ADVERTISEMENT

ತಾಂತ್ರಿಕ ಸಮಸ್ಯೆ ಪರಿಹಾರಕ್ಕೆ ಹೆಲ್ಪ್ ಡೆಸ್ಕ್

ಪ್ಯಾಕ್ಸ್‌ ಗಣಕೀಕರಣ ಐತಿಹಾಸಿಕ ಕ್ರಮ: ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2022, 16:43 IST
Last Updated 28 ಜನವರಿ 2022, 16:43 IST
ಗಣಕೀಕರಣ, ಲೆಕ್ಕಪತ್ರ ನಿರ್ವಹಣೆ ತಂತ್ರಾಂಶ ಕುರಿತು ಕೋಲಾರದಲ್ಲಿ ಶುಕ್ರವಾರ ನಡೆದ ತರಬೇತಿ ಕಾರ್ಯಾಗಾರದಲ್ಲಿ ಪ್ಯಾಕ್ಸ್‌ ಅಧ್ಯಕ್ಷರು, ಸಿಇಒಗಳು ಹಾಗೂ ಕಂಪ್ಯೂಟರ್ ಆಪರೇಟರ್‌ಗಳು ಪಾಲ್ಗೊಂಡರು
ಗಣಕೀಕರಣ, ಲೆಕ್ಕಪತ್ರ ನಿರ್ವಹಣೆ ತಂತ್ರಾಂಶ ಕುರಿತು ಕೋಲಾರದಲ್ಲಿ ಶುಕ್ರವಾರ ನಡೆದ ತರಬೇತಿ ಕಾರ್ಯಾಗಾರದಲ್ಲಿ ಪ್ಯಾಕ್ಸ್‌ ಅಧ್ಯಕ್ಷರು, ಸಿಇಒಗಳು ಹಾಗೂ ಕಂಪ್ಯೂಟರ್ ಆಪರೇಟರ್‌ಗಳು ಪಾಲ್ಗೊಂಡರು   

ಕೋಲಾರ: ‘ಅವಿಭಜಿತ ಕೋಲಾರ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (ಪ್ಯಾಕ್ಸ್‌) ಗಣಕೀಕರಣದ ಮೂಲಕ ಐತಿಹಾಸಿಕ ಕ್ರಮ ಕೈಗೊಂಡಿರುವ ಡಿಸಿಸಿ ಬ್ಯಾಂಕ್‌ನಿಂದ ಸೊಸೈಟಿಗಳ ಗಣಕೀಕರಣದ ಆರಂಭದಲ್ಲಿ ಎದುರಾಗುವ ಸಮಸ್ಯೆಗಳ ನಿವಾರಣೆಗೆ ಹೆಲ್ಪ್ ಡೆಸ್ಕ್ ಆರಂಭಿಸಲಾಗುತ್ತಿದೆ’ ಎಂದು ಬ್ಯಾಂಕ್‌ನ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ತಿಳಿಸಿದರು.

ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಡಿಸಿಸಿ ಬ್ಯಾಂಕ್ ಮತ್ತು ಸಹಕಾರ ಇಲಾಖೆ ಸಹಯೋಗದಲ್ಲಿ ಇಲ್ಲಿ ಶುಕ್ರವಾರ ಪ್ಯಾಕ್ಸ್‌ ಅಧ್ಯಕ್ಷರು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಕಂಪ್ಯೂಟರ್ ಆಪರೇಟರ್‌ಗಳಿಗೆ ಗಣಕೀಕರಣ, ಲೆಕ್ಕಪತ್ರ ನಿರ್ವಹಣೆ ತಂತ್ರಾಂಶ ಕುರಿತು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಗಣಕೀಕರಣ ಪ್ರಕ್ರಿಯೆಯ ತಾಂತ್ರಿಕ ಸಮಸ್ಯೆಗಳ ನಿವಾರಣೆಗೆ ದೂರು ನಿರ್ವಹಣಾ ಕೇಂದ್ರ, ಹೆಲ್ಪ್‌ ಡೆಸ್ಕ್ ಆರಂಭಿಸಲಾಗಿದೆ, ದೂರು ಬಂದ 3 ಗಂಟೆಯೊಳಗೆ ಸಮಸ್ಯೆಗೆ ಪರಿಹಾರ ನೀಡಲಾಗುವುದು, ಪಾರದರ್ಶಕ ವಹಿವಾಟು, ನಂಬಿಕೆ, ವಿಶ್ವಾಸ ವೃದ್ಧಿಗೆ ಗಣಕೀಕರಣ ಕಾರಣವಾಗಲಿದೆ’ ಎಂದು ಹೇಳಿದರು.

ADVERTISEMENT

‘ದೇಶದಲ್ಲಿ ಎಲ್ಲಾ ಫ್ಯಾಕ್ಸ್‌ಗಳು ಗಣೀಕರಣವಾಗಬೇಕು ಎಂಬುದು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಆಶಯ. ಅವರ ಆಶಯಕ್ಕೂ ಮುನ್ನವೇ ಡಿಸಿಸಿ ಬ್ಯಾಂಕ್ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 194 ಪ್ಯಾಕ್ಸ್‌ಗಳ ಗಣಕೀಕರಣ ನಡೆಸುವ ಮೂಲಕ ಹೊಸ ಇತಿಹಾಸ ಬರೆದಿದೆ’ ಎಂದರು.

ಸಿಇಒಗಳಿಗೆ ತರಾಟೆ: ‘ಅವಳಿ ಜಿಲ್ಲೆಯಲ್ಲಿ 11 ಪ್ಯಾಕ್ಸ್‌ಗಳಲ್ಲಿ ಮಾತ್ರ ಗಣಕೀಕರಣ ಬಾಕಿ ಉಳಿದಿದೆ. ಇದಕ್ಕೆ ಕಾರ್ಯದರ್ಶಿಗಳ ಇಚ್ಛಾಶಕ್ತಿ ಕೊರತೆ ಕಾರಣ. ಇದು ಬ್ಯಾಂಕ್‌ನ ವ್ಯವಸ್ಥೆಗೆ ಕಪ್ಪುಚುಕ್ಕೆಯಾಗಲಿದೆ. ಹೊಣೆಯರಿತು ಕೆಲಸ ಮಾಡಿ’ ಎಂದು ಸಿಇಒಗಳನ್ನು ತರಾಟೆಗೆ ತೆಗೆದುಕೊಂಡರು.

‘ಬ್ಯಾಂಕ್ ಪ್ಯಾಕ್ಸ್‌ಗಳಿಗೆ ಸಾವಿರಾರು ಕೋಟಿ ಸಾಲ ನೀಡಿ ಸುಮ್ಮನೆ ಕುಳಿತುಕೊಳ್ಳಲು ನನ್ನ ಆಡಳಿತದಲ್ಲಿ ಸಾಧ್ಯವಿಲ್ಲ, ವಹಿವಾಟಿನಲ್ಲಿ ಲೋಪ ಕಂಡುಬಂದರೆ ಸಹಿಸುವುದಿಲ್ಲ. ಪ್ಯಾಕ್ಸ್‌ ಸಿಬ್ಬಂದಿ ಮೈಗಳ್ಳತನ ಬಿಟ್ಟು ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಿ, ಗಣೀಕರಣದಲ್ಲಿ ಕೇಂದ್ರ ಸರ್ಕಾರ ನೀಡುತ್ತಿರುವ ಆದೇಶಗಳಿಗಿಂತ ಶೇ 60ರಷ್ಟು ಮುನ್ನಡೆ ಸಾಧಿಸಿದ್ದೇವೆ. ತಂತ್ರಾಂಶ ಅಳವಡಿಕೆಯಲ್ಲಿ ಉಂಟಾಗುವ ಸಮಸ್ಯೆ ಬಗೆಹರಿಸಲು ತಜ್ಞರ ಸೂಚನೆ ಪಾಲಿಸಿ’ ಎಂದು ಸೂಚಿಸಿದರು.

ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಅ.ಮು.ಲಕ್ಷ್ಮೀನಾರಾಯಣ, ಉಪಾಧ್ಯಕ್ಷ ಎಸ್.ವಿ.ಗೋವರ್ಧನರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನೀಲಕಂಠೇಗೌಡ, ಸೋಮಣ್ಣ, ಕೆ.ವಿ.ದಯಾನಂದ್, ಸೊಣ್ಣೇಗೌಡ, ಗೋವಿಂದರಾಜು, ವೆಂಕಟರೆಡ್ಡಿ, ನಾಗಿರೆಡ್ಡಿ, ಚನ್ನರಾಯಪ್ಪ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಎನ್.ನವೀನ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.