ADVERTISEMENT

ಅದ್ದೂರಿ ಯೋಗ ನರಸಿಂಹ ರಥೋತ್ಸವ

ರಥಕ್ಕೆ ಬಾಳೆಹಣ್ಣು, ದವನ ಅರ್ಪಿಸಿ ಹರಕೆ ತೀರಿಸಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 5:21 IST
Last Updated 4 ಮಾರ್ಚ್ 2026, 5:21 IST
ಕದರೀಪುರ ಯೋಗ ನರಸಿಂಹಸ್ವಾಮಿ ರಥೋತ್ಸವ ಅದ್ದೂರಿಯಾಗಿ ನಡೆಯಿತು 
ಕದರೀಪುರ ಯೋಗ ನರಸಿಂಹಸ್ವಾಮಿ ರಥೋತ್ಸವ ಅದ್ದೂರಿಯಾಗಿ ನಡೆಯಿತು    

ವೇಮಗಲ್: ಸಮೀಪದ ಮದ್ದೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕದರೀಪುರ ಯೋಗ ನರಸಿಂಹಸ್ವಾಮಿ ಬ್ರಹ್ಮ ರಥೋತ್ಸವವು ಮಂಗಳವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.

ರಥೋತ್ಸವ ಅಂಗವಾಗಿ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಮಧ್ಯಾಹ್ನ ಶುಭ ಮುಹೂರ್ತದಲ್ಲಿ ಶಾಸಕ ಕೊತ್ತೂರು ಜಿ.ಮಂಜುನಾಥ್ ಹಾಗೂ ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ ರಥಕ್ಕೆ ಚಾಲನೆ ನೀಡಿದರು.

ರಥಕ್ಕೆ ಚಾಲನೆ ಸಿಗುತ್ತಿದ್ದಂತೆ ಭಕ್ತರು ಗೋವಿಂದ ನಾಮಸ್ಮರಣೆ ಮಾಡುತ್ತಾ, ರಥಕ್ಕೆ ಬಾಳೆಹಣ್ಣು, ದವನ ಅರ್ಪಿಸಿ ಹರಕೆ ತೀರಿಸಿದರು. ರಥೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು. ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು.

ADVERTISEMENT

ಜಾತ್ರೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಈ ವೇಳೆ ಕದರೀಪುರ ಗ್ರಾಮದಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಿಸಿರುವ ನೂತನ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕರು ಉದ್ಘಾಟಿಸಿದರು.

ಕೋಮುಲ್ ನಿರ್ದೇಶಕ ಚಂಜಿಮಲೆ ಬಿ.ರಮೇಶ್, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಜಂಬಾಪುರ ವೆಂಕಟರಾಮ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಉರಟಿ ಅಗ್ರಹಾರ ಚೌಡರೆಡ್ಡಿ, ಶಿವಕುಮಾರ್, ಡಿ.ವಿ.ಶ್ರೀನಿವಾಸ್, ಎಂ.ಆರ್.ಶ್ರೀನಿವಾಸ ಗೌಡ, ಬಾಬು, ಶ್ರೀರಾಮಯ್ಯ, ಚನ್ನಕೇಶವ, ಲಕ್ಷ್ಮಿ ನರಸಪ್ಪ, ಇ.ವಿ.ಮಂಜುನಾಥ್, ಕೆ.ಎಂ.ಸುರೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಕದರೀಪುರ ಜಾತ್ರೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಬಾಲ್ಯ ವಿವಾಹ ಮುಕ್ತ ಭಾರತ’ ಅಭಿಯಾನಕ್ಕೆ ಸಿವಿಲ್ ನ್ಯಾಯಾಧೀಶ ನಿತೇಶ್ ಅವರು ಕರಪತ್ರ ಹಂಚುವ ಮೂಲಕ ಚಾಲನೆ ನೀಡಿದರು

ಬಾಲ್ಯ ವಿವಾಹ: ಜಾಗೃತಿ ಜಾಥಾ  ಕದರೀಪುರದ ಯೋಗ ನರಸಿಂಹಸ್ವಾಮಿ ರಥೋತ್ಸವದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ‘ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನ’ ಹಾಗೂ ’ಲೋಕ ಅದಾಲತ್’ ಕುರಿತು ಕಾನೂನು ಜಾಗೃತಿ ಜಾಥಾ ನಡೆಯಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ನಿತೇಶ್  ಅವರು ಸಾರ್ವಜನಿಕರಿಗೆ ಕರಪತ್ರ ವಿತರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು  ಜಾತ್ರೆ ಸಂಭ್ರಮದ ನಡುವೆ ಜನಸಾಮಾನ್ಯರಿಗೆ ಕಾನೂನಿನ ಅರಿವು ಮೂಡಿಸುವುದು ಜಾಥಾ ಉದ್ದೇಶ. ಹಾಗಾಗಿ ಬಾಲ್ಯ ವಿವಾಹದಂತಹ ಸಾಮಾಜಿಕ ಪಿಡುಗುಗಳನ್ನು ತೊಡೆದು ಹಾಕುವ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು. ಭಾರತವನ್ನು ಬಾಲ್ಯ ವಿವಾಹ ಮುಕ್ತ ರಾಷ್ಟ್ರವಾಗಿಸಲು ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು. ಮಾರ್ಚ್ 14ರಂದು ರಾಜ್ಯದಾದ್ಯಂತ ‘ರಾಷ್ಟ್ರೀಯ ಲೋಕ ಅದಾಲತ್’ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಇದೊಂದು ಸುಸಂದರ್ಭ. ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಇಚ್ಛಿಸುವವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ಆಯಾ ತಾಲ್ಲೂಕಿನ ಕಾನೂನು ಸೇವಾ ಸಮಿತಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು. ದೇವರಾಜ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಕಾನೂನು ಶಾಲೆಯ ಸುದರ್ಶನ್ ಎಸ್ ಚಂದ್ರು ಹಾಗೂ ಕಾನೂನು ವಿದ್ಯಾರ್ಥಿಗಳು ಸಕ್ರಿಯಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.