ADVERTISEMENT

ಡಿ.1ರಿಂದ ಕೋಲಾರ ಜಿಲ್ಲೆಯಲ್ಲಿ ಹೆಲ್ಮೆಟ್‌ ಕಡ್ಡಾಯ

ಆಟೊಗಳಿಗೆ ಡಿಜಿಟಲ್‌ ಮೀಟರ್‌ ಅಳವಡಿಸಿ: ಜಿಲ್ಲಾಧಿಕಾರಿ ಸತ್ಯಭಾಮ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2020, 15:16 IST
Last Updated 9 ನವೆಂಬರ್ 2020, 15:16 IST
ಕೋಲಾರದಲ್ಲಿ ಸೋಮವಾರ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಮಾತನಾಡಿದರು.
ಕೋಲಾರದಲ್ಲಿ ಸೋಮವಾರ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಮಾತನಾಡಿದರು.   

ಕೋಲಾರ: ‘ಜಿಲ್ಲೆಯಲ್ಲಿ ಡಿ.1ರಿಂದ ಅನ್ವಯವಾಗುವಂತೆ ಬೈಕ್ ಸವಾರರು ಹಾಗೂ ಹಿಂಬದಿ ಸವಾರರು ಹೆಲ್ಮೆಟ್ ಧರಿಸಬೇಕು. ಆಟೊಗಳಿಗೆ ಕಡ್ಡಾಯವಾಗಿ ಡಿಜಿಟಲ್‌ ಮೀಟರ್ ಅಳವಡಿಸಬೇಕು’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಸೂಚಿಸಿದರು.

ಇಲ್ಲಿ ಸೋಮವಾರ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿ, ‘ಹೆಲ್ಮೆಟ್‌ ಧರಿಸದ ಬೈಕ್‌ ಸವಾರರು ಮತ್ತು ಮೀಟರ್‌ ಅಳವಡಿಸದ ಆಟೊ ಚಾಲಕರ ವಿರುದ್ಧ ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸಿ’ ಎಂದು ಸಾರಿಗೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು.

‘ರಾಜ್ಯದ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಬೈಕ್‌ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಆದರೆ, ಕೋಲಾರ ಜಿಲ್ಲೆಯಲ್ಲಿ ಈ ಆದೇಶ ಜಾರಿಗೆ ಪೊಲೀಸ್‌ ಮತ್ತು ಸಾರಿಗೆ ಇಲಾಖೆಗಳು ಮೀನಮೇಷ ಎಣಿಸುತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ದೇಶದಲ್ಲಿ ಸಂಭವಿಸುತ್ತಿರುವ ಅಪಘಾತಗಳಲ್ಲಿ ಬೈಕ್‌ ಸವಾರರು ಹೆಚ್ಚಿನ ಸಂಖ್ಯೆಯಲ್ಲಿ ಮೃತಪಡುತ್ತಿದ್ದಾರೆ. ಹೆಲ್ಮೆಟ್‌ ಧರಿಸದೆ ಇರುವುದು ಇದಕ್ಕೆ ಮುಖ್ಯ ಕಾರಣ. ಅಪಘಾತಗಳಲ್ಲಿ ಸಾವು ನೋವಿನ ಪ್ರಮಾಣ ಕಡಿಮೆ ಮಾಡುವ ಉದ್ದೇಶಕ್ಕೆ ಬೈಕ್‌ ಸವಾರರು ತಪ್ಪದೇ ಹೆಲ್ಮೆಟ್‌ ಧರಿಸಬೇಕು. ಈ ಬಗ್ಗೆ ಪೊಲೀಸ್‌ ಮತ್ತು ಸಾರಿಗೆ ಇಲಾಖೆಯಿಂದ ವ್ಯಾಪಕ ಪ್ರಚಾರ ನಡೆಸಬೇಕು’ ಎಂದು ತಿಳಿಸಿದರು.

‘ಆಟೊಗಳಿಗೆ ಮೀಟರ್‌ ಅಳವಡಿಸುವುದು ಕಡ್ಡಾಯ. ಆದರೆ, ಈ ಆದೇಶ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಆಟೊ ಚಾಲಕರು ಡಿಜಿಟಲ್‌ ಮೀಟರ್‌ ಅಳವಡಿಸದೆ ಪ್ರಯಾಣಿಕರಿಂದ ಹೆಚ್ಚಿನ ಹಣ ಪಡೆಯುತ್ತಿರುವ ಬಗ್ಗೆ ಸಾಕಷ್ಟು ದೂರು ಬಂದಿವೆ. ಚಾಲಕರು ನಿಗದಿತ ಪ್ರಯಾಣ ದರಕ್ಕಿಂತ ಹೆಚ್ಚಿನ ಹಣ ಪಡೆದು ಸಾರ್ವಜನಿಕರನ್ನು ಶೋಷಿಸುತ್ತಿದ್ದಾರೆ’ ಎಂದು ಹೇಳಿದರು.

ಬಸ್ ಸೇವೆ: ‘ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಸಾರ್ವಜನಿಕರಿಗೆ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಈ ಹಿಂದೆ ಇದ್ದ ನಗರ ಸಾರಿಗೆ ಬಸ್ ಸೇವೆಯನ್ನು ಡಿ.1ರಿಂದ ಪುನರಾರಂಭಿಸಬೇಕು. ಬಸ್‌ಗಳಲ್ಲಿ ಕೋವಿಡ್‌ ಸುರಕ್ಷತಾ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು. ಜಿಲ್ಲಾಧಿಕಾರಿ ಕಚೇರಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸಬೇಕು’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಅವರಿಗೆ ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಮೃತಪಟ್ಟವರ ಬಗ್ಗೆ ಸೂಕ್ತ ಮಾಹಿತಿ ನೀಡದ ಲ್ಯಾಂಕೊ ಕಂಪನಿ ಪ್ರತಿನಿಧಿಗಳ ವಿರುದ್ಧ ಸಿಡಿಮಿಡಿಗೊಂಡ ಜಿಲ್ಲಾಧಿಕಾರಿ, ‘ಅಪಘಾತದಲ್ಲಿ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬುದೇ ನಿಮಗೆ ಗೊತ್ತಿಲ್ಲ. ಕಾಟಾಚಾರಕ್ಕೆ ಸಭೆಗೆ ಬಂದಿದ್ದೀರಿ’ ಎಂದು ತರಾಟೆಗೆ ತೆಗೆದುಕೊಂಡರು.

ಚೆಲ್ಲಾಟವಾಡಬೇಡಿ: ‘ಜಿಲ್ಲೆ ಮೂಲಕ ಹಾದು ಹೋಗುವ ಹೆದ್ದಾರಿಯಲ್ಲಿ ಹಾಗೂ ಅಕ್ಕಪಕ್ಕ ಸುರಕ್ಷತಾ ಕ್ರಮ ಕೈಗೊಂಡಿಲ್ಲ. ಬೇರೆ ಜಿಲ್ಲೆಗಳಲ್ಲಿ ಅನುಸರಿಸುವ ಸುರಕ್ಷತಾ ಕ್ರಮಗಳನ್ನು ನಮ್ಮ ಜಿಲ್ಲೆಯಲ್ಲಿ ಯಾಕೆ ಪಾಲಿಸುತ್ತಿಲ್ಲ. ಹೆದ್ದಾರಿ ನಿರ್ಮಾಣಕ್ಕಾಗಿ ಇಲ್ಲಿನ ರೈತರು ಜಮೀನು ಕೊಟ್ಟಿದ್ದಾರೆ. ಸುರಕ್ಷತೆ ನಿರ್ಲಕ್ಷಿಸಿ ಜನರ ಜೀವದ ಜತೆ ಚೆಲ್ಲಾಟವಾಡಬೇಡಿ’ ಎಂದು ಕೆಂಡಾಮಂಡಲರಾದರು.

‘ಹೆದ್ದಾರಿಯಲ್ಲಿನ ತಾತ್ಕಾಲಿಕ ಕೆಲಸಗಳನ್ನು 15 ದಿನದಲ್ಲಿ ಪೂರ್ಣಗೊಳಿಸಬೇಕು ಮತ್ತು ಹೆದ್ದಾರಿ ಸಮಸ್ಯೆಗಳನ್ನು 3 ತಿಂಗಳಲ್ಲಿ ಪರಿಹರಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸುತ್ತೇವೆ. ದಾಖಲೆಪತ್ರ ಮತ್ತು ಸೂಕ್ತ ಮಾಹಿತಿಯೊಂದಿಗೆ ಸಭೆಗೆ ಬರಬೇಕು’ ಎಂದು ಗುಡುಗಿದರು.

ಕೆಜಿಎಫ್ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಗರನ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಪ್ರಶಾಂತ್, ರಾಜ್ಯ ತ್ರಿಚಕ್ರ ವಾಹನ ಚಾಲಕರ ಸಂಘದ ಅಧ್ಯಕ್ಷ ಕೆ.ವಿ.ಸುರೇಶ್‌ಕುಮಾರ್, ಸಾರಿಗೆ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.