
ಕೋಲಾರ: ನಗರದಲ್ಲಿ ಜ.31 ರಂದು ಹಿಂದೂ ಸಮಾಜೋತ್ಸವ ನಡೆಸಲು ಸಿದ್ಧತೆ ನಡೆಸಿರುವ ಹಿಂದೂ ಸಮಾಜೋತ್ಸವ ಸಮಿತಿಯಿಂದ ನಗರದ ಕೋಲಾರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ಭಿತ್ತಿಪತ್ರ, ಸ್ಟಿಕ್ಕರ್‌ಳನ್ನು ಸಂಸದ ಎಂ.ಮಲ್ಲೇಶಬಾಬು ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು, ‘ಹಿಂದೂ ಸಮಾಜೋತ್ಸವದ ಮೂಲಕ ಇಡೀ ಸಮಾಜವನ್ನು ಒಗ್ಗೂಡಿಸುವ ಕೆಲಸವಾಗಲಿದೆ. ನಮ್ಮ ಸಂಸ್ಕೃತಿ, ಸಂಪ್ರದಾಯ, ಸನಾತನ ಧರ್ಮದ ಧ್ಯೇಯವನ್ನು ಉಳಿಸಿಕೊಂಡು ಹೋಗುವ ಪ್ರಯತ್ನವಾಗಲಿದೆ’ ಎಂದರು.
ಹಿಂದೂಗಳು ಜಾತಿಯ ವಿಷವರ್ತುಲದಿಂದ ಹೊರಬರಬೇಕು. ನಾವೆಲ್ಲಾ ಒಂದು ನಾವೆಲ್ಲಾ ಹಿಂದೂ ಎಂಬ ಒಂದೇ ಧ್ಯೇಯವಾಕ್ಯವಾಗಬೇಕು. ಈ ಸಮಾಜೋತ್ಸವದಲ್ಲಿ ಜಿಲ್ಲೆಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಪಾಲ್ಗೊಳ್ಳಬೇಕು ಎಂದು ಕೋರಿದರು.
ಸಮಾಜೋತ್ಸವ ಅತ್ಯಂತ ಯಶಸ್ವಿಯಾಗಿ ನಡೆಯಲು ನಗರದೇವತೆ ಕೋಲಾರಮ್ಮನ ಆಶೀರ್ವಾದ ಪಡೆದಿದ್ದೇವೆ. ಕಾರ್ಯಕ್ರಮ ಹಿಂದೂ ಸಮಾಜದ ಒಗ್ಗಟ್ಟಿನ ಪ್ರದರ್ಶನವಾಗಲಿ. ಸಮಾಜಕ್ಕೆ ಶಾಂತಿ, ಸಹಬಾಳ್ವೆಯ ಸಂದೇಶ ಸಾರಲಿ ಎಂದರು.
ಆರ್‍ಎಸ್‍ಎಸ್ ಮುಖಂಡ ಶಂಕರ್ ನಾಯಕ್ ಮಾತನಾಡಿ, ‘ಹಿಂದೂ ಸಮಾಜವನ್ನು ಒಗ್ಗೂಡಿಸುವ ಮತ್ತು ಒಂದಾಗಿ ಕರೆದೊಯ್ಯುವ ಪ್ರಯತ್ನವೇ ಈ ಸಮಾಜೋತ್ಸವವಾಗಿದೆ. ಇಲ್ಲಿ ಎಲ್ಲರೂ ಒಗ್ಗಟ್ಟಾಗಿ ಪಾಲ್ಗೊಳ್ಳೋಣ’ ಎಂದು ಕೋರಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ‘ಹಿಂದೂ ಸಮಾಜೋತ್ಸವದ ಮೂಲಕ ಯುವಕರನ್ನು ಒಗ್ಗೂಡಿಸುವ ಕೆಲಸವಾಗಲಿ. ಹಿಂದೂ ಧರ್ಮದ ಸಿದ್ಧಾಂತ, ಶಾಂತಿ ಸಹಬಾಳ್ವೆಯ ಪರವಿದ್ದು, ಅದು ಉಳಿಯಬೇಕು. ನಾವೆಲ್ಲಾ ಒಗ್ಗಟ್ಟಿನಿಂದ ಯುವಕರನ್ನು ಒಗ್ಗೂಡಿಸುವ ಕೆಲಸ ಮಾಡೋಣ’ ಎಂದರು.
ಈ ಸಂದರ್ಭದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ಉಪಾಧ್ಯಕ್ಷ ಡಾ.ಜನಾರ್ಧನ್, ಬಜರಂಗದಳ ಮುಖಂಡ ಬಾಲಾಜಿ, ಬಾಬು, ಅಪ್ಪಿ, ವೆಂಕಟೇಶ್, ಮುಖಂಡರಾದ ಮಾಗೇರಿ ನಾರಾಯಣಸ್ವಾಮಿ, ಜಗದೀಶ್ವರಾಚಾರಿ, ಅರುಣಮ್ಮ, ಪ್ರಕಾಶ್, ಆರ್‍ಎಸ್‍ಎಸ್‍ನ ಪ್ರಶಾಂತ್, ಸುರೇಶ್, ಮಂಜುಳಮ್ಮ, ನಾಗ, ರವಿ, ರಮೇಶ್ ರಾಜ್, ಅಡಿಕೆ ನಾಗ, ಪ್ರಕಾಶ್, ನಾಮಲ ಮಂಜು, ಬಿಜೆಪಿ ಬಾಲಾಜಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.