ADVERTISEMENT

ಕನ್ನಡದ ಕಂಪು ಹೆಚ್ಚಲು ಸಹಕರಿಸಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 13:51 IST
Last Updated 19 ಏಪ್ರಿಲ್ 2021, 13:51 IST
ರಾಜ್ಯ ದೈಹಿಕ ಶಿಕ್ಷಕರ ಸಂಘದ ನಿಟಕಪೂರ್ವ ಅಧ್ಯಕ್ಷ ಇ.ಶ್ರೀನಿವಾಸಗೌಡ ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೋಮವಾರ ಕಸಾಪ ಜಿಲ್ಲಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಗೋಪಾಲಗೌಡ ಪರ ಮತ ಯಾಚಿಸಿದರು.
ರಾಜ್ಯ ದೈಹಿಕ ಶಿಕ್ಷಕರ ಸಂಘದ ನಿಟಕಪೂರ್ವ ಅಧ್ಯಕ್ಷ ಇ.ಶ್ರೀನಿವಾಸಗೌಡ ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೋಮವಾರ ಕಸಾಪ ಜಿಲ್ಲಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಗೋಪಾಲಗೌಡ ಪರ ಮತ ಯಾಚಿಸಿದರು.   

‌‌ಕೋಲಾರ: ‘ಗಡಿ ಜಿಲ್ಲೆಯಲ್ಲಿ ಕನ್ನಡದ ಕಂಪು ಹೆಚ್ಚಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಭವ್ಯ ಭವನ ನಿರ್ಮಿಸುವ ಗುರಿಯೊಂದಿಗೆ ಚುನಾವಣೆಗೆ ಸ್ಪರ್ಧಿಸಿರುವ ಗೋಪಾಲಗೌಡ ಅವರನ್ನು ಮತದಾರರು ಬೆಂಬಲಿಸಬೇಕು’ ಎಂದು ರಾಜ್ಯ ದೈಹಿಕ ಶಿಕ್ಷಕರ ಸಂಘದ ನಿಟಕಪೂರ್ವ ಅಧ್ಯಕ್ಷ ಇ.ಶ್ರೀನಿವಾಸಗೌಡ ಮನವಿ ಮಾಡಿದರು.

ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೋಮವಾರ ಶಿಕ್ಷಕರ ಮತ ಯಾಚಿಸಿ ಮಾತನಾಡಿ, ‘ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಗೋಪಾಲಗೌಡರಿಗೆ ಮತ ನೀಡಿ ಗಡಿ ಜಿಲ್ಲೆಯಲ್ಲಿ ಕನ್ನಡಪರ ಕಾರ್ಯಕ್ರಮಗಳು ಹೆಚ್ಚು ನಡೆಯಲು ಅವಕಾಶ ಕಲ್ಪಿಸಬೇಕು’ ಎಂದರು.

‘ಗೋಪಾಲಗೌಡರಿಗೆ ಕೋಲಾರ ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಆಶಯವಿದೆ. ಗಡಿ ಜಿಲ್ಲೆಯಲ್ಲಿ ಕನ್ನಡ ಭಾಷೆ, ನೆಲ, ಜಲದ ಸಮಸ್ಯೆಗಳಿಗೆ ಸ್ಪಂದನೆ ನೀಡುವ ಧ್ಯೇಯದೊಂದಿಗೆ ಕಣಕ್ಕಿಳಿದಿದ್ದಾರೆ’ ಎಂದು ಹೇಳಿದರು.

ADVERTISEMENT

‘ಗೋಪಾಲಗೌಡರು ಅಧ್ಯಕ್ಷರಾದರೆ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಅಭಿರುಚಿಯಿರುವ ಯುವಕರನ್ನು ಪ್ರೋತ್ಸಾಹಿಸಲು ಹಲವು ಕಾರ್ಯಕ್ರಮ ರೂಪಿಸುತ್ತಾರೆ. ಅವರಿಗೆ ಜಿಲ್ಲೆಯ ಸಾಹಿತ್ಯ ಚರಿತ್ರೆಯ ಸಂಪುಟ ಬಿಡುಗಡೆ ಮಾಡುವ ಕನಸಿದೆ. ಸಾಹಿತ್ಯ ಪ್ರೇಮಿಗಳು ಅವರಿಗೆ ನಾಡು ನುಡಿ ಸೇವೆಗೆ ಅವಕಾಶ ಮಾಡಿ ಕೊಡಬೇಕು’ ಎಂದು ಕೋರಿದರು.

‘ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯತ್ವ ಶುಲ್ಕ ಕಡಿಮೆ ಮಾಡಿಸುವ ಮೂಲಕ ಜಿಲ್ಲೆಯ ಪ್ರತಿ ಸುಶಿಕ್ಷಿತರನ್ನು ಸದಸ್ಯರಾಗಿಸುವ ಆಶಯವಿದೆ. ಕನ್ನಡ ನಾಡು, ನುಡಿಗಾಗಿ ನಡೆಯುವ ಎಲ್ಲಾ ಹೋರಾಟಗಳಲ್ಲೂ ಕಸಾಪವನ್ನು ಮುಂಚೂಣಿಗೆ ತರುವ ಗೋಪಾಲಗೌಡರ ಧ್ಯೇಯಕ್ಕೆ ಬೆಂಬಲ ನೀಡಬೇಕು’ ಎಂದು ತಿಳಿಸಿದರು.

ಅರಾಭಿಕೊತ್ತನೂರು ಪ್ರೌಢ ಶಾಲೆ ಪ್ರಭಾರ ಮುಖ್ಯ ಶಿಕ್ಷಕ ವೆಂಕಟರೆಡ್ಡಿ, ಶಿಕ್ಷಕರಾದ ಎಸ್.ಅನಂತಪದ್ಮನಾಭ್, ಭವಾನಿ, ಶ್ವೇತಾ, ಫರೀದಾ, ಶ್ರೀನಿವಾಸಲು, ಡಿ.ಚಂದ್ರಶೇಖರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.