ADVERTISEMENT

ಕೋಲಾರ| ಕ್ಯಾನ್ಸರ್‌ಪೀಡಿತ ಬಾಲಕಿಗೆ ಶಾಸಕ ಕೆ.ಶ್ರೀನಿವಾಸಗೌಡ ನೆರವಿನ ಭರವಸೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 11:19 IST
Last Updated 24 ಡಿಸೆಂಬರ್ 2019, 11:19 IST
ಕೋಲಾರ ತಾಲ್ಲೂಕಿನ ಬೆತ್ತನಿ ಗ್ರಾಮದಲ್ಲಿ ಸೋಮವಾರ ಶಾಸಕ ಕೆ.ಶ್ರೀನಿವಾಸಗೌಡ ಕ್ಯಾನ್ಸರ್‌ಪೀಡಿತ ಬಾಲಕಿ ಕಾರುಣ್ಯಗೆ ಕೇಕ್‌ ತಿನ್ನಿಸಿ ಚಿಕಿತ್ಸೆಗೆ ಹಣಕಾಸು ನೆರವು ನೀಡುವ ಭರವಸೆ ಕೊಟ್ಟರು.
ಕೋಲಾರ ತಾಲ್ಲೂಕಿನ ಬೆತ್ತನಿ ಗ್ರಾಮದಲ್ಲಿ ಸೋಮವಾರ ಶಾಸಕ ಕೆ.ಶ್ರೀನಿವಾಸಗೌಡ ಕ್ಯಾನ್ಸರ್‌ಪೀಡಿತ ಬಾಲಕಿ ಕಾರುಣ್ಯಗೆ ಕೇಕ್‌ ತಿನ್ನಿಸಿ ಚಿಕಿತ್ಸೆಗೆ ಹಣಕಾಸು ನೆರವು ನೀಡುವ ಭರವಸೆ ಕೊಟ್ಟರು.   

ಕೋಲಾರ: ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿರುವ ತಾಲ್ಲೂಕಿನ ಬೆತ್ತನಿ ಗ್ರಾಮದ 7 ವರ್ಷದ ಬಾಲಕಿಯ ಚಿಕಿತ್ಸೆಗೆ ಇಫ್ಕೋ ಟೋಕಿಯೊ ಸಂಸ್ಥೆಯಿಂದ ₹ 1 ಲಕ್ಷ ಹಣಕಾಸು ನೆರವು ನೀಡುವುದಾಗಿ ಶಾಸಕ ಕೆ.ಶ್ರೀನಿವಾಸಗೌಡ ಭರವಸೆ ನೀಡಿದರು.

ಬೆತ್ತನಿ ಗ್ರಾಮದ ಸುಮಂತ್‌ಕುಮಾರ್ ಮತ್ತು ಚೈತ್ರಾ ದಂಪತಿಯ ಮಗಳು ಕಾರುಣ್ಯ ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾಳೆ. ಕಾಯಿಲೆ ಪ್ರಥಮ ಹಂತದಲ್ಲಿರುವುದರಿಂದ ಶೀಘ್ರವೇ ಚಿಕಿತ್ಸೆ ನೀಡಿದರೆ ಬಾಲಕಿ ಗುಣಮುಖಳಾಗುತ್ತಾಳೆ ಎಂದು ವೈದ್ಯರು ಪೋಷಕರಿಗೆ ತಿಳಿಸಿದ್ದಾರೆ. ಬಾಲಕಿಯ ಅನಾರೋಗ್ಯದ ಸಂಗತಿ ತಿಳಿದ ಶ್ರೀನಿವಾಸಗೌಡರು ಆಕೆಯ ಮನೆಗೆ ಸೋಮವಾರ ಭೇಟಿ ನೀಡಿ ಪೋಷಕರಿಗೆ ಆತ್ಮಸ್ಥೈರ್ಯ ತುಂಬಿದರು. ಅಲ್ಲದೇ, ಬಾಲಕಿಗೆ ಕೇಕ್‌ ತಿನ್ನಿಸಿ ಕ್ರಿಸ್‌ಮಸ್‌ ಹಬ್ಬದಶುಭಾಶಯ ಕೋರಿದರು.

‘ಬಾಲಕಿ ಕಾರುಣ್ಯಳ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಇಫ್ಕೋ ಟೋಕಿಯೊ ಸಂಸ್ಥೆಯಿಂದ ಚಿಕಿತ್ಸೆಗೆ ಆರ್ಥಿಕ ನೆರವು ಕೊಡಿಸುತ್ತೇನೆ. ಪೋಷಕರು ಧೃತಿಗೆಡದೆ ಬಾಲಕಿಗೆ ಉತ್ತಮ ಚಿಕಿತ್ಸೆ ಕೊಡಿಸುವತ್ತ ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಬಾಳಿ ಬದುಕಬೇಕಾದ ಈ ಬಾಲಕಿ ಕ್ಯಾನ್ಸರ್‌ಗೆ ತುತ್ತಾಗಿರುವುದು ದುರ್ದೈವ. ಬಾಲಕಿಗೆ ಚಿಕಿತ್ಸೆ ನೀಡಿದರೆ ಬದುಕುಳಿಯುತ್ತಾಳೆ ಎಂದು ವೈದ್ಯರು ಹೇಳಿರುವುದರಿಂದ ಆರ್ಥಿಕ ಸ್ಥಿತಿವಂತರು ಚಿಕಿತ್ಸೆಗೆ ಹಣಕಾಸು ನೆರವು ನೀಡಬೇಕು’ ಎಂದು ಮನವಿ ಮಾಡಿದರು.

‘ರಾಜಕಾರಣಕ್ಕಾಗಿ, ಆಡಂಬರಕ್ಕಾಗಿ ಉಳ್ಳವರು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ದೇವರ ಸಮನಾದ ಇಂತಹ ಮಕ್ಕಳಿಗೆ ಹಣಕಾಸು ನೆರವು ನೀಡಿದರೆ ಬದುಕು ಸಾರ್ಥಕ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಹೇಳಿದರು.

ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ರಮೇಶ್ ಬಾಲಕಿಯ ಚಿಕಿತ್ಸೆಗೆ ₹ 10 ಸಾವಿರ ನೆರವು ನೀಡಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ.ಎಲ್.ಅನಿಲ್‌ಕುಮಾರ್‌, ಸೋಮಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.