ADVERTISEMENT

ಶಿಥಿಲಾವಸ್ಥೆಯಲ್ಲಿ ಆಸ್ಪತ್ರೆ ವಸತಿಗೃಹ

ಬಿದ್ದುಹೋಗುವಂತಿರುವ ಕಟ್ಟಡದಲ್ಲೇ ಸಿಬ್ಬಂದಿ ವಾಸ

​ಪ್ರಜಾವಾಣಿ ವಾರ್ತೆ
Published 8 ಮೇ 2021, 4:57 IST
Last Updated 8 ಮೇ 2021, 4:57 IST
ವಸತಿ ಗೃಹದ ಶಿಥಿಲಾವಸ್ಥೆ
ವಸತಿ ಗೃಹದ ಶಿಥಿಲಾವಸ್ಥೆ   

ಮುಳಬಾಗಿಲು: ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯ ವಸತಿಗೃಹದ ಕಟ್ಟದ ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆ ತಲುಪಿದೆ. ಹಿಂದೆ ಆರೋಗ್ಯ ಸಿಬ್ಬಂದಿಗೆ ನೆಲೆಯಾಗಿದ್ದ ಕಟ್ಟಡ ಇಂದು ಅಸ್ತಿತ್ವ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದೆ. ಇಂತಹ ಕಟ್ಟಡದಲ್ಲೇ ಆಸ್ಪತ್ರೆ ಸಿಬ್ಬಂದಿ ಇದ್ದು, ಆತಂಕ ಮನೆಮಾಡಿದೆ.

ಹಲವಾರು ವರ್ಷಗಳ ಕಾಲ ವೈದ್ಯಕೀಯ ಸಿಬ್ಬಂದಿ ಈ ವಸತಿ ಗೃಹಗಳಲ್ಲಿ ವಾಸವಾಗಿ ಸಾರ್ವಜನಿಕರಿಗೆ ಹಗಲಿರುಳು ಸೇವೆ ಸಲ್ಲಿಸುತ್ತಿದ್ದರು. ಆದರೆ ಇದೀಗ, ನಗರದ ಸಾರ್ವಜನಿಕ ಆಸ್ಪತ್ರೆಯ ವಸತಿ ಗೃಹಗಳುನಿರ್ವಹಣೆಯ ಕೊರತೆಯ ಕಾರಣದಿಂದಾಗಿ ಪಾಳು ಬಿದ್ದಿವೆ. ಈ ಕಟ್ಟಡಗಳು ಇದೀಗ ಅನೈತಿಕ ಚಟುವಟಿಕೆಗಳಿಗೆ ನೆಲಯಾಗಿವೆ.

‘ಈ ಕಟ್ಟಡಕ್ಕೆ ಮರುಜೀವ ನೀಡಬೇಕು’ ಎಂದು ಅಕ್ಕಪಕ್ಕದ ನಾಗರಿಕರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಅಹವಾಲು ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ.

ADVERTISEMENT

ಅನುಮೋದನೆ ಸಿಕ್ಕಿಲ್ಲ: ಶಿಥಿಲಾವಸ್ಥೆಯಲ್ಲಿರುವ ಕಟ್ಟಡವನ್ನು ಕೆಡವಿ ನೂತನ ಕಟ್ಟಡ ಮತ್ತು ಆಸ್ಪತ್ರೆಯಲ್ಲಿ ಮೂಲಸೌಲಭ್ಯ ಒದಗಿಸಲು ಆರೋಗ್ಯ ರಕ್ಷಾ ಸಮಿತಿಯಲ್ಲಿ ತೀರ್ಮಾನಿಸಲಾಗಿದೆ. ಈ ಬಗ್ಗೆ ಶಾಸಕ ಎಚ್.ನಾಗೇಶ್ ಸರ್ಕಾರಕ್ಕೆ ₹8.50 ಕೋಟಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಿದ್ದು ಇನ್ನೂ ಅನುಮೋದನೆ ಸಿಕ್ಕಿಲ್ಲ.

ಸ್ವಚ್ಛತೆ ಮರೀಚಿಕೆ: ಶಿಥಿಲಾವಸ್ಥೆಯಲ್ಲಿರುವ ವಸತಿ ಗೃಹಗಳಲ್ಲೇ ಆಸ್ಪತ್ರೆ ಸಿಬ್ಬಂದಿ ಇದ್ದಾರೆ. ವಸತಿ ಗೃಹಗಳ ಸುತ್ತಮುತ್ತ ಗಿಡಗಂಟಿ ಬೆಳೆದಿದೆ. ಆಸ್ಪತ್ರೆಯ ಹಿಂಭಾಗದಲ್ಲಿರುವ ಡಯಾಲಿಸಿಸ್ ಕೇಂದ್ರದಿಂದ ಬರುವ ತ್ಯಾಜ್ಯದಿಂದ ನೀರು ಸೋರಿಕೆಯಾಗಿ ಅನೈರ್ಮಲ್ಯಕ್ಕೆ ಕಾರಣವಾಗಿದೆ. ಸಮಸ್ಯೆ ಅರಿತು ಜಿಲ್ಲಾಡಳಿತ ಮತ್ತು ಸರ್ಕಾರ ಕಾಯಕಲ್ಪಕ್ಕೆ ಮುಂದಾಗಬೇಕು.

ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಡಾ. ಎಸ್.ಭಾರತಿ ಮಾತನಾಡಿ, ‘ಆಸ್ಪತ್ರೆ ವಸತಿ ಗೃಹ ಶಿಥಿಲವಾಗಿದ್ದು ಹೊಸದಾಗಿ ಕಟ್ಟಡ ಕಟ್ಟಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಡಯಾಲಿಸಿಸ್ ಕೇಂದ್ರದಿಂದ ಬರುತ್ತಿದ್ದ ತ್ಯಾಜ್ಯ ನೀರು ಸೋರಿಕೆಯಾಗುತ್ತಿದ್ದು ಸರಿಪಡಿಸುವಂತೆ ಸಂಬಂಧಿಸಿದ ಡಯಾಲಿಸಿಸ್ ಕೇಂದ್ರದ ಮುಖ್ಯಸ್ಥರಿಗೆ ಸೂಚಿಸಲಾಗಿದೆ’ ಎಂದರು.

ಶಾಸಕ ಎಚ್.ನಾಗೇಶ್ಮಾತನಾಡಿ, ‘ಆರೋಗ್ಯ ರಕ್ಷಾಸಮಿತಿ ಹಿಂದಿನ ಸಭೆಯಲ್ಲೇ ಆಸ್ಪತ್ರೆ ಮತ್ತು ವಸತಿಗೃಹ ನಿರ್ಮಾಣ ಮತ್ತು ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕೊರೊನಾ ಕಾರಣ ಅನುದಾನ ಬಿಡುಗಡೆಯಾಗಿಲ್ಲ. ಶೀಘ್ರ ಸರ್ಕಾರದ ಗಮನಕ್ಕೆ ತಂದು ಬಿಡುಗಡೆ ಮಾಡಿಸಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.