ADVERTISEMENT

ಶ್ರೀನಿವಾಸಪುರ: 400 ವಿದ್ಯಾರ್ಥಿಗಳಿಗೆ ಇಷ್ಟದ ಬಟ್ಟೆ ಕೊಡಿಸಿದ ಮೇಷ್ಟ್ರು

ಆರ್.ಚೌಡರೆಡ್ಡಿ
Published 26 ನವೆಂಬರ್ 2021, 1:59 IST
Last Updated 26 ನವೆಂಬರ್ 2021, 1:59 IST
ಸುಗಟೂರು ಗ್ರಾಮದ ಶಾಲಾವರಣದಲ್ಲಿ ಹೊಸ ಉಡುಪು ಧರಿಸಿ ಪೋಷಕರೊಂದಿಗೆ ಕುಳಿತಿರುವ ಮಕ್ಕಳು
ಸುಗಟೂರು ಗ್ರಾಮದ ಶಾಲಾವರಣದಲ್ಲಿ ಹೊಸ ಉಡುಪು ಧರಿಸಿ ಪೋಷಕರೊಂದಿಗೆ ಕುಳಿತಿರುವ ಮಕ್ಕಳು   

ಶ್ರೀನಿವಾಸಪುರ: ಸರ್ಕಾರಿ ಶಾಲಾ ಶಿಕ್ಷಕರೊಬ್ಬರು 400 ಶಾಲಾ ಮಕ್ಕಳಿಗೆ, ಅವರಿಷ್ಟದ ಬಟ್ಟೆ ಕೊಡಿಸಿದ್ದಾರೆ.

ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ ಸುಗಟೂರು ಹೋಬಳಿ ವ್ಯಾಪ್ತಿಯ ಜಂಗಮ ಗೂರ್ಜೇನಹಳ್ಳಿ ಗ್ರಾಮದ ಶಿಕ್ಷಕ ಎಸ್.ಆರ್. ಧರ್ಮೇಶ್‌ ಅವರು ಸುಗಟೂರು ಸರ್ಕಾರಿ ಉನ್ನತೀಕರಿಸಿದ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ 1 ವರ್ಷದಿಂದ 6 ವರ್ಷದೊಳಗಿನ ಅಂಗನವಾಡಿ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಸಿದ್ಧ ಉಡುಪು ವಿತರಿಸಿದರು.

ಧರ್ಮೇಶ್‌ ಅವರು ಮಕ್ಕಳು ಅಥವಾ ಪೋಷಕರನ್ನು ಗುಂಪು ಗುಂಪಾಗಿ ಅಂಗಡಿಗೆ ಆಹ್ವಾನಿಸಿ, ಬೆಲೆಯ
ಮಿತಿ ಇಲ್ಲದೆ ಅವರಿಗೆ ಇಷ್ಟವಾದ ಉಡುಪು ಆರಿಸಿಕೊಳ್ಳಲು ಅವಕಾಶ ಕಲ್ಪಿಸಿದ್ದರು. ಮಕ್ಕಳು ಖುಷಿಯಾಗಿ ತಮಗೆ ಇಷ್ಟವಾದ ಬಟ್ಟೆಗಳನ್ನು ಆರಿಸಿಕೊಂಡರು.

ADVERTISEMENT

ಧರ್ಮೇಶ್‌ ಅವರು 300 ನೇತ್ರ ರೋಗಿಗಳಿಗೆ ತಜ್ಞ ವೈದ್ಯರಿಂದ ಶಸ್ತ್ರ ಚಿಕಿತ್ಸೆ ಮಾಡಿಸಿ ಕನ್ನಡಕ ಕೊಡಿಸಿದ್ದಾರೆ. ಹೆಣ್ಣು ಮಕ್ಕಳಿಗೆ ಹೊಲಿಗೆ ತರಬೇತಿ ಕೊಡಿಸುತ್ತಿದ್ದಾರೆ. ನಾಟಕ, ಯಕ್ಷಗಾನ ಮತ್ತಿತರ ಕಲೆಗಳ ಕಲಾವಿದರನ್ನು ಗುರುತಿಸಿ ಸನ್ಮಾನಿಸುವುದರ ಮೂಲಕ ಪ್ರೋತ್ಸಾಹಿಸಿದ್ದಾರೆ. ಪ್ರತಿ ವರ್ಷ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಅಶ್ವತ್ಥ ಕಟ್ಟೆಗಳನ್ನು ನಿರ್ಮಿಸುವುದರ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ.

‘ಧರ್ಮೇಶ್‌ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ವಕ್ಕಲೇರಿ ಸಮೀಪದ ಸೀಗಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ, ಜಂಗಮ ಗೂರ್ಜೇ ನಹಳ್ಳಿಯಿಂದ ಪ್ರಯಾಣಿಸುತ್ತಾರೆ. ಪ್ರತಿ ದಿನಪ್ರಯಾಣದ ಮಧ್ಯೆ ಸಿಗುವ ಮಕ್ಕಳಿಗೆ ಚಾಕ್ಲೆಟ್, ಬಿಸ್ಕತ್ ಪ್ಯಾಕ್ ನೀಡುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಶಾಲೆ ಮಕ್ಕಳನ್ನು ತಮ್ಮ ಮಕ್ಕಳಂತೆಯೇ ನೋಡಿಕೊಳ್ಳುತ್ತಾರೆ’ ಎಂದು ಪೋಷಕರು ಹೇಳಿದರು.

‘ನನಗೆ ಮಾಸಿಕ ₹53 ಸಾವಿರ ಸಂಬಳ ಬರುತ್ತದೆ. ಅದರಲ್ಲಿ ಪ್ರತಿ ತಿಂಗಳು ₹10 ಸಾವಿರ ಸಮಾಜ ಸೇವಾ ಕಾರ್ಯಗಳಿಗೆ ತೆಗೆದಿಡುತ್ತೇನೆ.
ಉಳಿದ ಹಣದಲ್ಲಿ ಸಂಸಾರ ನಿಭಾಯಿಸುತ್ತೇನೆ. ನನ್ನ ಆಸಕ್ತಿಗೆ ಕುಟುಂಬದ ಸದಸ್ಯರ ಬೆಂಬಲವೂ ಇದೆ’ ಎಂಬುದು ಧರ್ಮೇಶ್‌ ಅವರ ಮನದಾಳದ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.