ADVERTISEMENT

ರಾಜ್ಯದ ಖಜಾನೆ ಖಾಲಿ ಮಾಡಿದ ಗ್ಯಾರಂಟಿ: ಬಿಜೆಪಿ, ಜೆಡಿಎಸ್‌ ಮುಖಂಡರು ವಾಗ್ದಾಳಿ

ವೇಮಗಲ್‌ನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 2:44 IST
Last Updated 29 ಜುಲೈ 2025, 2:44 IST
<div class="paragraphs"><p>ಕೋಲಾರ ತಾಲ್ಲೂಕಿನ ವೇಮಗಲ್‌ನಲ್ಲಿ ಸೋಮವಾರ ಬಿಜೆಪಿ–ಜೆಡಿಎಸ್‌ ಹಮ್ಮಿಕೊಂಡಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ನಂದೀಶ್‌ ರೆಡ್ಡಿ ಮಾತನಾಡಿದರು.  </p></div>

ಕೋಲಾರ ತಾಲ್ಲೂಕಿನ ವೇಮಗಲ್‌ನಲ್ಲಿ ಸೋಮವಾರ ಬಿಜೆಪಿ–ಜೆಡಿಎಸ್‌ ಹಮ್ಮಿಕೊಂಡಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ನಂದೀಶ್‌ ರೆಡ್ಡಿ ಮಾತನಾಡಿದರು.

   

ಕೋಲಾರ: ‘ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಂದಾಗಿ ಖಜಾನೆ ಖಾಲಿಯಾಗಿದ್ದು, ಅಭಿವೃದ್ಧಿ ಎನ್ನುವುದು ಚುನಾವಣೆ ಸಮಯ ಹಾಗೂ ವೇದಿಕೆಗಳ ಭಾಷಣಗಳಿಗೆ ಸೀಮಿತವಾಗಿದೆ’ ಎಂದು ಮಾಜಿ ಶಾಸಕ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್‍ ರೆಡ್ಡಿ ಲೇವಡಿ ಮಾಡಿದರು.

ತಾಲ್ಲೂಕಿನ ವೇಮಗಲ್ ಸಮೀಪ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಅವರ ತೋಟದ ನಿವಾಸದಲ್ಲಿ ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ADVERTISEMENT

‘ಪರಿಶಿಷ್ಟರ ಅನುದಾನವನ್ನು ಈಗಾಗಲೇ ಸಾಕಷ್ಟು ಬಳಸಿಕೊಂಡಿದ್ದು, ಇರುವ ಹಣವನ್ನು ಯಾವ ಯಾವ ಇಲಾಖೆಗೆ ಕಳುಹಿಸಬೇಕು ಎನ್ನುವ ಬಗ್ಗೆ ಮುಖ್ಯಮಂತ್ರಿ ಚಿಂತನೆಯಲ್ಲಿದ್ದಾರೆ. ರಾಜ್ಯದ ಖಜಾನೆಯಂತೂ ಖಾಲಿಯಾಗಿದೆ. ಕಾರ್ಯರೂಪಕ್ಕೆ ತರುವ ಅಭಿವೃದ್ಧಿ ಯಾವುದೂ ಆಗುತ್ತಿಲ್ಲ. ಆದರೂ ರಾಜ್ಯದ ಉದ್ದಗಲಕ್ಕೆ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಚುನಾವಣೆಗಳ ಸಮಯದಲ್ಲಿ ₹ 200 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಎನ್ನುತ್ತಾರೆ,.ಕಡೆಗೆ ₹ 2 ಕೋಟಿ ಇರಲಿ, ಕನಿಷ್ಠಪಕ್ಷ ₹ 20 ಲಕ್ಷದ ಬಿಲ್ ಸಹ ನೀಡುವುದಿಲ್ಲ’ ಎಂದು ವ್ಯಂಗ್ಯವಾಡಿದರು.

ವೇಮಗಲ್-ಕುರುಗಲ್ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಲೇಬೇಕೆನ್ನುವ ನಿಟ್ಟಿನಲ್ಲಿ ಜೆಡಿಎಸ್-ಬಿಜೆಪಿ ಮುಖಂಡರೊಂದಿಗೆ ಚರ್ಚೆ ನಡೆಸಲಾಗಿದೆ. ಶೀಘ್ರದಲ್ಲೇ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಾಗುವುದು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯ, ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರಿಗೆ ಆಗುತ್ತಿರುವ ಮೋಸದ ಬಗ್ಗೆ ವಿಚಾರ ತಲುಪಿಸಲು ಮುಖಂಡರು ಮುಂದಾಗಲಿದ್ದಾರೆ’ ಎಂದರು.

‘ಇತ್ತೀಚೆಗೆ ಸಣ್ಣ ವ್ಯಾಪಾರಸ್ಥರ ಬಳಿ ಜಿಎಸ್ಟಿ ವಸೂಲಿ ಮಾಡಲು ರಾಜ್ಯ ಸರಕಾರ ಮುಂದಾಗಿರುವುದು ಸರಿಯಲ್ಲ. ಉಚಿತ ಯೋಜನೆಗಳ ಬಗ್ಗೆ ತಾಯಂದಿರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿರುವುದು ಒಂದು ಕಡೆಯಾದರೆ, ಮುಖ್ಯಮಂತ್ರಿ ಕುರ್ಚಿಗಾಗಿ ಕಿತ್ತಾಟ ತೀವ್ರವಾಗಿದೆ. ಒಟ್ಟಾರೆಯಾಗಿ ಚುನಾವಣೆಗಳಲ್ಲಿ ಸರಿಯಾದ ಉತ್ತರ ಜನರು ಕೊಡುತ್ತಾರೆ. ರಾಷ್ಟ್ರೀಯ ನಾಯಕರ ನಿರ್ಧಾರದಂತೆ ಜೆಡಿಎಸ್‍ನೊಂದಿಗೆ ಮೈತ್ರಿ ಮುಂದುವರಿಸಲಾಗುವುದು’ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು, ವಿಧಾನ ಪರಿಷತ್‌ ಸದಸ್ಯ ಇಂಚರ ಗೋವಿಂದರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಮಾಜಿ ಸಂಸದ ಎಸ್.ಮುನಿಸ್ವಾಮಿ, ಮಾಜಿ ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ, ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ಶಾಸಕ ಕೆ.ಎಸ್.ಮಂಜುನಾಥಗೌಡ, ಜಿ.ಪಂ ಮಾಜಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಜೆಡಿಎಸ್ ಮುಖಂಡರಾದ ಸಿಎಂಆರ್ ಶ್ರೀನಾಥ್, ಬಣಕನಹಳ್ಳಿ ನಟರಾಜ್, ಕಡಗಟ್ಟೂರು ವಿಜಯ್‍ಕುಮಾರ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲರೆಡ್ಡಿ, ತಾಲ್ಲೂಕು ಅಧ್ಯಕ್ಷ ಸಿ.ಡಿ.ರಾಮಚಂದ್ರ, ಓಹಿಲೇಶ್ ಇದ್ದರು.

‘ಮರು ಎಣಿಕೆ ಬೇಕೇ ಬೇಡವೇ ಎಂಬ ಆದೇಶ ಬರಲಿದೆ’

ಕೋಲಾರ: ‘ಮಾಲೂರು ವಿಧಾನಸಭಾ ಕ್ಷೇತ್ರದ ಫಲಿತಾಂಶ ವಿವಾದ ಸಂಬಂಧ ನ್ಯಾಯಾಲಯದ ಆದೇಶ ಹೊರಬೀಳಬೇಕಿದೆ. ಈಗಾಗಲೇ ವಾದ ಪ್ರತಿವಾದ ಮುಗಿದಿದ್ದು ಮರು ಎಣಿಕೆ ಮಾಡಬೇಕೇ ಬೇಡವೇ ಎಂಬ ಆದೇಶ ಬರಲಿದೆ’ ಎಂದು ಮಾಜಿ ಶಾಸಕ ಕೆ.ಎಸ್‌.ಮಂಜುನಾಥ್‌ಗೌಡ ತಿಳಿಸಿದರು.

ತಾಲ್ಲೂಕಿನ ವೇಮಗಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ವೇಮಗಲ್‌–ಕುರಗಲ್‌ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ನಾವು ಕಣಕ್ಕಿಳಿಸಲಿರುವ ಅಭ್ಯರ್ಥಿಗಳು ಪಕ್ಷಕ್ಕೆ ಬದ್ಧರಾಗಿರಬೇಕು ಆರ್ಥಿಕವಾಗಿ ಬಲಿಷ್ಠರಾಗಿರಬೇಕು. ಜೊತೆಗೆ ಎಲ್ಲಾ ಜಾತಿಗಳಿಗೆ ನ್ಯಾಯ ಒದಗಿಸಬೇಕು. ಮತದಾನ ಹಿಂದಿನ ದಿನಗಳವರೆಗೆ ಕಾಯದೆ ಆರಂಭದಿಂದಲೂ ಎಲ್ಲಾ ರೀತಿಯ ಸಿದ್ಧತೆ ನಡೆಸಬೇಕು. ಕೊನೆಯ ದಿನದವರೆಗೆ ಕಾಯಬಾರದು’ ಎಂದರು.

‘ಕಾಂಗ್ರೆಸ್‌ ಭ್ರಷ್ಟಾಚಾರದಲ್ಲಿ ಮುಳುಗಿದೆ. ರಾಜ್ಯದಲ್ಲಿ ಹಿಂದೆಂದೂ ಇಷ್ಟೊಂದು ಭ್ರಷ್ಟಾಚಾರ ಇರಲಿಲ್ಲ. ಇದರಿಂದ ಜನ ಬೇಸತ್ತು ಹೋಗಿದ್ದಾರೆ. ತಾಲ್ಲೂಕು ಕಚೇರಿ ಸೇರಿದಂತೆ ಯಾವುದೇ ಕಚೇರಿಗೆ ಜನಸಾಮಾನ್ಯರು ಹೋಗಿ ಬಂದರೆ ಅವರು ನಮಗೆ ಖಂಡಿತ ಮತ ಹಾಕುತ್ತಾರೆ’ ಎಂದು ಹೇಳಿದರು.

ಪಟ್ಟಣ ಪಂಚಾಯಿತಿ ಚುನಾವಣೆಗೆ ಈಗಾಗಲೇ ಮೈತ್ರಿಕೂಟದ ಅಭ್ಯರ್ಥಿಗಳ ಪಟ್ಟಿ ಮಾಡಿದ್ದು ಒಂದೆರಡು ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು. 17 ವಾರ್ಡ್‌ಗಳಲ್ಲೂ ಸ್ಪರ್ಧಿಸಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ರಾಹುಲ್‌ ಗಾಂಧಿಯಂತೆ ಯತೀಂದ್ರ ಕೂಡ ಪಪ್ಪು’

‘14 ನಿವೇಶನ ಕಬಳಿಸಿದ ಸಿದ್ದರಾಮಯ್ಯ ಅವರನ್ನು ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಹೋಲಿಸಲು ಕಾಂಗ್ರೆಸ್‌ನವರಿಗೆ ಯಾವ ನೈತಿಕತೆ ಇದೆ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ವೈ.ಎ.ನಾರಾಯಣಸ್ವಾಮಿ ಪ್ರಶ್ನಿಸಿದರು.

‘ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌ ತಮ್ಮ ಒಡವೆಗಳನ್ನು ಅಡವಿಟ್ಟು ಕನ್ನಂಬಾಡಿ ಕಟ್ಟಿದರು. ಅನೇಕ ಜನರಿಗೆ ಜೀವನ ರೂಪಿಸಿಕೊಟ್ಟಿದ್ದಾರೆ’ ಎಂದರು.

‘ರಾಷ್ಟ್ರ ಮಟ್ಟದಲ್ಲಿ ರಾಹುಲ್‌ ಗಾಂಧಿ ಯಾವ ರೀತಿ ಪಪ್ಪು ಆಗಿದ್ದಾರೆಯೋ ಅದೇ ರೀತಿ ರಾಜ್ಯ ಮಟ್ಟದಲ್ಲಿ ಯತೀಂದ್ರ ಕೂಡ ಪಪ್ಪು ಆಗಿದ್ದಾರೆ. ಈ ಬಗ್ಗೆ ಕ್ಷಮೆ ಕೇಳುವುದಿಲ್ಲ ಎಂಬುದಾಗಿ ಹೇಳುತ್ತಿದ್ದಾರೆ ಮಹಾರಾಜರ ವಿರುದ್ಧ ಅವರ ಹೇಳಿಕೆ ಬಾಲಿಷವಾಗಿದೆ’ ಎಂದು ಟೀಕಿಸಿದರು.

‘ರಾಹುಲ್ ಗಾಂಧಿ ಅವರಿಗಿಂತ ಸಿದ್ದರಾಮಯ್ಯ ಬುದ್ಧಿವಂತ ಎಂದು ಹೇಳುವ ಶಕ್ತಿ ತಾಕತ್ತು ಯತೀಂದ್ರ ಅವರಿಗೆ ಇದೆಯೇ’ ಎಂದು ಪ್ರಶ್ನಿಸಿದರು. ‘ಮಾನ ಮಾರ್ಯದೆ ಇದ್ದರೆ ಸಿದ್ದರಾಮಯ್ಯ ಮೈಸೂರು ಮಹಾರಾಜರ ಕುಟುಂಬದ ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದರು.

‘ಬಿಜೆಪಿ ಜೆಡಿಎಸ್ ಕಾರ್ಯಕರ್ತರಿಗೆ ಕಾಂಗ್ರೆಸ್‌ ಆಮಿಷ’

‘ಸಚಿವ ಕೃಷ್ಣಬೈರೇಗೌಡ ಕಾಂಗ್ರೆಸ್‌ ಶಾಸಕ ಕೊತ್ತೂರು ಮಂಜುನಾಥ್‌ ವೇಮಗಲ್‌–ಕುರಗಲ್‌ ಪಟ್ಟಣ ಪಂಚಾಯಿತಿ ಚುನಾವಣೆ ಸಂಬಂಧ ಬಿಜೆಪಿ–ಜೆಡಿಎಸ್‌ ಕಾರ್ಯಕರ್ತರಿಗೆ ಕರೆ ಮಾಡಿ ಪಕ್ಷಕ್ಕೆ ಬರುವಂತೆ ಆಮಿಷಯೊಡ್ಡುತ್ತಿದ್ದಾರೆ’ ಎಂದು ಮಾಜಿ ಸಂಸದ ಎಸ್‌.ಮುನಿಸ್ವಾಮಿ ಆರೋಪಿಸಿದರು. ‘ಪ.ಪಂನಲ್ಲಿ ಇಬ್ಬರನ್ನು ಮಾತ್ರ ನಾಮನಿರ್ದೇಶನ ಮಾಡಬಹುದು. ಆದರೆ 20 ಜನರಿಗೆ ಈ ಬಗ್ಗೆ ಆಮಿಷಯೊಡ್ಡಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.