ADVERTISEMENT

ಪಂಚ ರಾಜ್ಯಗಳ ಫಲಿತಾಂಶ ನಂತರ ಮುಂದಿನ ರಾಜಕೀಯ ನಡೆ ನಿರ್ಧಾರ: ಜಿ.ಟಿ. ದೇವೇಗೌಡ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 15:13 IST
Last Updated 9 ಮಾರ್ಚ್ 2022, 15:13 IST
ಜಿ.ಟಿ. ದೇವೇಗೌಡ
ಜಿ.ಟಿ. ದೇವೇಗೌಡ   

ಕೋಲಾರ: ‘ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ನೋಡಿಕೊಂಡು ಮುಂದಿನ ರಾಜಕೀಯ ನಡೆ ಬಗ್ಗೆ ತೀರ್ಮಾನ ಮಾಡುತ್ತೇವೆ’ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಇಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸದ್ಯ ನಮ್ಮ ಪಾಡಿಗೆ ನಾವಿದ್ದೇವೆ. 5 ರಾಜ್ಯಗಳ ಚುನಾವಣಾ ಫಲಿತಾಂಶ ಘೋಷಣೆಯಾದ ಬಳಿಕ ಬಿಜೆಪಿಯೋ, ಜೆಡಿಎಸ್ ಅಥವಾ ಕಾಂಗ್ರೆಸೋ ಏನೂ ಬೇಕಾದರೂ ಆಗಬಹುದು. ಸದ್ಯ ಶಾಸಕನಾಗಿ ಇರುವವರೆಗೂ ಜೆಡಿಎಸ್’ ಎಂದರು.

‘ನಮ್ಮೆಲ್ಲರಿಗೂ ಮನಸ್ಸಲ್ಲಿ ರಾಜಕೀಯ ಮಾಡುವ ಪರಿಸ್ಥಿತಿ ಇದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನೇ ಇರಬೇಕೆಂದು ಜನ ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಆ ಕ್ಷೇತ್ರದಲ್ಲೇ ಮುಂದುವರಿಯುತ್ತೇನೆ. ನಾನು ಹಿಂದೆಯೇ ಸ್ಪಷ್ಟವಾಗಿ ಹೇಳಿದ್ದೇನೆ, ಯಾವುದೇ ಮುಚ್ಚು ಮರೆ ಮಾಡಿಲ್ಲ. ಸಚಿವನಾದ ಬಳಿಕ ದೇವೇಗೌಡರಿಗೆ ಮತ್ತು ಕುಮಾರಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಿ ವಾಪಸ್‌ ಆದಾಗಿನಿಂದ ಅವರ ಜತೆಗೆ ಸಂಬಂಧವೇ ಇಲ್ಲದಂತಾಗಿದೆ’ ಎಂದು ತಿಳಿಸಿದರು.

ADVERTISEMENT

‘ಮೈಸೂರಿನ ಖಾಸಗಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರಿಗೆ ಎಲ್ಲಾ ಮುಕ್ತವಾಗಿ ಹೇಳಿದ್ದೇನೆ. ನಾನು ಮತ್ತು ನನ್ನ ಮಗ ಹರೀಶ್‌ಗೌಡ ಇಬ್ಬರೂ ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತೇವೆ ಎಂದು ತಿಳಿಸಿದ್ದೇನೆ. ಮಗನ ಸ್ಪರ್ಧೆಗೆ ಹುಣಸೂರು, ಕೆ.ಆರ್.ನಗರ ಸೇರಿದಂತೆ 3 ಕ್ಷೇತ್ರ ಕೇಳಿದ್ದೇನೆ. ಸಿದ್ದರಾಮಯ್ಯ ಅವರು ಅದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

‘ಸಿದ್ದರಾಮಯ್ಯ ಅವರನ್ನು ಹುಣಸೂರು ಕ್ಷೇತ್ರದ ಜನ ಕರೆಯುತ್ತಿದ್ದಾರೆ. ಶ್ರೀನಿವಾಸಗೌಡರು ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಅವರನ್ನು ಕರೆದಿದ್ದಾರೆ. ಸಿದ್ದರಾಮಯ್ಯರ ಸ್ಪರ್ಧೆ ಬಗ್ಗೆ ಅವರ ಜತೆ ಯಾವುದೇ ಚರ್ಚೆ ಮಾಡಿಲ್ಲ. ನಾನು ಮಾತ್ರ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ನಿಲ್ಲೋದು. ನಮ್ಮ ನಡುವೆ ಯಾವುದೇ ಒಪ್ಪಂದ ಆಗಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.