ADVERTISEMENT

ಮುಳಬಾಗಿಲು: ಐದು ವರ್ಷದಿಂದ ಮುಚ್ಚಿದ್ದ ಸರ್ಕಾರಿ ಶಾಲೆ ಆರಂಭ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 15:10 IST
Last Updated 6 ಜೂನ್ 2025, 15:10 IST
ಮುಳಬಾಗಿಲು ತಾಲ್ಲೂಕಿನ ಸೂರುಕುಂಟೆ ಗ್ರಾಮದಲ್ಲಿ ಶೂನ್ಯ ದಾಖಲಾತಿಯಿಂದ ಮುಚ್ಚಿದ್ದ ಸರ್ಕಾರಿ ಪ್ರಾಥಮಿಕ ಶಾಲೆ ಶುಕ್ರವಾರ ಪುನರ್ ಆರಂಭವಾಯಿತು 
ಮುಳಬಾಗಿಲು ತಾಲ್ಲೂಕಿನ ಸೂರುಕುಂಟೆ ಗ್ರಾಮದಲ್ಲಿ ಶೂನ್ಯ ದಾಖಲಾತಿಯಿಂದ ಮುಚ್ಚಿದ್ದ ಸರ್ಕಾರಿ ಪ್ರಾಥಮಿಕ ಶಾಲೆ ಶುಕ್ರವಾರ ಪುನರ್ ಆರಂಭವಾಯಿತು    

ಮುಳಬಾಗಿಲು: ವಿದ್ಯಾರ್ಥಿಗಳ ದಾಖಲಾತಿ ಕೊರತೆ ಮತ್ತು ವಿದ್ಯಾರ್ಥಿಗಳ ಶೂನ್ಯ ದಾಖಲಾತಿ ಕಾರಣದಿಂದಾಗಿ ಹಲವು ಸರ್ಕಾರಿ ಶಾಲೆಗಳಿಗೆ ಬೀಗ ಎಂಬಂಥ ಹಲವು ಸುದ್ದಿಗಳ ಮಧ್ಯೆ, ತಾಲ್ಲೂಕಿನ ಗುಮ್ಮಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂರಕುಂಟೆ ಗ್ರಾಮದಲ್ಲಿ ಐದು ವರ್ಷಗಳ ಹಿಂದೆ ಮುಚ್ಚಲಾಗಿದ್ದ ಸರ್ಕಾರಿ ಶಾಲೆಯನ್ನು ಶುಕ್ರವಾರದಿಂದ ಆರಂಭಿಸಲಾಗಿದೆ. 

ವಿದ್ಯಾರ್ಥಿಗಳ ಶೂನ್ಯ ದಾಖಲಾತಿ ಕಾರಣದಿಂದ ಮುಚ್ಚಲಾಗಿದ್ದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಶುಕ್ರವಾರ ಮರು ಜೀವ ನೀಡಿದ್ದಾರೆ. 

ವಿದ್ಯಾರ್ಥಿಗಳ ಪೋಷಕರ ಖಾಸಗಿ ಶಾಲೆಗಳ ವ್ಯಾಮೋಹದಿಂದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕುಂಠಿತವಾಗಿತ್ತು. ಇದರಿಂದಾಗಿ ತಾಲ್ಲೂಕಿನಲ್ಲಿನ ಒಟ್ಟಾರೆ 16 ಸರ್ಕಾರಿ ಶಾಲೆಗಳು ಮುಚ್ಚಿದ್ದವು. ಈ ಸಂಬಂಧ ‘ಪ್ರಜಾವಾಣಿ’ಯ ಮೇ 30ರ ಸಂಚಿಕೆಯಲ್ಲಿ ‘ಖಾಸಗಿ ಮೋಹ: ಸರ್ಕಾರಿ ಶಾಲೆಗಳಿಗೆ ಬೀಗ’ ಎಂಬ ಶೀರ್ಷಿಕೆಯೊಂದಿಗೆ ಸುದ್ದಿಯನ್ನೂ ಪ್ರಕಟಿಸಲಾಗಿತ್ತು. 

ADVERTISEMENT

ಅಲ್ಲದೆ, ಹಾಜರಾತಿ ಕೊರತೆ ಹಾಗೂ ಶೂನ್ಯ ದಾಖಲಾತಿ ಕಾರಣದಿಂದ ತಾಲ್ಲೂಕಿನಾದ್ಯಂತ ಮುಚ್ಚಲಾಗಿರುವ 16 ಶಾಲೆಗಳ ಬಾಗಿಲನ್ನು ತೆರೆಸಬೇಕು. ಈ ಮೂಲಕ ಬಡವರು ಮತ್ತು ಕೂಲಿ ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ ಲಭ್ಯವಾಗುವಂತೆ ಮಾಡಬೇಕು ಎಂದು ಜಿಲ್ಲಾ ಉಪ ನಿರ್ದೇಶಕ ಕೃಷ್ಣಮೂರ್ತಿ, ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ರಾಮಚಂದ್ರಪ್ಪ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿ ಪಿ. ಸೋಮೇಶ್ ಅವರ ಗಮನಕ್ಕೆ ತರಲಾಗಿತ್ತು. 

ಇದರಿಂದ ಎಚ್ಚೆತ್ತುಕೊಂಡಿದ್ದ ಅಧಿಕಾರಿಗಳು, ಬೀಗ ಹಾಕಲಾಗಿರುವ ಶಾಲೆಗಳನ್ನು ಪುನರ್ ಆರಂಭಿಸಲಾಗುವುದು ಎಂಬ ಭರವಸೆ ನೀಡಿದ್ದರು. ಅದರಂತೆ ಅಧಿಕಾರಿಗಳು, ಸಿಆರ್‌ಪಿ, ಬಿಆರ್‌ಪಿ ಹಾಗೂ ಶಿಕ್ಷಕರ ಸಭೆ ಸೇರಿ ಮೊದಲಿಗೆ ಐದು ವರ್ಷಗಳಿಂದ ಮುಚ್ಚಲಾದ ಸೂರಕುಂಟೆ ಶಾಲೆ ಪುನರ್ ಆರಂಭಕ್ಕೆ ಮುಂದಾದರು. ಈ ಪ್ರಕಾರ ಅಧಿಕಾರಿಗಳು 6 ಮಂದಿ ವಿದ್ಯಾರ್ಥಿಗಳನ್ನು ಒಂದನೇ ತರಗತಿಗೆ ದಾಖಲು ಮಾಡಿಕೊಳ್ಳುವ ಮೂಲಕ ಶಾಲೆಯನ್ನು ಮತ್ತೆ ಆರಂಭಿಸಲಾಗಿದೆ. 

ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಪೋಷಕರಿಗೆ ಮನವೊಲಿಸಲು ಕ್ಷೇತ್ರ ಸಮನ್ವಯ ಅಧಿಕಾರಿ ಪಿ. ಸೋಮೇಶ್, ಸಿಆರ್‌ಪಿ ಮಂಜುನಾಥ್ ಹಾಗೂ ಶಂಕರ್ ಅವರು ಗ್ರಾಮದಲ್ಲಿ ಪ್ರತಿಯೊಬ್ಬರ ಮನೆಗೆ ಭೇಟಿ ನೀಡಿದರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ರಾಮಚಂದ್ರಪ್ಪ ತಿಳಿಸಿದರು. 

ಶಾಲೆಗೆ ಆರು ವಿದ್ಯಾರ್ಥಿಗಳು ದಾಖಲಾದ ವಿಚಾರ ಗುಮ್ಮಕಲ್ಲು ಗ್ರಾಮ ಪಂಚಾಯಿತಿಗೆ ತಿಳಿದ ತಕ್ಷಣವೇ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಿತ್ರಾ ಕೃಷ್ಣಮೂರ್ತಿ, ಕಾರ್ಯದರ್ಶಿ ವಿಶ್ವನಾಥ್ ಮತ್ತು ಸೂರಕುಂಟೆ ಗ್ರಾಮಸ್ಥರು ಶಾಲೆಗಳನ್ನು ಸ್ವಚ್ಛಗೊಳಿಸಿ, ಕೊಠಡಿಗಳಿಗೆ ಪೂಜಿಸಿದರು. ಜೊತೆಗೆ ಶಾಲೆಗೆ ದಾಖಲಾದ ವಿದ್ಯಾರ್ಥಿಗಳಿಗೆ ಸಿಹಿ ತಿನ್ನಿಸಿ, ಬ್ಯಾಗ್ ಸೇರಿದಂತೆ ಇನ್ನಿತರ ಶೈಕ್ಷಣಿಕ ಸಲಕರಣೆಗಳನ್ನು ವಿತರಿಸಿ, ಬರಮಾಡಿಕೊಳ್ಳಲಾಯಿತು ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ಪಿ. ಸೋಮೇಶ್ ತಿಳಿಸಿದರು. 

ಗುಮ್ಮಕಲ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಿತ್ರಾ ಕೃಷ್ಣಮೂರ್ತಿ, ಕಾರ್ಯದರ್ಶಿ ವಿಶ್ವನಾಥ್, ನಂಗಲಿ ಕಿಶೋರ್, ಸೂರಕುಂಟೆ ಸುಬ್ರಮಣಿ, ರಾಮಚಂದ್ರ, ಚೇತನ್, ಅಶ್ವಿನಿ ಪ್ರಸನ್ನಕುಮಾರ್, ಅಜಯ್, ರೆಡ್ಡಿಪ್ರಸಾದ್, ಚಂದು, ಅಭಿಷೇಕ್, ಅರವಿಂದ್ ಇದ್ದರು.

ಶಾಲೆಗೆ ದಾಖಲಾದ ಆರು ವಿದ್ಯಾರ್ಥಿಗಳಿಗೆ ಯುವಕರು ಹಾಗೂ ಅಧಿಕಾರಿಗಳು ಸಿಹಿ ತಿನ್ನಿಸಿ ಶಾಲೆಗೆ ಬರ ಮಾಡಿಕೊಂಡರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.