ADVERTISEMENT

ಪಿಚ್ಚಳ್ಳಿ ಸೇರಿ ಮೂವರಿಗೆ ಉತ್ತರ ವಿ.ವಿ ಗೌರವ ಡಾಕ್ಟರೇಟ್‌

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 18:44 IST
Last Updated 30 ಜುಲೈ 2025, 18:44 IST
ಎಚ್.ಎಸ್.ಶೆಟ್ಟಿ
ಎಚ್.ಎಸ್.ಶೆಟ್ಟಿ   

ಕೋಲಾರ: ಉದ್ಯಮಿ ಹಾಲಾಡಿ ಶ್ರೀನಿವಾಸ ಶೆಟ್ಟಿ (ಸಾಮಾಜಿಕ ಸೇವಾ ಕ್ಷೇತ್ರ), ಜಾನಪದ ಗಾಯಕ, ರಂಗಕರ್ಮಿ ಪಿಚ್ಚಳ್ಳಿ ಶ್ರೀನಿವಾಸ್ (ಸಂಗೀತ ಮತ್ತು ರಂಗಭೂಮಿ ಕ್ಷೇತ್ರ) ಹಾಗೂ ಹೋಟೆಲ್ ಉದ್ಯಮಿ ರಾಧಾಕೃಷ್ಣ ಅಡಿಗ (ಉದ್ಯಮ ಕ್ಷೇತ್ರ) ಅವರಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಪ್ರಕಟಿಸಿದೆ.

ವಿಶ್ವವಿದ್ಯಾಲಯದ 5ನೇ ವಾರ್ಷಿಕ ಘಟಿಕೋತ್ಸವ ನಗರ ಹೊರವಲಯದ ನಂದಿನಿ ಪ್ಯಾಲೇಸ್‍ನಲ್ಲಿ ಶುಕ್ರವಾರ (ಆ.1) ನಡೆಯಲಿದ್ದು, ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಗೌರವ ಡಾಕ್ಟರೇಟ್‌ ಹಾಗೂ ಪದವಿ ಪ್ರದಾನ ಮಾಡಲಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವೂಡೇ ಪಿ.ಕೃಷ್ಣ ಘಟಿಕೋತ್ಸವ ಭಾಷಣ ಮಾಡುವವರು. ಉನ್ನತ  ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಪಾಲ್ಗೊಳ್ಳುವರು ಎಂದು ವಿಶ್ವವಿದ್ಯಾಲಯ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹಾಲಾಡಿ ಶ್ರೀನಿವಾಸಶೆಟ್ಟಿ (ಎಚ್.ಎಸ್.ಶೆಟ್ಟಿ) ಚಿಕ್ಕಂದಿನಲ್ಲೇ ಮುಂಬೈ ಸೇರಿ ನಂತರ ಬಹ್ರೈನ್‍ಗೆ ತೆರಳಿ ಉದ್ಯಮದಲ್ಲಿ ತೊಡಗಿದರು. ವಾಪಸ್ಸು ಬೆಂಗಳೂರಿಗೆ ಬಂದು ಮೈಸೂರು ಮೆರ್ಕ್ಯಾಂಟೈಲ್‌ ಕಂಪನಿ (ಎಂಎಂಸಿಎಲ್‌) ಸ್ಥಾಪಿಸಿದ್ದಾರೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಅತ್ಯುತ್ತಮ ರಫ್ತುದಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದಕ್ಷಿಣ ಕನ್ನಡದಲ್ಲಿ ಸೂರಿಲ್ಲದ ಕೊರಗರಿಗೆ ನೂರು ಮನೆ ಕಟ್ಟಿಸಿಕೊಡುವ ಕಾರ್ಯಕ್ಕೆ ಕೈ ಹಾಕಿದ್ದಾರೆ. 40ಸಾವಿರಕ್ಕೂ ಅಧಿಕ ಮಕ್ಕಳಿಗೆ ಉಚಿತ ಸಮವಸ್ತ್ರ ನೀಡಿದ್ದಾರೆ. ಖಾಸಗಿ ಪಾಲುದಾರತ್ವದ ಸರ್ಕಾರಿ ಶಾಲೆಯ ಸ್ಥಾಪನೆಗೆ ಕಾರಣರಾಗಿರುತ್ತಾರೆ.

ADVERTISEMENT

ಕೋಲಾರ ಜಿಲ್ಲೆಯ ಪಿಚ್ಚಳ್ಳಿ ಶ್ರೀನಿವಾಸ್ ಗಾಯಕ, ರಂಗಕರ್ಮಿಯಾಗಿ ಹೆಸರು ಮಾಡಿದ್ದಾರೆ. ಮೈಸೂರಿನ ರಂಗಾಯಣದಲ್ಲಿ ಕೆಲಸ ಮಾಡಿದ್ದಾರೆ. ಕನ್ನಡದ ಮೂಲ ಜನಪದ ದಾಟಿಗಳಲ್ಲಿ 45 ಕ್ಕೂ ಹೆಚ್ಚು ಕ್ಯಾಸೆಟ್/ಸಿ.ಡಿಗಳಿಗೆ ಸಂಗೀತ ನೀಡಿ ಹಾಡಿದ್ದಾರೆ. 15 ನಾಟಕಗಳ ನಿರ್ದೇಶನ ಹಾಗೂ 25ಕ್ಕೂ ಹೆಚ್ಚು ಸಾಕ್ಷ್ಯಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ತಳ ಸಮುದಾಯಗಳಲ್ಲಿ ಅರಿವಿನ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರೂ ಆಗಿದ್ದ ಅವರು ಮಾಲೂರಿನಲ್ಲಿ ‘ಸಾರಂಗರಂಗ’ ಸಂಸ್ಥೆಯ ಮೂಲಕ ಕಲಾ ಮತ್ತು ಸಂಸ್ಕೃತಿ ಸೇವೆಯಲ್ಲಿ ತೊಡಗಿದ್ದಾರೆ.

ರಾಧಾಕೃಷ್ಣ ಅಡಿಗ ಬೆಂಗಳೂರಿನ ಹೆಸರಾಂತ ಹೋಟೆಲ್ ಉದ್ಯಮಿಗಳಲ್ಲಿ ಒಬ್ಬರು. ತಂದೆ ಸ್ಥಾಪಿಸಿದ ‘ಬ್ರಾಹ್ಮಿನ್ಸ್ ಕಾಫಿ ಬಾರ್‌’ನಲ್ಲಿ 9ನೇ ವಯಸ್ಸಿನಲ್ಲೇ ಕೆಲಸ ಆರಂಭಿಸಿದರು. 50 ವರ್ಷಗಳಿಂದ ಹೋಟೆಲ್ ಉದ್ಯಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ. ತಿರುಪತಿ, ಕೊಲ್ಲೂರು ಮತ್ತು ಶಂಕರನಾರಾಯಣ ದೇವಾಲಯಗಳ ಅಭಿವೃದ್ಧಿಯಲ್ಲಿ ಪಾಲುದಾರರಾಗಿದ್ದಾರೆ ಎಂದರು.

ಪಿಚ್ಚಳ್ಳಿ ಶ್ರೀನಿವಾಸ್
ರಾಧಾಕೃಷ್ಣ ಅಡಿಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.