ADVERTISEMENT

ಕೋಲಾರ: ಎಲ್ಲೆಡೆ ಹನುಮ ಜಯಂತಿ ಸಂಭ್ರಮ

ಶ್ರದ್ಧಾಭಕ್ತಿಯಿಂದ ಆಚರಣೆ, ಇಡೀ ದಿನ ಹರಿದು ಬಂದ ಭಕ್ತರ ಸಮೂಹ, ವಿವಿಧೆಡೆ ಅನ್ನದಾಸೋಹ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 6:43 IST
Last Updated 3 ಡಿಸೆಂಬರ್ 2025, 6:43 IST
ಕೋಲಾರ ಹೊರವಲಯದ ಕೊಂಡರಾಜನಹಳ್ಳಿ ವರಪ್ರಸಾದ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು
ಕೋಲಾರ ಹೊರವಲಯದ ಕೊಂಡರಾಜನಹಳ್ಳಿ ವರಪ್ರಸಾದ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು   

ಕೋಲಾರ: ಜಿಲ್ಲೆಯ ಎಲ್ಲೆಡೆ ಮಂಗಳವಾರ ಹನುಮದ್ವ್ರತವನ್ನು ಹನುಮ ಜಯಂತಿಯಾಗಿ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.

ನಗರ ಮತ್ತು ಗ್ರಾಮೀಣ ಪ್ರದೇಶದ ಎಲ್ಲಾ ಆಂಜನೇಯ ಹಾಗೂ ಶ್ರೀರಾಮನ ದೇವಾಲಯಗಳಲ್ಲಿ ವಿಶೇಷ ಪೂಜೆ, ಹೂವಿನ ಅಲಂಕಾರ, ಭಜನೆ, ಅನ್ನದಾಸೋಹ ನಡೆಯಿತು. ಇಡೀ ದಿನ ಭಕ್ತರ ಸಮೂಹವೇ ಹರಿದು ಬಂದಿತು.

ಪೌರಾಣಿಕ, ಐತಿಹಾಸಿಕ ಹಿನ್ನೆಲೆಯ ಹತ್ತಾರು ಹನುಮಂತ ದೇವಾಲಯಗಳ ಜೊತೆಗೆ ಹೊಸ ಬಡಾವಣೆಗಳಲ್ಲಿಯೂ ನಿರ್ಮಿಸಲಾಗಿರುವ ಅನೇಕ ಹನುಮಂತ ದೇವಾಲಯಗಳು ಜಿಲ್ಲೆಯಲ್ಲಿವೆ.

ADVERTISEMENT

ಗಲ್ಲಿಗೊಂದರಂತೆ ರಸ್ತೆ ಬದಿಯ ಕನಿಷ್ಠ ಪ್ರತಿ 2 ರಿಂದ 3 ಕಿ.ಮೀಗೆ ಒಂದು ಹನುಮನ ದೇವಾಲಯವನ್ನು ಕಾಣಬಹುದಾಗಿದೆ. ನಗರದಲ್ಲಿಯಂತೂ ಹನುಮಾನ್ ಜಯಂತಿಯಂದು ಪ್ರತಿ ರಸ್ತೆಯಲ್ಲಿಯೂ ಪೂಜೆ, ಭಜನೆ, ರಥೋತ್ಸವ ನಡೆಯುತ್ತದೆ.

ಕೋಲಾರದಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸುವ ಭಕ್ತಾದಿಗಳು ಕೊಂಡರಾಜನಹಳ್ಳಿ ಆಂಜನೇಯನಿಗೆ ಕೈಮುಗಿದು ಮುಂದೆ ಸಾಗಿದರೆ, ಕೋಲಾರಕ್ಕೆ ಬರುವವರು ಕೊಂಡರಾಜನಹಳ್ಳಿ ಹನುಮಂತನಿಗೆ ನಮಿಸಿಯೇ ಪ್ರವೇಶಿಸುವ ವಾಡಿಕೆ ಇದೆ.

ಹನುಮ ಜಯಂತಿ ಅಂಗವಾಗಿ ಬಜರಂಗದಳದ ಮುಖಂಡರು ಸೇರಿದಂತೆ ಹಲವರು ವರಪ್ರಸಾದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಇಡೀ ದಿನ ಪ್ರಸಾದ ವಿನಿಯೋಗಕ್ಕೆ ವ್ಯವಸ್ಥೆ ಮಾಡಿದ್ದರು.

ಕೋಲಾರ ನಗರದ ಬ್ರಾಹ್ಮಣರ ಬೀದಿಯ ದೊಡ್ಡ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಅಲಂಕಾರ   

ನಗರದ ಬಸ್ ನಿಲ್ದಾಣ ಪಕ್ಕದಲ್ಲಿಯೇ ಇರುವ ಕೀಲುಕೋಟೆ ಆಂಜನೇಯ ಸ್ವಾಮಿ ದೇವಾಲಯ, ಅಲ್ಲಿಂದ ನೂರು ಮೀಟರ್ ಅಂತರದಲ್ಲಿ ಶಾರದಾ ಚಿತ್ರಮಂದಿರ ರಸ್ತೆಯಲ್ಲಿರುವ ವಕ್ಕಲೇರಿ ಆಂಜನೇಯಸ್ವಾಮಿ ದೇವಾಲಯ, ಇದರ ಮಂದಿನ ರಸ್ತೆಯ ಬ್ರಾಹ್ಮಣರ ಬೀದಿಯಲ್ಲಿರುವ ದೊಡ್ಡಾಂಜನೇಯಸ್ವಾಮಿ ದೇವಾಲಯ, ಗಾಣಿಗರ ಬೀದಿಯ ಆಂಜನೇಯಸ್ವಾಮಿ ದೇವಾಲಯ, ಹಳೇ ಅಂಚೆ ಕಚೇರಿ ಸಮೀಪ ಇರುವ ಕೋಟೆ ಬಾಗಿಲು ಪಂಚಮುಖಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ನಡೆಯಿತು.

ನಚಿಕೇತ ನಿಲಯದ ಮುಂಭಾಗ ಪೆಟ್ರೋಲ್ ಬಂಕ್ ಪಕ್ಕದಲ್ಲಿರುವ ಖೀಲೇ ಆಂಜನೇಯಸ್ವಾಮಿ ದೇವಾಲಯ, ಕುರುಬರಪೇಟೆ ಆಂಜನೇಯಸ್ವಾಮಿ ದೇವಾಲಯ, ಅಮ್ಮವಾರಿಪೇಟೆ ಆಂಜನೇಯಸ್ವಾಮಿ ದೇವಾಲಯ, ಯುವಜನ ಕೇಂದ್ರದ ಬಳಿ ಇರುವ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯ,ಎಸ್ಪಿ ಕಚೇರಿ ಮುಂಭಾಗದ ಹನುಮ ದೇವಾಲಯ, ಗಲ್‍ಪೇಟೆಯ ಉಪ್ಪಾರ ಬೀದಿಯಲ್ಲಿರುವ ಆಂಜನೇಯ ದೇವಾಲಯ, ಮುಂತಾದ ದೇಗುಲಗಳಲ್ಲಿ ಹನುಮ ಜಯಂತಿ ಅಂಗವಾಗಿ ವಿಶೇಷ ಪೂಜೆ ನಡೆಯಿತು.

ವೀರಾಂಜನೇಯ ಸ್ವಾಮಿಗೆ ಪೂಜೆ

ಹನುಮ ಜಯಂತಿ ಪ್ರಯುಕ್ತ ಕೋಲಾರ ನಗರದ ಸರ್ಕಾರಿ ಪಶು ಇಲಾಖೆ ಕಚೇರಿ ಅವರಣದಲ್ಲಿ ವೀರಾಂಜನೇಯ ಸ್ವಾಮಿ ದೇವಾಲಯಕ್ಕೆ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಪಶು ಇಲಾಖೆ ಸಿಬ್ಬಂದಿ ಪಾಲಸಂದ್ರ ಲೇಔಟ್ ಮತ್ತು ಗಲ್‍ಪೇಟೆ ಬಡಾವಣೆ ನಿವಾಸಿಗಳು ಇದ್ದರು. ಪ್ರಧಾನ ಅರ್ಚಕರು ಪುಷ್ಪಾರ್ಚನೆ ಸಲ್ಲಿಸಿ ಸಿಎಂಆರ್ ಶ್ರೀನಾಥ್ ಅವರನ್ನು ಸನ್ಮಾನಿಸಿದರು.

ಕೋಲಾರದ ಸರ್ಕಾರಿ ಪಶು ಇಲಾಖೆ ಕಚೇರಿ ಅವರಣದಲ್ಲಿರುವ ವೀರಾಂಜನೇಯ ಸ್ವಾಮಿಗೆ ಪೂಜೆ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಪಾಲಸಂದ್ರ ಹಾಗೂ ಗಲ್‍ಪೇಟೆ ಬಡಾವಣೆ ನಿವಾಸಿಗಳು ಪೂಜೆ ಸಲ್ಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.