ADVERTISEMENT

ಕೋವಿಡ್‌ ಹಗರಣ ಸಾಬೀತಾದರೆ ನನ್ನನ್ನು ನೇಣಿಗೇರಿಸಿ: ಸಚಿವ ಸುಧಾಕರ್‌

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 12:39 IST
Last Updated 25 ಜನವರಿ 2023, 12:39 IST
ಸಚಿವ ಸುಧಾಕರ್‌
ಸಚಿವ ಸುಧಾಕರ್‌   

ಕೋಲಾರ: ‘ನನ್ನ ವಿರುದ್ಧ ಯಾವುದೇ ತನಿಖೆಯಾದರೂ ನಡೆಯಲಿ. ಕೋವಿಡ್‌ ಸಂದರ್ಭದಲ್ಲಿ ಹಗರಣ ನಡೆದಿದ್ದು ಸಾಬೀತಾದರೆ ನನ್ನನ್ನು ಸಾರ್ವಜನಿಕವಾಗಿ ನೇಣಿಗೆ ಹಾಕಿ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಸವಾಲು ಹಾಕಿದರು.

ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಎಂಟು ವರ್ಷ ಜೊತೆಗಿದ್ದು, ಈಗ ಮಾತನಾಡುತ್ತಿದ್ದಾರೆ ಎಂಬುದಾಗಿ ಕಾಂಗ್ರೆಸ್‌ನವರು ಟೀಕಿಸುತ್ತಿದ್ದಾರೆ. ಕೋವಿಡ್‌ ಬಂದು ಮೂರು ವರ್ಷ ಆಯಿತು. ಆರೋಗ್ಯ ಇಲಾಖೆಯಲ್ಲಿ ಯಾವುದಕ್ಕೆ ಎಷ್ಟು ಖರ್ಚು ಮಾಡಿದ್ದೇವೆ ಎಂಬುದಕ್ಕೆ ದಾಖಲೆ ಸಮೇತ ನಾನು ಪ್ರತಿ ವರ್ಷದ ಪ್ರತಿ ಪೈಸೆಯ ಲೆಕ್ಕ ಕೊಡಲು ಸಿದ್ಧ’ ಎಂದರು.

‘ಕೋವಿಡ್‌ ನಿರ್ವಹಣೆ ಸಂಬಂಧ ಸದನದಲ್ಲೇ ಉತ್ತರ ನೀಡಿದಾಗ ಕಾಂಗ್ರೆಸ್‌ ಮುಖಂಡರು ಪಲಾಯನ ಮಾಡಿದರು. ಕೋವಿಡ್‌ ನಿರ್ವಹಣೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಬೇಕಿದ್ದರೆ ಶ್ವೇತಪತ್ರವನ್ನೂ ಹೊರಡಿಸಲು ತಯಾರಿದ್ದೇವೆ’ ಎಂದು ತಿರುಗೇಟು ನೀಡಿದರು.

ADVERTISEMENT

‘ನಾನು ಅಂತಃಕರಣದಿಂದ ಕೆಲಸ ಮಾಡಿದ್ದೇನೆ, ಹಗಲಿರುಳು ಶ್ರಮಿಸಿದ್ದೇನೆ, ಈ ರಾಜ್ಯದ ಜನರ ರಕ್ಷಣೆ ಮಾಡುವ ಕೆಲಸ ಮಾಡಿದ್ದೇನೆ. ಇದಕ್ಕಾಗಿಯೇ ಕೋವಿಡ್‌ ನಿರ್ವಹಣೆಯಲ್ಲಿ ಕರ್ನಾಟಕ ಅತ್ಯುತ್ತಮ ಸಾಧನೆ ಮಾಡಿದೆ ಎಂಬುದಕ್ಕೆ ನನಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ’ ಎಂದರು.

‘ರಾಜಕೀಯ ತೆವಲಿಗೆ ನನ್ನ ವಿರುದ್ಧ ಟೀಕೆ, ಆರೋಪ ಮಾಡಿದರೆ ಪ್ರಯೋಜನ ಇಲ್ಲ. ಸಿದ್ದರಾಮಯ್ಯ ಅವರು ರಾಜಕೀಯಕ್ಕಾಗಿ ಮಾತನಾಡಬಹುದು. ಆದರೆ, ನಾನು ಏಕೆ ಕಾಂಗ್ರೆಸ್‌ ತೊರೆದೆ ಎನ್ನುವುದು ಅವರಿಗೂ ಗೊತ್ತಿದೆ. ಬಿಜೆಪಿ ಸೇರಿದ್ದು ಸಿದ್ಧಾಂತಕ್ಕಾಗಿಯೇ ಹೊರತೂ ಹಣಕ್ಕಲ್ಲ. ಅನೈತಿಕವಾಗಿ ಜೆಡಿಎಸ್‌ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಬೇಸತ್ತಿದ್ದೆ’ ಎಂದು ವಾಗ್ದಾಳಿ ನಡೆಸಿದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ 2013ರಿಂದ 2018ರ ಅವಧಿಯಲ್ಲಿ ₹ 35 ಸಾವಿರ ಕೋಟಿ ಹಣಕಾಸು ವ್ಯತ್ಯಾಸ ಕಂಡುಬಂದಿದೆ ಎಂಬುದಾಗಿ ಮಹಾಲೇಖಪಾಲರ (ಸಿಎಜಿ) ವರದಿ ಉಲ್ಲೇಖಿಸಿದೆ. ಅದನ್ನೇ ನಾನು ಹೇಳಿದ್ದೇನೆ. ನನಗೆ ಓದಲು ಬಾರದಿದ್ದರೆ ಮಾಧ್ಯಮವರಿಗೆ ಕೊಡುತ್ತೇನೆ, ಏನಿದೆ ಎಂಬುದನ್ನು ವ್ಯಾಖ್ಯಾನ ಮಾಡಿ ಜನರಿಗೆ ತಿಳಿಸಿ. ಸಿದ್ದರಾಮಯ್ಯ ಅವರಿಗೂ ಸತ್ಯ ಗೊತ್ತಿದೆ’ ಎಂದರು.

‘ಸಿದ್ದರಾಮಯ್ಯ ಕೋಲಾರದಲ್ಲಿ ಬೌಲಿಂಗ್‌ ಮಾಡಿ, ರನ್‌ಗೆ ವರುಣಾ ಕಡೆ ಓಡಲಿದ್ದಾರೆ. ಸ್ಪರ್ಧಿಸಿದರೂ ಕೋಲಾರದಲ್ಲಿ ಗೆಲ್ಲುವುದಿಲ್ಲ. ಅವರನ್ನು ಸ್ಥಳೀಯ ಮುಖಂಡರು ಇಲ್ಲಿಗೆ ಕರೆಸಿ ಖೆಡ್ಡಾಕ್ಕೆ ಕೆಡವಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಪ್ರಧಾನಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದ ಪ್ರಶ್ನೆಗೆ, ‘ಗಾಂಧಿ ಪರಿವಾರಕ್ಕೆ ಹತ್ತಿರವಾಗಿದ್ದ ಎ.ಕೆ.ಆ್ಯಂಟನಿ ಅವರ ಪುತ್ರ ಅನಿಲ್‌ ಆ್ಯಂಟನಿ ಸಾಕ್ಷ್ಯಚಿತ್ರ ವಿರೋಧಿಸಿ ಟ್ವೀಟ್‌ ಮಾಡಿದ್ದಾರೆ. ಆದರೆ, ಅದನ್ನು ಹಿಂಪಡೆಯುವಂತೆ ಅವರ ಮೇಲೆ ರಾಹುಲ್‌ ಗಾಂಧಿ ಸೇರಿದಂತೆ ಹಲವು ನಾಯಕರು ಒತ್ತಡ ತಂದಿದ್ದಾರೆ. ಇದರಿಂದ ಬೇಸತ್ತು ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.