ADVERTISEMENT

ಧಾರಾಕಾರ ಮಳೆಗೆ ಕುಸಿದ ಮನೆಗಳು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2021, 15:41 IST
Last Updated 8 ಅಕ್ಟೋಬರ್ 2021, 15:41 IST

ಕೋಲಾರ: ಜಿಲ್ಲೆಯಲ್ಲಿ ಗುರುವಾರ ರಾತ್ರಿ ಗುಡುಗು ಮಿಂಚು ಸಹಿತ ಧಾರಾಕಾರ ಮಳೆಯಾಗಿದ್ದು, ಹಲವೆಡೆ ಮನೆಗಳು ಕುಸಿದಿವೆ. ಆಕಾಶಕ್ಕೆ ತೂತು ಬಿದ್ದಂತೆ ನಾಲ್ಕೈದು ತಾಸು ಎಡಬಿಡದೆ ಸುರಿದ ಮಳೆರಾಯ ಜನರಿಗೆ ಕಣ್ಣೀರು ತರಿಸಿದ್ದಾನೆ.

ಮುಳಬಾಗಿಲು ತಾಲ್ಲೂಕಿನಲ್ಲಿ ಮಳೆಗೆ 15ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಜಮೀನುಗಳಲ್ಲಿ ಮಳೆ ನೀರು ಕೆರೆಯಂತೆ ನಿಂತು ತೋಟಗಾರಿಕೆ ಬೆಳೆಗಳು ಕೊಳೆಯಲಾರಂಭಿಸಿವೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗಿದ್ದು, ವಿದ್ಯುತ್‌ ಉಪಕರಣಗಳು ಸುಟ್ಟು ಹೋಗಿವೆ. ಮನೆಯಲ್ಲಿನ ಆಹಾರ ಪದಾರ್ಥಗಳು ನೀರಿನಲ್ಲಿ ಮುಳುಗಿವೆ.

ಟೊಮೆಟೊ, ಕೋಸು, ಬೀನ್ಸ್‌, ದಪ್ಪ ಮೆಣಸಿನಕಾಯಿ ಬೆಳೆಗಳು ಮಳೆಗೆ ನೆಲಕಚ್ಚಿವೆ. ಕೊಯ್ಲಿಗೆ ಬಂದಿದ್ದ ರಾಗಿ ಬೆಳೆ ಮಳೆಯ ತೀವ್ರತೆಗೆ ನೆಲಕ್ಕೆ ಉರುಳಿದೆ. ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರು ಧಾರಾಕಾರ ಮಳೆಯಿಂದ ಕಂಗಾಲಾಗಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ ಗುರುವಾರ (ಅ.7) ರಾತ್ರಿಯಿಂದ ಶುಕ್ರವಾರ (ಅ.8) ಬೆಳಿಗ್ಗೆವರೆಗೆ ಸರಾಸರಿ 30 ಮಿಲಿ ಮೀಟರ್‌ ಮಳೆಯಾಗಿದೆ. ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು 56 ಮಿ.ಮೀ ಮಳೆ ಸುರಿದಿದೆ. ಉಳಿದಂತೆ ಬಂಗಾರಪೇಟೆ ತಾಲ್ಲೂಕಿನಲ್ಲಿ 9, ಕೋಲಾರ ಮತ್ತು ಕೆಜಿಎಫ್‌ ತಾಲ್ಲೂಕಿನಲ್ಲಿ ತಲಾ 24, ಮಾಲೂರು 7, ಮುಳಬಾಗಿಲು ತಾಲ್ಲೂಕಿನಲ್ಲಿ 43 ಮಿ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.