ADVERTISEMENT

ವ್ಯಕ್ತಿತ್ವ ಸತ್ತರೆ ಜೀವನವಿಡೀ ನೋವು :ಸಾಹಿತಿ ಶರಣಪ್ಪ ಗಬ್ಬೂರ್

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 15:44 IST
Last Updated 28 ಸೆಪ್ಟೆಂಬರ್ 2020, 15:44 IST
ಕಸ್ತೂರಿ ಕನ್ನಡ ವೇದಿಕೆಯು ಕೋಲಾರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕವಿನಮನ ಕಾರ್ಯಕ್ರಮದಲ್ಲಿ ಹೋರಾಟಗಾರ ಎಂ.ಎನ್.ಭಾರಧ್ವಜ್‌ ಅವರನ್ನು ಸನ್ಮಾನಿಸಲಾಯಿತು.
ಕಸ್ತೂರಿ ಕನ್ನಡ ವೇದಿಕೆಯು ಕೋಲಾರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕವಿನಮನ ಕಾರ್ಯಕ್ರಮದಲ್ಲಿ ಹೋರಾಟಗಾರ ಎಂ.ಎನ್.ಭಾರಧ್ವಜ್‌ ಅವರನ್ನು ಸನ್ಮಾನಿಸಲಾಯಿತು.   

ಕೋಲಾರ: ‘ಲೋಕಾಂತದ ಸ್ಪರ್ಶವಿಲ್ಲದೆ ಕವಿಯಾಗಲು ಅಸಾಧ್ಯ. ಏಕಾಂತವು ಕವಿ ಸಮಯವಲ್ಲ. ಬದಲಿಗೆ ಅದೊಂದು ಕವಿತ್ವದ ಸಮಯ. ಯಾವ ಏಕಾಂತವು ಕಲೆಯಾಗದು’ ಎಂದು ಸಾಹಿತಿ ಶರಣಪ್ಪ ಗಬ್ಬೂರ್ ಅಭಿಪ್ರಾಯಪಟ್ಟರು.

ಕಸ್ತೂರಿ ಕನ್ನಡ ವೇದಿಕೆಯು ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕವಿನಮನ ಕಾರ್ಯಕ್ರಮದಲ್ಲಿ ಮಾತನಾಡಿ, ‘ವ್ಯಕ್ತಿ ಸತ್ತರೆ ನಾಲ್ಕು ದಿನ ನೋವು. ವ್ಯಕ್ತಿತ್ವ ಸತ್ತರೆ ಜೀವನಪರ್ಯಂತ ನೋವು. ವ್ಯಕ್ತಿತ್ವ ಯಾವಾಗಲೂ ನಮಗೆ ಮತ್ತು ಬೇರೆಯವರಿಗೆ ಆದರ್ಶಪ್ರಾಯವಾಗಬೇಕು’ ಎಂದು ಹೇಳಿದರು.

‘ಪ್ರತಿಯೊಬ್ಬರಿಗೂ ಬೆಳೆಯುವ ಕನಸಿರಬೇಕು. ಅದೇ ರೀತಿ ಮತ್ತೊಬ್ಬರನ್ನು ಬೆಳೆಸಬೇಕೆಂಬ ಮನಸ್ಸಿರಬೇಕು. ಆಗ ಮಾತ್ರ ಕವಿ ಮತ್ತು ಕವಿತೆ ಶಾಶ್ವತವಾಗಿ ಮನಸ್ಸಿನಲ್ಲಿರಲು ಸಾಧ್ಯ. ಸಿಪಿಕೆಯವರ ಕವಿತೆಗಳಂತೆ ಕಾವ್ಯ ಪ್ರಬುದ್ಧ ಮಾನಕ್ಕೆ ಬಂದಾಗ ಮಾತ್ರ ಸಾಹಿತ್ಯ ಉಳಿಯುತ್ತದೆ. ಬದುಕಿನ ಮತ್ತು ಪ್ರಾದೇಶಿಕ ನೆಲೆಯನ್ನು ಕುರಿತು ಕವಿತೆ ಬರೆದಾಗ ಬಹಳಷ್ಟು ಪರಿಣಾಮ ಬೀರುತ್ತದೆ’ ಎಂದು ತಿಳಿಸಿದರು.

ADVERTISEMENT

‘ಮನುಷ್ಯ ಸಮಾಜಮುಖಿಯಾಗಿ ಬದುಕಬೇಕು. ಕನ್ನಡ ಸಾಹಿತ್ಯ ಪರಿಷತ್‌ ಯುವ ಕವಿಗಳಿಗೆ ಅವಕಾಶ ಮತ್ತು ಸೂಕ್ತ ಸ್ಥಾನಮಾನ ಕೊಡಬೇಕು. ಕವಿಗಳು ಪ್ರಚಲಿತ ಘಟನೆ ಕುರಿತು ಕಾವ್ಯ ರಚಿಸಬೇಕು. ಸುತ್ತಮುತ್ತಲಿನ ಸನ್ನಿವೇಶಗಳಿಗೆ ಕಾವ್ಯದ ಮೂಲಕ ಉತ್ತರ ಕೊಡಬೇಕು’ ಎಂದು ಕವಿ ವಿ.ಲಕ್ಷ್ಮಯ್ಯ ಹೇಳಿದರು.

‘ಸಮಾಜದ ಸೂಕ್ಷ್ಮತೆಗಳನ್ನು ಗಮನಿಸಿ ಕಾವ್ಯ ಗುರುತಿಸಬೇಕಿದೆ. ಗ್ರಾಮ ಚರಿತ್ರೆ, ಇತಿಹಾಸ, ಶ್ರಮಿಕ ವರ್ಗ, ಜನ ಸಮುದಾಯ, ಕಾಲುದಾರಿ ಮುಂತಾದ ವಿಷಯಗಳ ಕುರಿತು ಕಾವ್ಯ ರಚಿಸಬೇಕು. ಹಿಂದಿನ ಸಾಹಿತ್ಯ ಅರಿತಾಗ ಮಾತ್ರ ಮುಂದೆ ಹೊಸದನ್ನು ಬರೆಯಲು ಸಾಧ್ಯ’ ಎಂದು ಕವಿ ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಹೋರಾಟಗಾರ ಎಂ.ಎನ್.ಭಾರಧ್ವಜ್‌, ಕನ್ನಡಪರ ಹೋರಾಟಗಾರ ರಂಗರಾಜಯ್ಯ, ಕಸ್ತೂರಿ ಕನ್ನಡ ವೇದಿಕೆಯ ಪ್ರಸಾದ್, ಶಿವರಾಜ, ಮಲ್ಲಿಕಾರ್ಜುನ ಶೆಟ್ಟರ್, ಮುನಿಯಪ್ಪ, ಜಿ.ರಾಮಕುಮಾರ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.