ADVERTISEMENT

ಹಿಂದಿ ಹೇರಿಕೆ: ರಾಜ್ಯದೆಲ್ಲೆಡೆ ಹೋರಾಟ

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ: ವಾಟಾಳ್‌ ನಾಗರಾಜ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 16:50 IST
Last Updated 25 ಸೆಪ್ಟೆಂಬರ್ 2021, 16:50 IST
ಕನ್ನಡ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಮತ್ತು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಮಹಾ ಮಂಡಳದ ಸಹಯೋಗದಲ್ಲಿ ಕೋಲಾರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಜಿಲ್ಲಾ ಸಂಘಟಕ ಬಾಬು, ಪತ್ರಕರ್ತ ಕೆ.ಎಸ್.ಗಣೇಶ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ಎಂ.ರಾಘವೇಂದ್ರ, ಸಾವಯವ ಕೃಷಿಕ ಅರಿವು ಪ್ರಭಾಕರ್, ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ.ಮಂಜುಳಾ ಅವರನ್ನು ಸನ್ಮಾನಿಸಲಾಯಿತು
ಕನ್ನಡ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಮತ್ತು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಮಹಾ ಮಂಡಳದ ಸಹಯೋಗದಲ್ಲಿ ಕೋಲಾರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಜಿಲ್ಲಾ ಸಂಘಟಕ ಬಾಬು, ಪತ್ರಕರ್ತ ಕೆ.ಎಸ್.ಗಣೇಶ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ಎಂ.ರಾಘವೇಂದ್ರ, ಸಾವಯವ ಕೃಷಿಕ ಅರಿವು ಪ್ರಭಾಕರ್, ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ.ಮಂಜುಳಾ ಅವರನ್ನು ಸನ್ಮಾನಿಸಲಾಯಿತು   

ಕೋಲಾರ: ‘ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಹಿಂದಿ ಹೇರಿಕೆ ವಿರೋಧಿಸಿ ರಾಜ್ಯದೆಲ್ಲೆಡೆ ಹೋರಾಟ ನಡೆಸುತ್ತೇವೆ’ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಎಚ್ಚರಿಕೆ ನೀಡಿದರು.

ಕನ್ನಡ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಮತ್ತು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಮಹಾ ಮಂಡಳದ ಸಹಯೋಗದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

‘ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ಏಕೀಕರಣಗೊಳಿಸಿ ಹೊಸದಾಗಿ ಉದಯವಾದ ಕರ್ನಾಟಕವನ್ನು ಕೆಟ್ಟ ರಾಜಕಾರಣಿಗಳು ರಾಜಕೀಯ ಲಾಭಕ್ಕೆ ಜಾತಿವಾದಿ ಕರ್ನಾಟಕವಾಗಿ ಪರಿವರ್ತಿಸುತ್ತಿರುವುದು ಅಕ್ಷಮ್ಯ ಅಪರಾಧ. ಬ್ಯಾಂಕ್‌, ಅಂಚೆ ಕಚೇರಿಗಳು, ರೈಲ್ವೆ ಇಲಾಖೆ ಸಂಪೂರ್ಣ ಹಿಂದಿಮಯವಾಗುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ರಾಜ್ಯದಲ್ಲಿ ಪ್ರಬಲವಾಗಿ ಜಾತಿವಾದ ಬೆಳೆಸುತ್ತಾ ಜಾತಿ ಹೆಸರಿನಲ್ಲಿ ಅಕ್ರಮ, ಅನ್ಯಾಯ ಮಾಡುತ್ತಿದ್ದಾರೆ. ಜಾತಿವಾದ ಬೆಳೆಸುವ ಪಾಪದ ಕೆಲಸದಲ್ಲಿ ತೊಡಗಿರುವ ರಾಜಕಾರಣಿಗಳಿಂದ ಕನ್ನಡ ಭಾಷೆ ಬೆಳವಣಿಗೆಗೆ ಧಕ್ಕೆಯಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕನ್ನಡವನ್ನೇ ಪ್ರಮುಖ ಭಾಷೆಯಾಗಿ ಬಳಸಬೇಕು. ಈ ನಿಟ್ಟಿನಲ್ಲಿ ಹೋರಾಟ ಮುಂದುವರಿಸುತ್ತೇವೆ’ ಎಂದರು.

‘ಕನ್ನಡ ಭಾಷಿಕರಿರುವ ಸೊಲ್ಲಾಪುರ, ಕಾಸರಗೋಡು, ತಾಳವಾಡಿಯು ಕರ್ನಾಟಕಕ್ಕೆ ಸೇರ್ಪಡೆಯಾಗಬೇಕು. ಕನ್ನಡ ಭಾಷೆ ಬೆಳವಣಿಗೆಗೆ ಅಡ್ಡಿಯಾಗಿರುವ ತಮಿಳರ ಉದ್ಧಟತನ ಪ್ರತಿಭಟಿಸಿ ಕೆಜಿಎಫ್‌ ನಗರಕ್ಕೆ ನ.2ರಂದು ಮುತ್ತಿಗೆ ಹಾಕುತ್ತೇವೆ. ಕೆಜಿಎಫ್ ತಮಿಳರ ಭದ್ರಕೋಟೆಯಾಗಲು ಬಿಡುವುದಿಲ್ಲ. ನನ್ನನ್ನು ಜೈಲಿಗೆ ಹಾಕಿದರೂ ಹೆದರದೆ ಕನ್ನಡಕ್ಕೆ ಪ್ರಾಶಸ್ತ್ಯ ಸಿಗುವವರೆಗೂ ಹೋರಾಟ ಮಾಡುತ್ತೇನೆ’ ಎಂದು ಹೇಳಿದರು.

ಭಾಷಾಭಿಮಾನದ ಕೊರತೆ: ‘ಕನ್ನಡಿಗರಲ್ಲಿ ಭಾಷಾಭಿಮಾನದ ಕೊರತೆಯಿದೆ. ಕನ್ನಡ ಭಾಷೆಯ ಅಭಿವೃದ್ಧಿಗೆ ಕನ್ನಡಿಗರಲ್ಲಿ ಹೆಚ್ಚಿನ ಅಭಿಮಾನ ಮೂಡಬೇಕು. ನಾಡಿನ ನೆಲ, ಜಲ, ಭಾಷೆ, ಗಡಿಗೆ ಸಂಬಂಧಿಸಿದ ಸಮಸ್ಯೆ ಬಂದಾಗಲೆಲ್ಲಾ ರೈತಪರ, ದಲಿತಪರ, ಕನ್ನಡಪರ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡುತ್ತೇವೆ. ಪರಭಾಷಿಕರಿಗೆ ಕನ್ನಡ ಕಲಿಸುವುದನ್ನು ಹೋರಾಟದ ಭಾಗವಾಗಿಸಿಕೊಳ್ಳಬೇಕು’ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಸಲಹೆ ನೀಡಿದರು.

‘ಕರ್ನಾಟಕದಲ್ಲಿ ಬೇರೆ ಭಾಷೆಗಳ ಪ್ರಭಾವವಿದ್ದರೂ ಸಂಕುಚಿತ ಮನೋಭಾವ ತೊರೆದು ನಾಡಿನ ಆಡಳಿತ ಭಾಷೆ ಕನ್ನಡಕ್ಕೆ ಮಹತ್ವ ನೀಡಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ. ಕನ್ನಡಪರ ಸಂಘಟನೆಗಳು ಬೇರೆ ದೇಶ, ರಾಜ್ಯದಿಂದ ವಲಸೆ ಬರುವ ಪರಭಾಷಿಕರಿಗೆ ಕನ್ನಡದ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ಕಿವಿಮಾತು ಹೇಳಿದರು.

ಕನ್ನಡ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟಪ್ಪ, ಕರ್ನಾಟಕ ರಕ್ಷಣಾ ವೇದಿಕೆ ಸಿಂಹಸೇನೆ ಅಧ್ಯಕ್ಷ ಜಯದೇವ ಪ್ರಸನ್ನ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಮಹಾಮಂಡಳದ ಸಂಸ್ಥಾಪಕ ಅಧ್ಯಕ್ಷ ಕೆ.ಸಿ.ಸಂತೋಷ್, ನೀರಾವರಿ ಹೋರಾಟ ಸಮಿತಿ ಸಂಚಾಲಕ ವಿ.ಕೆ.ರಾಜೇಶ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.