ADVERTISEMENT

ಅಪಘಾತ ತಪ್ಪಿಸಲು ಮಾರ್ಗಸೂಚಿ ಪಾಲಿಸಿ

ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ‍್ತಾಹ ಸಭೆಯಲ್ಲಿ ಸಂಸದ ಎಸ್‌.ಮುನಿಸ್ವಾಮಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 4:50 IST
Last Updated 18 ಫೆಬ್ರುವರಿ 2021, 4:50 IST
ಕೋಲಾರದಲ್ಲಿ ಬುಧವಾರ ನಡೆದ ರಸ್ತೆ ಸುರಕ್ಷಾ ಸಪ್ತಾಹ ಸಭೆಯಲ್ಲಿ ಸಂಸದ ಎಸ್‌.ಮುನಿಸ್ವಾಮಿ ಮಾತನಾಡಿದರು. ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಎಸ್ಪಿ ಕಾರ್ತಿಕ್‌ ರೆಡ್ಡಿ ಇದ್ದರು
ಕೋಲಾರದಲ್ಲಿ ಬುಧವಾರ ನಡೆದ ರಸ್ತೆ ಸುರಕ್ಷಾ ಸಪ್ತಾಹ ಸಭೆಯಲ್ಲಿ ಸಂಸದ ಎಸ್‌.ಮುನಿಸ್ವಾಮಿ ಮಾತನಾಡಿದರು. ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಎಸ್ಪಿ ಕಾರ್ತಿಕ್‌ ರೆಡ್ಡಿ ಇದ್ದರು   

ಕೋಲಾರ: ‘ಜಿಲ್ಲೆಯಲ್ಲಿ ಅತಿ ಹೆಚ್ಚು ಅಪಘಾತ ಸಂಭವಿಸುವ ಸ್ಥಳಗಳಲ್ಲಿ ಅಗತ್ಯ ಸುರಕ್ಷಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು. ಆದರೆ, ಈವರೆಗೆ ಅಧಿಕಾರಿಗಳು ಈ ನಿಟ್ಟಿನಲ್ಲಿ ಕೆಲಸ ಮಾಡಿಲ್ಲ’ ಎಂದು ಸಂಸದ ಎಸ್‌.ಮುನಿಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ‍್ತಾಹ ಸಭೆಯಲ್ಲಿ ಮಾತನಾಡಿ, ರಸ್ತೆ ಸುರಕ್ಷಿತವಾಗಿರಲು ನಡೆಸಬೇಕಾದ ಕಾಮಗಾರಿಗಳ ಬಗ್ಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ತಮಿಳುನಾಡಿನಂತಹ ರಾಜ್ಯದಲ್ಲಿ ರಸ್ತೆ ಸುರಕ್ಷಿತ ಕ್ರಮಗಳನ್ನು ಕೈಗೊಂಡ ಕಾರಣ ಅಪಘಾತಗಳು ಕಡಿಮೆಯಾಗಿದೆ. ಆದರೆ ನಮ್ಮ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಹಾಗೂ ಇತರೆ ರಸ್ತೆಗಳಲ್ಲಿ ಅ‍ಪಘಾತಗಳನ್ನು ಕಡಿಮೆ ಮಾಡಲು ಏಕೆ ಸಾಧ್ಯವಾಗಿಲ್ಲ ಎಂದು
ಪ್ರಶ್ನಿಸಿದರು.

ಕೋಲಾರದಲ್ಲಿ ರಸ್ತೆ ವಿಸ್ತರಣೆ ಮಾಡಲು ದೇವಸ್ಥಾನ, ಮಸೀದಿ, ಮಂದಿರಗಳನ್ನು ತೆರವುಗೊಳಿಸಲಾಗಿದೆ. ಜಿಲ್ಲೆಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ 42 ಬ್ಲಾಕ್‌ ಸ್ಪಾಟ್ ಗುರುತಿಸಲಾಗಿದೆ. ಮುಳಬಾಗಿಲಿನ ಕಾಂತರಾಜ ಸರ್ಕಲ್ ಬಳಿ ಹೆಚ್ಚಿನ ಅಪಘಾತಗಳಾಗುತ್ತವೆ. ಇಂತಹ ಅಪಘಾತ ವಲಯಗಳಲ್ಲಿ ಸೂಕ್ತ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಬೇಕು.
ಅಪಘಾತ ಸಂದರ್ಭದಲ್ಲಿ ತುರ್ತು ಸೇವೆಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳನ್ನು ಸೂಚನಾ ಫಲಕದಲ್ಲಿ ಪ್ರದರ್ಶಿಸಬೇಕು ಎಂದು ಸೂಚಿಸಿದರು.

ADVERTISEMENT

ರಸ್ತೆ ಬದಿಯಲ್ಲಿ ಕಸ ವಿಲೇವಾರಿ ಮಾಡುವುದು. ಹಳೆಯ ವಾಹನಗಳನ್ನು ನಿಲ್ಲಿಸುವುದು. ಹೋಟೆಲ್‍ಗಳ ಕಸವನ್ನು ಸುರಿಯುವುದು, ರಸ್ತೆಗಳನ್ನು ಅತಿಕ್ರಮಿಸುವುದು ಇಂತಹ ಅನೇಕ ಮಾನವ ತಪ್ಪುಗಳಿಂದಲೇ ಅಪಘಾತಗಳು ಆಗುತ್ತಿವೆ. ಸಾರಿಗೆ ಇಲಾಖೆಯವರು ಎಫ್‍ಸಿ ಮಾಡಿ ಪರವಾನಗಿ ನೀಡುವಾಗ ವಾಹನದ ಗುಣಮಟ್ಟವನ್ನು ಪರಿಶೀಲಿಸಿ ನೀಡಬೇಕು. ಶಾಲೆಗಳ ಬಳಿ, ಅಪಘಾತ ವಲಯಗಳ ಬಳಿ, ತಿರುವುಗಳಲ್ಲಿ ಸೂಚನ ಫಲಕಗಳನ್ನು ಅಳವಡಿಸಬೇಕು ಎಂದು ಮುನಿಸ್ವಾಮಿ ತಿಳಿಸಿದರು.

ಶಾಲಾ ಕಾಲೇಜುಗಳು ಪ್ರಾರಂಭವಾಗಿದ್ದು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಒದಗಿಸಬೇಕು. ಈ ನಿಟ್ಟಿನಲ್ಲಿ ಕೆಎಸ್ಆರ್‌ಟಿಸಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.

ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಮಾತನಾಡಿ, ಜಿಲ್ಲಾ ಆಸ್ಪತ್ರೆಗಳಲ್ಲಿ ತುರ್ತು ವಾರ್ಡ್‍ನಲ್ಲಿ 20 ಬೆಡ್‍ಗಳ ಅವಶ್ಯಕತೆ ಇರುತ್ತದೆ. ಜಿಲ್ಲಾ ಆಸ್ಪತ್ರೆಯಲ್ಲಿ 5 ಬೆಡ್‍ಗಳಿದ್ದು ಈ ಬೆಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡು ಬೆಡ್‍ಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮ ವಹಿಸಲಾಗುವುದು
ಎಂದರು.

ಅಪಘಾತ ಪ್ರಕರಣಗಳಲ್ಲಿ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡುವುದಕ್ಕೆ ಹಿಂದೇಟು ಹಾಕಬಾರದು. ವಾಹನ ಸವಾರರು ತಮ್ಮ ಪ್ರಾಣ ರಕ್ಷಣೆಗಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎನ್.ಎಂ.ನಾಗರಾಜ್, ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಗರನ್, ಸಾರಿಗೆ ಇಲಾಖೆಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.