ADVERTISEMENT

ಹೆಲಿಕಾಪ್ಟರ್‌ ಘಟಕ ಉದ್ಘಾಟನೆಗೆ ಎಲ್ಲರಿಗೂ ಇ–ಮೇಲ್‌ನಲ್ಲೇ ಆಹ್ವಾನ; ಎಂ.ಮಲ್ಲೇಶ್‌

ಕೈಗಾರಿಕೆಗಳಲ್ಲಿ ಅರ್ಹತೆ ಮೇಲೆ ಉದ್ಯೋಗ: ಸಂಸದ ಮಲ್ಲೇಶ್‌ ಬಾಬು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 6:50 IST
Last Updated 22 ಫೆಬ್ರುವರಿ 2026, 6:50 IST
ಎಂ.ಮಲ್ಲೇಶ್‌ ಬಾಬು
ಎಂ.ಮಲ್ಲೇಶ್‌ ಬಾಬು   

ಕೋಲಾರ: ಹೆಲಿಕಾಪ್ಟರ್‌ ಘಟಕ ಉದ್ಘಾಟನೆಗೆ ಶಾಸಕ ಕೊತ್ತೂರು ಮಂಜುನಾಥ್‌ ಸೇರಿದಂತೆ ಎಲ್ಲರಿಗೂ ಇ–ಮೇಲ್ ಮೂಲಕ ಆಹ್ವಾನ ನೀಡಲಾಗಿದೆ. ನನಗೂ ಇಮೇಲ್‌ನಲ್ಲಿ ಮಾಹಿತಿ ಬಂದಿದ್ದು, ಯಾವುದೇ ಆಹ್ವಾನ ಪತ್ರಿಕೆ ನೀಡಿಲ್ಲ ಎಂದು ಸಂಸದ ಎಂ.ಮಲ್ಲೇಶ್‌ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜಿಲ್ಲೆಗೆ ಹೊಸ ಕೈಗಾರಿಕೆಗಳು ಬರುವುದರಿಂದ ಉತ್ತಮ ವಾತಾವರಣ ಸೃಷ್ಟಿಯಾಗುತ್ತದೆ. ಜಮೀನು ನೀಡಿದ ರೈತರಿಗೆ ಉದ್ಯೋಗ ಸಿಗುತ್ತದೆ, ನಿರುದ್ಯೋಗ ಸಮಸ್ಯೆ ನೀಗಲು ಸಾಧ್ಯವಾಗುತ್ತದೆ. ಕೈಗಾರಿಕೆಗಳಲ್ಲಿ ಅರ್ಹತೆ ಮೇಲೆ ಉದ್ಯೋಗ ನೀಡಲಾಗುತ್ತಿದೆ’ ಎಂದರು.

ನರಸಾಪುರ ಕೈಗಾರಿಕಾ ವಲಯದಲ್ಲಿ ಕೊತ್ತೂರು ಮಂಜುನಾಥ್ ಅವರೇ ಬಹಳಷ್ಟು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಭೂಮಿಪೂಜೆ ಮಾಡಿದ್ದಾರೆ. ಆದರೆ, ಹೆಲಿಕಾಪ್ಟರ್ ಘಟಕದ ವಿಚಾರದಲ್ಲಿ ತಮಗೆ ಮಾಹಿತಿ ಇಲ್ಲವೆಂದು ಹೇಳಿದ್ದಾರೆ. ಈ ಬಗ್ಗೆ ಅವರನ್ನೇ ಕೇಳಬೇಕು ಎಂದು ಹೇಳಿದರು.

ADVERTISEMENT

ಜಿಲ್ಲೆಯಲ್ಲಿ ಹಲವು ಕೈಗಾರಿಕೆಗಳ ಸ್ಥಾಪನೆಗೆ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮುಂದೆ ಬಂದಿದ್ದು, ಜಿಲ್ಲೆಯ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದರು.

ಮಾಜಿ ಸಂಸದ ಎಸ್‌.ಮುನಿಸ್ವಾಮಿ ಮಾತನಾಡಿ, ‘ವೇಮಗಲ್‌ನಲ್ಲಿ ನಡೆದದ್ದು ರಕ್ಷಣಾ ಇಲಾಖೆಯ ಕಾರ್ಯಕ್ರಮ. ಆದರೂ ಇ-ಮೇಲ್ ಮತ್ತು ದೂರವಾಣಿ ಕರೆ ಮಾಡಿ ಮಾಹಿತಿ ನೀಡಲಾಗಿದೆ. ಸಚಿವ ಎಂ.ಬಿ.ಪಾಟೀಲ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಆದರೆ, ಕೊತ್ತೂರು ಮಂಜುನಾಥ್‌ ಏಕೆ ಭಾಗವಹಿಸಿಲ್ಲ’ ಎಂದು ಪ್ರಶ್ನಿಸಿದರು.

ಜಿಲ್ಲೆಯ ಅಭಿವೃದ್ಧಿಗೆ ಕೈಗಾರಿಕೆಗಳು ಬಂದಿದ್ದು, ಶಾಸಕರು ಖುಷಿ ಪಡಬೇಕು, ಕೈಗಾರಿಕಾ ವ್ಯಾಪ್ತಿಯ ವಿದ್ಯುತ್ ಕಂಬಗಳಿಗೆ ಟ್ರ್ಯಾಕ್ಟರ್‌ನಲ್ಲಿ ಡಿಕ್ಕಿ ಹೊಡೆಸಲಾಗುವುದು ಎಂದು ರೈತರನ್ನು ಪ್ರಚೋದನೆ ಮಾಡಿದ್ದು ಸರಿಯಾದ ಕ್ರಮವಲ್ಲ ಎಂದರು.

ಈ ವಿಚಾರದಲ್ಲಿ ದೇಶದ ವಿರೋಧಿಗಳನ್ನು ಮೆಚ್ಚಿಸುವ ರೀತಿ ಮಾತನಾಡಿದ್ದಾರೆ ಎಂದು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.