.