ADVERTISEMENT

ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ: ಶ್ರೀಕೃಷ್ಣ ವಿರುದ್ಧ ನಾರಾಯಣಸ್ವಾಮಿ ಗುಡುಗು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 14:48 IST
Last Updated 20 ಏಪ್ರಿಲ್ 2019, 14:48 IST

ಕೋಲಾರ: ‘ಭೋವಿ ಸಮಾಜದ ಮುಖಂಡ ಶ್ರೀಕೃಷ್ಣ ಅವರಿಗೆ ಗ್ರಾಮ ಪಂಚಾಯಿತಿ ಸದಸ್ಯನಾಗುವ ಯೋಗ್ಯತೆ ಇಲ್ಲ. ನನ್ನ ವಿರುದ್ಧ ಮೇಲೆ ಇಲ್ಲಸಲ್ಲದ ಆರೋಪ ಮಾಡಿರುವ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ’ ಎಂದು ಮಾಜಿ ಶಾಸಕ ಹಾಗೂ ಭೋವಿ ಸಮಾಜ ಜಿಲ್ಲಾ ಘಟಕದ ಅಧ್ಯಕ್ಷ ಎಂ.ನಾರಾಯಣಸ್ವಾಮಿ ಗುಡುಗಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನಾನು 7 ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದು, 3 ಬಾರಿ ಶಾಸಕನಾಗಿ ಆಯ್ಕೆಯಾಗಿ ಜನರ ಸೇವೆ ಮಾಡಿದ್ದೇನೆ. ಆದರೆ, ಶ್ರೀಕೃಷ್ಣ ಕನಿಷ್ಠ ಗ್ರಾ.ಪಂ ಸದಸ್ಯನೂ
ಆಗಿಲ್ಲ’ ಎಂದು ಲೇವಡಿ ಮಾಡಿದರು.

‘ಶ್ರೀಕೃಷ್ಣ 1994ರ ವಿಧಾನಸಭೆ ಚುನಾವಣೆಯಲ್ಲಿ ನನ್ನ ವಿರುದ್ಧ ಸ್ಪರ್ಧಿಸಿ ಕೇವಲ 3,600 ಮತ ಪಡೆದು ಠೇವಣಿ ಕಳೆದುಕೊಂಡರು. 2014ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಆಂಧ್ರಪ್ರದೇಶ ಮೂಲದ ಕೇಶವ ಅವರ ಹಣ ಲೂಟಿ ಮಾಡಿದ್ದರು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಿಂದ ಹಣ ಪಡೆದು ಪರ ಕೆಲಸ ಮಾಡಿದ್ದಾರೆ’ ಎಂದು ಟೀಕಿಸಿದರು.

ADVERTISEMENT

‘ಜೆಡಿಎಸ್ ಪಕ್ಷಕ್ಕೆ ಕರೆಯದೆಯೇ ನಾನು ಹೋಗಿದ್ದೇನೆ ಎಂದು ಶ್ರೀಕೃಷ್ಣ ಆರೋಪ ಮಾಡಿದ್ದಾರೆ. ಜೆಡಿಎಸ್‌ನಲ್ಲಿ ನನಗೆ ರಾಜ್ಯ ಘಟಕದ ಹಿರಿಯ ಉಪಾಧ್ಯಕ್ಷ ಸ್ಥಾನವಿದೆ. ಇನ್ನು ನನ್ನ ಬಳಿ ಓಡಾಡುವುದಕ್ಕೆ ಕಾರಿಲ್ಲ. ನನ್ನ ಹಳೇ ಕಾರನ್ನು ₹ 12 ಲಕ್ಷಕ್ಕೆ ಮಾರಾಟ ಮಾಡಿದ್ದೇನೆ. ಕಾಂಗ್ರೆಸ್‌ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಂಬಲಿಸಲು ನನಗೆ ಹೊಸ ಕಾರು ಕೊಡಿಸಿದ್ದಾರೆ ಎಂದು ಶ್ರೀಕೃಷ್ಣ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಲದಲ್ಲಿ ಖರೀದಿ: ‘ಲೋಕಸಭಾ ಚುನಾವಣೆ ಘೋಷಣೆಯಾಗುವುದಕ್ಕೂ ಮುನ್ನ ಫೆ.15ರಂದೇ ₹ 1 ಲಕ್ಷ ಮುಂಗಡ ಹಣ ಕೊಟ್ಟು ಹೊಸ ಕಾರು ಬುಕ್ಕಿಂಗ್‌ ಮಾಡಿದ್ದೆ. ಆದರೆ, ಸಕಾಲಕ್ಕೆ ಬ್ಯಾಂಕ್‌ನಿಂದ ವಾಹನ ಸಾಲ ಸಿಗಲಿಲ್ಲ. ಈಗ ಕರ್ಣಾಟಕ ಬ್ಯಾಂಕ್‌ನಲ್ಲಿ ₹ 28 ಲಕ್ಷ ವಾಹನ ಸಾಲ ಮಂಜೂರಾಗಿದ್ದು, ಆ ಹಣದಲ್ಲಿ ಕಾರು ಖರೀದಿಸಿದ್ದೇನೆ. ಪ್ರತಿ ತಿಂಗಳು ₹ 46,339 ಸಾಲದ ಕಂತು ಕಟ್ಟಬೇಕಿದೆ’ ಎಂದು ವಿವರಿಸಿದರು.

‘ನನ್ನ ರಾಜಕೀಯ ಹಿನ್ನೆಲೆ ಅರಿಯದೆ ವಿನಾಕಾರಣ ಸುಳ್ಳು ಆರೋಪ ಮಾಡಿ ತೇಜೋವಧೆಗೆ ಯತ್ನಿಸಿರುವುದು ಶ್ರೀಕೃಷ್ಣ ಅವರಿಗೆ ಶೋಭೆಯಲ್ಲ. ಇದನ್ನು ಇಷ್ಟಕ್ಕೆ ಬಿಡದೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ ಕಾನೂನು ಹೋರಾಟ ನಡೆಸುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.