ಕೋಲಾರ: ಶಾಸಕರಿಗೆ ಮುಖ್ಯಮಂತ್ರಿ ಸದ್ಯದಲ್ಲೇ ಬಿಡುಗಡೆ ಮಾಡಲಿರುವ ₹ 50 ಕೋಟಿ ವಿಶೇಷ ಅನುದಾನದಲ್ಲಿ ₹ 2.5 ಕೋಟಿಯನ್ನು ಗುರುಭವನ ನಿರ್ಮಾಣ ಕೊಡುತ್ತೇನೆ. ಬಹಳಷ್ಟು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಗುರುಭವನ ಕಟ್ಟಡವನ್ನು 2027 ರೊಳಗೆ ಪೂರ್ಣಗೊಳಿಸಿ ಅದೇ ಕಟ್ಟಡದಲ್ಲಿ ಶಿಕ್ಷಕರ ದಿನಾಚರಣೆ ನಡೆಸಲಾಗುವುದು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಭರವಸೆ ನೀಡಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶುಕ್ರವಾರ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಗುರುಭವನ ನಿರ್ಮಾಣಕ್ಕೆ ಐದಾರು ಬಾರಿ ಶಂಕುಸ್ಥಾಪನೆ ಮಾಡಿದ್ದರೂ ಜಿಲ್ಲೆಯ ಶಿಕ್ಷಕರ ಸಂಘಟನೆಗಳಲ್ಲಿನ ಗೊಂದಲ ಮತ್ತು ಅನುದಾನ ಕೊರತೆ ಕಾರಣ ಮುಂದೆ ಸಾಗುತ್ತಿಲ್ಲ. ಮುಂದೆ ಇಂತಹ ಪರಿಸ್ಥಿತಿ ಬರುವುದಿಲ್ಲ. ವಾರದೊಳಗೆ ಅನುದಾನಕ್ಕೆ ಅನುಮೋದನೆ ಪಡೆದು ಕಾಮಗಾರಿ ತ್ವರಿತಗೊಳಿಸಲಾಗುವುದು. ಸರ್ಕಾರಿ ನೌಕರರು ಹಾಗೂ ಶಿಕ್ಷಕರು ಸಹ ಒಂದೆರಡು ದಿನಗಳ ವೇತನ ಕೊಡಬೇಕು. ಆಗಲೂ ಸಾಲದಿದ್ದರೆ ನನ್ನ ಕೈಯಿಂದ ಆರ್ಥಿಕ ನೆರವು ನೀಡುತ್ತೇನೆ ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ‘ನಾವು ಯಾರೂ ದೇವರನ್ನು ನೋಡಿಲ್ಲ. ತಂದೆ ತಾಯಿ ನಂತರ ಕಣ್ಣಿಗೆ ಕಾಣುವ ದೇವರು ಶಿಕ್ಷಕರು. ವಿದ್ಯಾರ್ಥಿಗಳನ್ನು ತಯಾರಿಸುವ ಶಿಲ್ಪಿಗಳು. ಸರ್ಕಾರಿ ಶಾಲೆಗಳಲ್ಲಿ ಓದಿದ ಎಷ್ಟೋ ದೊಡ್ಡ ಮಟ್ಟದ ಅಧಿಕಾರಿಗಳು ಇದ್ದು ಅವರಿಂದಲೂ ಸಹಾಯ ಪಡೆಯಬೇಕು. ಸಾಧ್ಯವಾದರೆ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಬೇಕು, ಹಳೆ ವಿದ್ಯಾರ್ಥಿಗಳು ತಾವು ಓದಿದ ಶಾಲೆಗೆ ಸೌಲಭ್ಯ ಕಲ್ಪಿಸಿಕೊಡಬೇಕು. ಎಲ್ಲವನ್ನೂ ಸರ್ಕಾರ ಮಾಡಲು ಸಾಧ್ಯವಿಲ್ಲ’ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಎಂ.ಆರ್.ರವಿ ಮಾತನಾಡಿ, ‘ಶಿಕ್ಷಕರಿಗೆ ಪ್ರತಿ ಕ್ಲಾಸ್ ಕೂಡ ಅಗ್ನಿ ಪರೀಕ್ಷೆ. ನಿರಂತರ ಕಲಿಕೆಯಲ್ಲಿ ತೊಡಗಬೇಕು. ಪಾಠ ಮಾಡುತ್ತಾ ಬೆಳೆಯಬೇಕು. ನನಗೆ ಶಿಕ್ಷಕರ ಬಗ್ಗೆ ಸಾತ್ವಿಕ ಕೋಪವಿದೆ. ಏಕೆಂದರೆ ಸಂದರ್ಶನ ಎದುರಿಸುವ ಕಲೆಯನ್ನು ನನಗೆ ಯಾರೂ ಹೇಳಿ ಕೊಡಲಿಲ್ಲ. ಶಿಕ್ಷಕರ ಬೋಧನೆ ಪುಸ್ತಕ ಜ್ಞಾನಕ್ಕೆ ಸೀಮಿತವಾಗಿದೆ. ವ್ಯಕ್ತಿತ್ವ ಸುಧಾರಣೆಗೆ ಆದ್ಯತೆ ಕೊಡಬೇಕು. ಚಾರಿತ್ರ್ಯ ತುಂಬಬೇಕು. ವಿದ್ಯಾರ್ಥಿಗಳಿಗೆ ಪ್ರಪಂಚ ತೋರಿಸಬೇಕು. ಇಲ್ಲದಿದ್ದರೆ ತಮ್ಮ ಬೋಧನೆ ಯಶಸ್ವಿಯಾಗುವುದಿಲ್ಲ. ಶಿಕ್ಷಕರ ಖಾಸಗಿ ವರ್ತನೆ ಕೂಡ ಚೆನ್ನಾಗಿರಬೇಕು. ಏಕೆಂದರೆ ವಿದ್ಯಾರ್ಥಿಗಳು, ಸಮಾಜ ಗಮನಿಸುತ್ತಿರುತ್ತದೆ’ ಎಂದು ಅಭಿಪ್ರಾಯಪಟ್ಟರು.
ಸರ್ಕಾರಿ ಶಾಲೆ ಮುಚ್ಚಲು ಕಾರಣ ಏನು? ದಾಖಲಾತಿ ಕಡಿಮೆ ಏಕೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ನುಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಮಾತನಾಡಿ, ‘ಎಲ್ಲರೂ ಏನನ್ನಾದರೂ ಕೊಡಬೇಕಾದರೆ ಜಿಪುಣತನ ತೋರಿಸುತ್ತೇವೆ. ಆದರೆ, ಶಿಕ್ಷಕರು ಮಾತ್ರ ತಮ್ಮ ಇಡೀ ಜೀವನವನ್ನು ಚೌಕಾಸಿ ಮಾಡದೆ ವಿದ್ಯಾರ್ಥಿಗಳಿಗೆ ಮುಡಿಪಾಗಿಟ್ಟಿದ್ದಾರೆ. ಮರಗಳು ನೀಡುವ ಹಣ್ಣುಗಳಂತೆ ವಿದ್ಯಾರ್ಥಿಗಳನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ. ಸಾವಿರಾರು ಮಂದಿಗೆ ದಾರಿ ತೋರಿಸುತ್ತಿದ್ದಾರೆ. ತುಂಬಾ ಗೌರವ ಪಡೆಯುವ ವೃತ್ತಿ ಕೂಡ. ಪೋಷಕರನ್ನು ಬಿಟ್ಟರೆ ಅತಿ ಹೆಚ್ಚು ನೆನಪಿಸಿಕೊಳ್ಳುವುದು ಶಿಕ್ಷಕರನ್ನು’ ಎಂದರು.
ಒಂದು ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲು ಮುಖ್ಯ ಕಾರಣ ಶಿಕ್ಷಕರು. ಮನುಷ್ಯ ಎಂಬ ಕಲ್ಲನ್ನು ಶಿಲೆಯಾಗಿ ಮಾಡುವುದು ಶಿಕ್ಷಕರು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಉತ್ತಮ ಸಮಾಜಕ್ಕಾಗಿ, ದೇಶದ ನಿರ್ಮಾಣಕ್ಕಾಗಿ ಬುನಾದಿ ಹಾಕುವವರು ಶಿಕ್ಷಕರು ಎಂದು ಬಣ್ಣಿಸಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎ.ಅಜಯ್ ಕುಮಾರ್ ಮಾತನಾಡಿ, ‘ನಮ್ಮ ಮೊದಲ ರೋಲ್ ಮಾಡೆಲ್ ಶಿಕ್ಷಕರು. ತಂದೆ ತಾಯಿ ಬಿಟ್ಟರೆ ಅತಿ ಹೆಚ್ಚು ಗೌರವ ಕೊಡುವುದು ಶಿಕ್ಷಕರಿಗೆ ಮಾತ್ರ. ಸರ್ಕಾರಿ ನೌಕರರು ಹೆಚ್ಚು ಶಿಕ್ಷಕರಾಗಿದ್ದಾರೆ. ಗುರುಭವನ ನಿರ್ಮಾಣ ಬಾಕಿ ಉಳಿದಿದ್ದು, ಸಹಕಾರ ನೀಡುತ್ತೇವೆ. ಸರ್ಕಾರಿ ನೌಕರರ ಒಂದು ದಿನದ ವೇತನ ನೀಡಲು ಶೀಘ್ರವೇ ಸಭೆ ನಡೆಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಡಿಡಿಪಿಐ ಅಲ್ಮಾಸ್ ಪರ್ವೀನ್ ತಾಜ್ ಮಾತನಾಡಿ, ‘ಶಾಲಾ ಶಿಕ್ಷಣದಲ್ಲಿ ಎಐಗೆ ಆದ್ಯತೆ ನೀಡಲು ಕ್ರಮ ವಹಿಸಲಾಗುತ್ತಿದೆ. ಹಳೆ ವಿದ್ಯಾರ್ಥಿಗಳು ಶಾಲಾಭಿವೃದ್ಧಿಗೆ ಸಹಾಯ ಮಾಡಬೇಕು. ಸರ್ಕಾರದಿಂದ ಎಲ್ಲಾ ಸೌಲಭ್ಯ ನೀಡಲಾಗುತ್ತಿದೆ. ಎಲ್ಲರ ಉದ್ದೇಶ ಗುಣಾತ್ಮಕ ಶಿಕ್ಷಣ ನೀಡುವುದಾಗಿದೆ’ ಎಂದರು.
ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ಸರ್ಕಾರಿ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಒಟ್ಟು 18 ಶಿಕ್ಷಕರನ್ನು ಹಾಗೂ ನಿವೃತ್ತಿ ಶಿಕ್ಷಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ನಗರಸಭೆ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಬಿಇಒ ಮಧುಮಾಲತಿ, ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳಾದ ಎಸ್.ಚೌಡಪ್ಪ, ಮುರಳಿ ಮೋಹನ್, ನಾಗರಾಜ್, ಮುನಿಯಪ್ಪ, ಅಪ್ಪೇಗೌಡ, ಶಿವಕುಮಾರ್, ಸಿ.ವಿ.ನಾಗರಾಜ್, ವಿಷಯ ಪರಿವೀಕ್ಷಕ ಶಂಕರೇಗೌಡ, ರಮೇಶ್, ಮಂಜುಳಾ ಹಾಗೂ ಶಿಕ್ಷಕರು ಇದ್ದರು.
ಶಾಸಕರ ವಿಶೇಷ ಅನುದಾನದಲ್ಲಿ ಗುರುಭವನ ನಿರ್ಮಾಣ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಗುರುಭವನ 18 ಶಿಕ್ಷಕರಿಗೆ ಜಿಲ್ಲಾಮಟ್ಟದ ಅತ್ಯತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ
ಸಿ.ಎಂ.ನೀಡಲಿರುವ ₹ 50 ಕೋಟಿ ವಿಶೇಷ ಅನುದಾನದಲ್ಲಿ ₹ 35 ಕೋಟಿ ರಸ್ತೆಗೆ ಬೇಕು. ₹12.5 ಕೋಟಿ ಖರ್ಚಿನ ವಿವೇಚನೆಗೆ ನನಗೆ ಬಿಟ್ಟಿದ್ದು ದೇಗುಲ ಅಭಿವೃದ್ಧಿ ವಿವಿಧ ಕಾಮಗಾರಿಗೆ ಕೊಡುತ್ತೇನೆಕೊತ್ತೂರು ಮಂಜುನಾಥ್ ಶಾಸಕ
ಶಿಕ್ಷಕರು ಯಾವಾಗಲೂ ಸರಿ ಇರುವುದನ್ನೇ ಮಾತನಾಡಬೇಕು. ಶಿಕ್ಷಕರು ಏನನ್ನು ಹೇಳುತ್ತಾರೋ ಅದನ್ನು ವಿದ್ಯಾರ್ಥಿಗಳು ಕಲಿಯುತ್ತಾರೆ. ನಿತ್ಯ ಅರ್ಧ ಗಂಟೆ ಮಕ್ಕಳಿಗೆ ನಾಗರಿಕ ವರ್ತನೆ ಹೇಳಿಕೊಡಿನಿಖಿಲ್ ಬಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ವೈದ್ಯರು ಕೆಟ್ಡವರಾಗಿದ್ದರೆ ಒಂದು ವ್ಯಕ್ತಿ ಸಾಯಬಹುದು. ಒಬ್ಬ ಎಂಜಿನಿಯರ್ ಕೆಟ್ಟವರಾದರೆ ಒಂದು ಕಟ್ಟಡ ಬೀಳಬಹುದು. ಆದರೆ ಒಬ್ಬ ಶಿಕ್ಷಕ ಕೆಟ್ಟವರಾದರೆ ಇಡೀ ಸಮಾಜ ಕೆಟ್ಟದಾಗುತ್ತದೆಎಂ.ಆರ್.ರವಿ ಜಿಲ್ಲಾಧಿಕಾರಿ
‘ನಾವು ಖಾಸಗಿ ವ್ಯವಸ್ಥೆಗೆ ಮಾರು ಹೋಗುತ್ತಿದ್ದೇವೆ. ಸರ್ಕಾರಿ ಶಾಲೆಗಳು ಏಕೆ ಮುಚ್ಚುತ್ತಿವೆ? ದಾಖಲಾತಿ ಏಕೆ ಕುಸಿಯುತ್ತಿದೆ ಎಂಬುದರ ಬಗ್ಗೆ ಅಧ್ಯಯನ ನಡೆಯಬೇಕು. ಸರ್ಕಾರ ವಿವಿದ ಸೌಲಭ್ಯ ನೀಡಿದರೂ ದಾಖಲಾತಿ ಕಡಿಮೆ ಆಗುತ್ತಿದೆ. ಉತ್ತಮ ವಾತಾವರಣ ನಿರ್ಮಿಸುವ ಕೆಲಸ ನಡೆಯಬೇಕು ಗುಣಮಟ್ಟದ ಶಿಕ್ಷಣ ನೀಡಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.