ADVERTISEMENT

ಮುಳಬಾಗಿಲು | 'ಮಾನವ ಕಳ್ಳಸಾಗಣೆ: ಜಾಗೃತಿ ಅವಶ್ಯ'

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 4:47 IST
Last Updated 1 ಆಗಸ್ಟ್ 2025, 4:47 IST
ಮುಳಬಾಗಿಲು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಮಾನವ ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆಯಲ್ಲಿ ನ್ಯಾಯಾಧೀಶ ಗೌಡ ಜಗದೀಶ್ ರುದ್ರೆ ಮಾತನಾಡಿದರು 
ಮುಳಬಾಗಿಲು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಮಾನವ ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆಯಲ್ಲಿ ನ್ಯಾಯಾಧೀಶ ಗೌಡ ಜಗದೀಶ್ ರುದ್ರೆ ಮಾತನಾಡಿದರು    

ಮುಳಬಾಗಿಲು: ಮಾನವ ಕಳ್ಳ ಸಾಗಣೆ ಒಂದು ದೊಡ್ಡ ಜಾಲ. ಇದರ ಬಲೆಗೆ ಹಲವು ಅಮಾಯಕರು ಸಿಕ್ಕಿಕೊಂಡು ದಬ್ಬಾಳಿಕೆಗೆ ಒಳಗಾಗುತ್ತಿದ್ದಾರೆ. ಇಂತಹ ಸಾಮಾಜಿಕ ಪಿಡುಗು ತಡೆಗಟ್ಟಲು ಪ್ರತಿಯೊಬ್ಬರೂ ಮಾನವ ರಕ್ಷಣೆ ಜವಾಬ್ದಾರಿ ತೆಗೆದುಕೊಂಡಾಗ ಮಾತ್ರ ಜಾಲ ತಡೆಯಲು ಸಾಧ್ಯ ಎಂದು ಜೆ.ಎಂ.ಎಫ್.ಸಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಗೌಡ ಜಗದೀಶ ರುದ್ರೆ ಅಭಿಪ್ರಾಯಪಟ್ಟರು.

ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ತಾಲ್ಲೂಕು ಪಂಚಾಯಿತಿ ಜಂಟಿ ಸಹಯೋಗದಲ್ಲಿ ತಾ.ಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಾನವ ಕಳ್ಳ ಸಾಗಣೆ ವಿರೋಧಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಮಾನವ ಕಳ್ಳ ಸಾಗಣೆ ಜಾಲ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಇದನ್ನು ತಡೆಯಲು ಕಾನೂನು ಸೇವಾ ಪ್ರಾಧಿಕಾರ ದೇಶ ವ್ಯಾಪಿ ಕಾರ್ಯ ನಿರ್ವಹಿಸುತ್ತಾ ಕಾನೂನು ಅರಿವು ಕಾರ್ಯಕ್ರಮ ಮೂಲಕ ಸಮಾಜ ಜಾಗೃತಿಗೊಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ADVERTISEMENT

ಹಿರಿಯ ವಕೀಲ ಎಂ.ಎಸ್.ಶ್ರೀನಿವಾಸ ರೆಡ್ಡಿ ಮಾತನಾಡಿ, ಹೆಣ್ಣು ಮಕ್ಕಳನ್ನು ಉದ್ಯೋಗ ಹಾಗೂ ಆರ್ಥಿಕ ಸದೃಢತೆ ಉದ್ದೇಶದಿಂದ ಅನ್ಯ ದೇಶಗಳಿಗೆ ಕಳುಹಿಸಿ ಏಜೆಂಟ್‌ರಿಂದ ಹಣ ಪಡೆದು ಮೋಸ ಮಾಡುತ್ತಿದ್ದಾರೆ ಎಂದು ಹೇಳಿದರು.

ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎನ್.ಸತೀಶ್ ಕುಮಾರ್ ಮಾತನಾಡಿ, ಹೊರದೇಶಗಳಿಗೆ ಕಳುಹಿಸಿ ಅಲ್ಲಿ ಗುಲಾಮಗಿರಿ ಕೆಲಸ ಮಾಡಿಸುವುದರ ಜೊತೆಗೆ ಲೈಂಗಿಕ ದೌರ್ಜನ್ಯ ಮಾಡುತ್ತಾರೆ. ಈ ಬಗ್ಗೆ ಸಮಾಜದಲ್ಲಿ ಎಲ್ಲರನ್ನೂ ಜಾಗೃತಗೊಳಿಸಬೇಕಾಗಿದೆ ಎಂದು ಹೇಳಿದರು.

ವಕೀಲರ ಸಂಘದ ಉಪಾಧ್ಯಕ್ಷ ಸಿ.ವಿ.ಶ್ರೀನಿವಾಸಪ್ಪ ಮಾತನಾಡಿ, ಪಶ್ಚಿಮ ಬಂಗಾಳ ಸೇರಿದಂತೆ ಪೂರ್ವ ಮತ್ತು ಉತ್ತರ ಭಾರತದ ಕಡೆಗಳಿಂದ ಬರುವ ಅಪರಿಚಿತರು ಅಪ್ರಾಪ್ತ ಹೆಣ್ಣುಗಳು ತಲೆಮರಿಸಿಕೊಂಡು ನಕಲಿ ಆಧಾರ್ ಕಾರ್ಡ್, ಮತ್ತಿತರ ದಾಖಲೆಗಳೊಂದಿಗೆ ಗ್ರಾಮಾಂತರ ಪ್ರದೇಶದ ಕೋಳಿ ಫಾರಂಗಳಲ್ಲಿ ವಾಸವಾಗಿದ್ದಾರೆ. ಅಂತಹ ಬಾಲಕಿಯರು ಹಾಗೂ ಮಹಿಳೆಯರಿಗೆ ಕಾನೂನಿನ ಅರಿವು ನೆರವು ನೀಡಬೇಕಾಗಿದೆ ಎಂದರು. 

ಎಂ.ಎಸ್.ಶ್ರೀನಿವಾಸರೆಡ್ಡಿ, ವಿ.ಜಯಪ್ಪ, ತಾ.ಪಂ.ಸಹಾಯಕ ನಿರ್ದೇಶಕ ರವಿಚಂದ್ರ, ಸಿಡಿಪಿಒ ಎಂ. ರಮ್ಯಾ, ಮೇಲ್ವಿಚಾರಕಿಯರಾದ ಅಮೃತ, ಭಾರತಿಬಾಯಿ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.