
ಕೆಜಿಎಫ್: ಬಂಗಾರಪೇಟೆ ಮತ್ತು ಕೆಜಿಎಫ್ ತಾಲ್ಲೂಕಿನಾದ್ಯಂತ ಡಿ.8 ರಿಂದ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ತಿಳಿಸಿದ್ದಾರೆ.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಲ್ಮೆಟ್ ಧರಿಸುವುದರ ಬಗ್ಗೆ ಈಗಾಗಲೇ ಸಾರ್ವಜನಿಕರಿಗೆ ತಿಳಿಸಲಾಗಿದೆ. ಸಾರ್ವಜನಿಕರ ಪ್ರಾಣ ರಕ್ಷಣೆ ಮುಖ್ಯ. ಕಳೆದ ಮೂರು ವರ್ಷಗಳಲ್ಲಿ ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ 216 ಅಪಘಾತಗಳು ನಡೆದಿವೆ. ಅದರಲ್ಲಿ 168 ಮಂದಿ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಶೇ. 90 ರಷ್ಟು ಮಂದಿ ಸಾವಿಗೆ ಹೆಲ್ಮೆಟ್ ಧರಿಸದೇ ಇರುವುದು ಕಾರಣವಾಗಿದೆ. ಪ್ರಸ್ತುತ ಯಾವುದೇ ದಂಡ ವಿಧಿಸಲಾಗುತ್ತಿಲ್ಲ. ಡಿ.8 ರಿಂದ ಎಲ್ಲಾ ಬೈಕ್ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯ. ಉಲ್ಲಂಘನೆಯಾದರೆ ದಂಡ ವಿಧಿಸಲಾಗುವುದು ಎಂದರು.
ಟ್ರಾಫಿಕ್ ತಪಾಸಣೆ ಮಾಡುವಾಗ ಪೊಲೀಸರಿಗೆ ಬ್ಯಾಡಿ ಕ್ಯಾಮೆರಾ ನೀಡಲಾಗುವುದು. ಪೊಲೀಸ್ ಸಿಬ್ಬಂದಿ ಸಾರ್ವಜನಿಕರ ಜೊತೆ ಎಚ್ಚರಿಕೆಯಿಂದ ವರ್ತಿಸಬೇಕು. ಸಾರ್ವಜನಿಕರೂ ಸಹ ಪೊಲೀಸರು ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕು. ಸಂಘ ಸಂಸ್ಥೆಗಳು ಉಚಿತ ಹೆಲ್ಮೆಟ್ ವಿತರಿಸಲು ಬಂದರೆ ಸ್ವಾಗತಿಸುವುದಾಗಿ ತಿಳಿಸಿದರು.
ಡ್ರಗ್ಸ್ ಮುಕ್ತ ಕೆಜಿಎಫ್ ಮಾಡಲು ಪೊಲೀಸ್ ಇಲಾಖೆ ಸತತ ಯತ್ನ ಮಾಡುತ್ತಿದೆ. ಡ್ರಗ್ಸ್ ದಂಧೆಯಲ್ಲಿ ತೊಡಗಿರುವವರ ವಿರುದ್ಧ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬೇಕು. ಅಂತಹವರ ಹೆಸರನ್ನು ಗೌಪ್ಯವಾಗಿಡಲಾಗುವುದು. ಶಿಕ್ಷಣ ಸಂಸ್ಥೆಗಳಲ್ಲಿ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸಲು ವಿದ್ಯಾರ್ಥಿ ಮತ್ತು ಪೋಷಕರ ಸಂಘವನ್ನು ರಚಿಸಲಾಗಿದೆ ಎಂದರು.
ಕೆಜಿಎಫ್‌ನಲ್ಲಿ ನಡೆದಿದ್ದ ಚಿನ್ನದ ಕಳ್ಳತನ ಪ್ರಕರಣದಲ್ಲಿ ರಾಬರ್ಟಸನ್‌ಪೇಟೆ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ಗುಜರಾತ್ ಮತ್ತು ರಾಜಸ್ತಾನಗಳಿಗೆ ಹೋಗಿ ಆರೋಪಿಗಳನ್ನು ಬಂಧಿಸಲಾಗಿದೆ. ಅರೋಪಿಗಳಿಂದ ಕೆಲ ಕಳವು ಮಾಲನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಇನ್ನೂ ಒಬ್ಬ ಆರೋಪಿ ನಾಪತ್ತೆಯಾಗಿದ್ದು, ಆತನ ಪತ್ತೆಗಾಗಿ ಶ್ರಮಿಸಲಾಗುತ್ತಿದೆ. ರಾಬರ್ಟಸನ್‌ಪೇಟೆ, ಆಂಡರಸನ್‌ಪೇಟೆ ಮತ್ತು ಬೆಮಲ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಐದು ಹಸು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಊರಿಗಾಂ ಸರ್ಕಲ್ ಇನ್‌ಸ್ಪೆಕ್ಟರ್ ನೇತೃತ್ವದ ತಂಡ ಬಂಧಿಸಿದೆ. ಐದು ಹಸುಗಳನ್ನು ರಕ್ಷಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಕತ್ತಲು ಇರುವ ಪ್ರದೇಶಗಳನ್ನು ಗುರುತಿಸಲಾಗಿದೆ. ಅಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರದ ಮೂಲಕ ತಿಳಿಸಲಾಗಿದೆ. ವಿಲ್ಹಿಂಗ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಕೆಜಿಎಫ್ ನಗರದಲ್ಲಿ ಟ್ರಾಫಿಕ್ ಉಲ್ಲಂಘನೆ ಮಾಡುವವರ ಸಂಖ್ಯೆ ಕಡಿಮೆ ಇದೆ. ರೌಡಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಕೆಲವು ಕಡೆ ಈಗೀಗ ರೌಡಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಯುವಕರನ್ನು ಗುರುತಿಸಲಾಗಿದೆ. ಅವರ ಮೇಲೆ ನಿಗಾ ಇರಿಸಲಾಗಿದೆ. ಹದಿಮೂರು ರೌಡಿಗಳನ್ನು ಗಡಿಪಾರು ಮಾಡಲಾಗಿದೆ. ಒಟ್ಟಿನಲ್ಲಿ ರೌಡಿ ಚಟುವಟಿಕೆಗಳನ್ನು ನಿಯಂತ್ರಿಸಲಾಗಿದೆ ಎಂದು ಹೇಳಿದರು.
ಡಿವೈಎಸ್‌ಪಿ ವಿ.ಲಕ್ಷ್ಮಯ್ಯ, ಸರ್ಕಲ್ ಇನ್‌ಸ್ಪೆಕ್ಟರ್ ಮಾರ್ಕಂಡೇಯ, ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಇನ್‌ಸ್ಪೆಕ್ಟರ್ ಸೋಮಶೇಖರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.