ADVERTISEMENT

ಬಂಗಾರಪೇಟೆ: ಸರ್ಕಾರಿ ವಸತಿಗೃಹ ಕೆಡವಿ ಮನೆ ನಿರ್ಮಾಣ!

ತಾತ್ಕಾಲಿಕವಾಸಕ್ಕೆ ವ್ಯಕ್ತಿಗೆ ನೀಡಿ ಮರೆತಿದ್ದ ಅಧಿಕಾರಿಗಳು l ಖಾತೆ ಮಾಡಿಕೊಳ್ಳಲು ಮುಂದಾಗಿದ್ದ ನಿರಾಶ್ರಿತ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 23:28 IST
Last Updated 15 ನವೆಂಬರ್ 2025, 23:28 IST
ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಗ್ರಾಮದ ಕೃಷಿ ಇಲಾಖೆ ವಸತಿ ಗೃಹ ನೆಲಸಮ ಮಾಡಿ ಅಕ್ರಮವಾಗಿ ಮನೆ ನಿರ್ಮಾಣ ಮಾಡುತ್ತಿರುವ ಸ್ಥಳಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಕಾಮಗಾರಿ ತಡೆದು, ಎಚ್ಚರಿಕೆಯ ಸೂಚನಾ ಫಲಕ ಅಳವಡಿಸಿದರು.
ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಗ್ರಾಮದ ಕೃಷಿ ಇಲಾಖೆ ವಸತಿ ಗೃಹ ನೆಲಸಮ ಮಾಡಿ ಅಕ್ರಮವಾಗಿ ಮನೆ ನಿರ್ಮಾಣ ಮಾಡುತ್ತಿರುವ ಸ್ಥಳಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಕಾಮಗಾರಿ ತಡೆದು, ಎಚ್ಚರಿಕೆಯ ಸೂಚನಾ ಫಲಕ ಅಳವಡಿಸಿದರು.   

ಬಂಗಾರಪೇಟೆ (ಕೋಲಾರ): ವಾಸಿಸಲು ಮನೆ ಇಲ್ಲ ಎಂದ ವ್ಯಕ್ತಿಯೊಬ್ಬರಿಗೆ ಸರ್ಕಾರಿ ವಸತಿಗೃಹದಲ್ಲಿ ತಾತ್ಕಾಲಿಕವಾಗಿ ತಂಗಲು ಅವಕಾಶ ಮಾಡಿ ಕೊಟ್ಟರೆ, ಆತ ಸರ್ಕಾರದ ವಸತಿಗೃಹವನ್ನೇ ನೆಲಸಮಗೊಳಿಸಿ ಸ್ವಂತ ಮನೆ ನಿರ್ಮಾಣ ಕಾರ್ಯ ಆರಂಭಿಸಿದ್ದಾನೆ.

ಕಾಮಸಮುದ್ರದ ಕೃಷಿ ಇಲಾಖೆ ಸಹಾಯಕ ಕೃಷಿ ಅಧಿಕಾರಿಯ ವಸತಿ ಗೃಹ ಅನೇಕ ದಿನಗಳಿಂದ ಖಾಲಿ ಇತ್ತು. ಹಾಗಾಗಿ ಅಲ್ಲಿ ಸ್ವಲ್ಪ ದಿನ ತಂಗಲು ನಾರಾಯಣಪ್ಪ ಎಂಬುವರಿಗೆ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದರು. 

ದಿನಗಳೆದಂತೆ ಅಧಿಕಾರಿಗಳು ಕೃಷಿ ಇಲಾಖೆ ವಸತಿಗೃಹವನ್ನೇ ಮರೆತುಬಿಟ್ಟಿದ್ದರು. ಇದನ್ನು ಅರಿತ ನಾರಾಯಣಪ್ಪ ಯಾರ ಗಮನಕ್ಕೂ ತಾರದೆ ವಸತಿಗೃಹವನ್ನು ಕೆಡವಿ, ಹೊಸ ಮನೆ ಕಟ್ಟಲು ಆರಂಭಿಸಿದ್ದರು. ಇಷ್ಟಾದರೂ ಈ ವಿಷಯ ಕೃಷಿ ಇಲಾಖೆ ಗಮನಕ್ಕೆ ಬಂದಿರಲಿಲ್ಲ.

ADVERTISEMENT

ನಾರಾಯಣಪ್ಪ ರಜೆಯ ದಿನಗಳಲ್ಲಿ ಮಾತ್ರ ಹಂತ, ಹಂತವಾಗಿ ಕಟ್ಟಡ ಕಟ್ಟಿಸುತ್ತಿದ್ದರು. ಕಟ್ಟಡ ಮುಕ್ತಾಯ ಹಂತಕ್ಕೆ ತಲುಪಿದ್ದರಿಂದ ಈಚೆಗೆ ಕಾಮಸಮುದ್ರ ಗ್ರಾಮ ಪಂಚಾಯಿತಿಯಲ್ಲಿ ಇ–ಖಾತೆ ಮಾಡಿಸಲು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.

ಗ್ರಾಮ ಪಂಚಾಯತಿ ಸಿಬ್ಬಂದಿ ಈ ವಿಷಯವನ್ನು ಕೃಷಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ನಾಲ್ಕು ದಿನದ ಹಿಂದೆ ಗ್ರಾಮಕ್ಕೆ ದೌಡಾಯಿಸಿದ ಹಿರಿಯ ಅಧಿಕಾರಿಗಳು ಸರ್ಕಾರಿ ವಸತಿಗೃಹದ ಜಾಗದಲ್ಲಿ ತಲೆ ಎತ್ತಿದ ನಿರ್ಮಾಣ ಹಂತದ ಕಟ್ಟಡ ಕಂಡು ಹೌಹಾರಿದ್ದಾರೆ. 

ಸಹಾಯಕ ನಿರ್ದೇಶಕಿ ಪ್ರತಿಭಾ, ಸಹಾಯಕ ಕೃಷಿ ಅಧಿಕಾರಿ ವಿಜಯ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಧುಚಂದ್ರ ಹಾಗೂ ಸಿಬ್ಬಂದಿ, ಪೊಲೀಸರ ನೆರವು ಪಡೆದು ನಿರ್ಮಾಣ ಕಾಮಗಾರಿಯನ್ನು ತಡೆದಿದ್ದಾರೆ. 

ಸರ್ಕಾರಿ ಜಾಗದಲ್ಲಿ ಕಟ್ಟಡ ನಿರ್ಮಾಣದ ಕಾಮಗಾರಿ ನಡೆಸದಂತೆ ನಾರಾಯಣಪ್ಪಗೆ ಎಚ್ಚರಿಸಿ, ‘ಈ ಜಾಗ ಕೃಷಿ ಇಲಾಖೆಗೆ ಸೇರಿದ್ದು’ ಎಂಬ ಫಲಕ ನೆಟ್ಟಿದ್ದಾರೆ. ಗ್ರಾಮ ಪಂಚಾಯಿತಿಗೆ ಪತ್ರ ಬರೆದು ನಾರಾಯಣಪ್ಪಗೆ ಖಾತೆ ಮಾಡದಂತೆ ಸೂಚಿಸಿದ್ದಾರೆ. ಪೊಲೀಸರಿಗೆ ದೂರು ನೀಡಿದ್ದಾರೆ.

ವಸತಿಗೃಹ ಕೆಡವಿ ಮನೆ ನಿರ್ಮಾಣ ಮಾಡುತ್ತಿರುವ ನಾರಾಯಣಪ್ಪ ಅವರ ವಿರುದ್ಧ ಕಾಮಸಮುದ್ರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
– ಪ್ರತಿಭಾ, ಸಹಾಯಕ ನಿರ್ದೇಶಕಿ, ಕೃಷಿ ಇಲಾಖೆ
ವಸತಿ ಗೃಹಕ್ಕೆ ಅಕ್ರಮ ಪ್ರವೇಶಿಸದಂತೆ ಸೂಚಿಸಿದ ಹೊರತಾಗಿಯೂ ನಾರಾಯಣಪ್ಪ ಮನೆ ನಿರ್ಮಾಣ ಮಾಡುತ್ತಿದ್ದರು. ಈ ಸಂಬಂಧ ಮೇಲಧಿಕಾರಿಗಳಿಗೆ ದೂರು ನೀಡಲಾಗಿದೆ.
– ಮಧುಚಂದ್ರ, ಪಿಡಿಒ, ಕಾಮಸಮುದ್ರ

ಕೊಟ್ಟು ಮರೆತ ಅಧಿಕಾರಿಗಳು!

ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ಕೇಂದ್ರದಲ್ಲಿ ಹಲವು ದಶಕಗಳ ಹಿಂದೆ ಕೃಷಿ ಇಲಾಖೆಯ ಸಹಾಯಕ ಅಧಿಕಾರಿಗಾಗಿ ಈ ವಸತಿಗೃಹ ನಿರ್ಮಾಣ ಮಾಡಲಾಗಿತ್ತು.

ಕೆಲವು ವರ್ಷ ಅಧಿಕಾರಿಗಳು ಈ ವಸತಿಗೃಹದಲ್ಲೇ ವಾಸ ಮಾಡುತ್ತಿದ್ದರು. ವಸತಿಗೃಹ ಕಿರಿದಾಗಿದೆ ಎಂದು ಕೃಷಿ ಯಂತ್ರಗಳ ಗೋದಾಮಿನಂತೆ ಬಳಸುತ್ತಿದ್ದರು. ಗೋದಾಮಿಗೆ ಈ ಮನೆ ಸಾಲದಾಯಿತು ಎಂದು ಹೊಸ ಗೋದಾಮು ಕಟ್ಟಲಾಗಿತ್ತು. ಕೆಲವು ವರ್ಷಗಳ ಹಿಂದೆ ಅಲ್ಲಿಗೆ ಗೋದಾಮು ಸ್ಥಳಾಂತರ ಮಾಡಲಾಗಿತ್ತು.

ನಿರಾಶ್ರಿತರಾಗಿದ್ದ ನಾರಾಯಣಪ್ಪಗೆ ಖಾಲಿ ಬಿದ್ದಿದ್ದ ಹಳೆ ಕಟ್ಟಡದಲ್ಲಿ ತಾತ್ಕಾಲಿಕವಾಗಿ ವಾಸಿಸಲು ಅವಕಾಶ ಮಾಡಿಕೊಡಲಾಗಿತ್ತು. ಸರ್ಕಾರಿ ಜಾಗದಲ್ಲಿ ಸ್ವಂತ ಮನೆ ನಿರ್ಮಾಣ ಮಾಡುತ್ತಿದ್ದ. ಅದು ಆಗಲೇ ಛತ್ತಿನವರೆಗೂ ನಿರ್ಮಾಣ ಪೂರ್ಣಗೊಂಡಿದೆ.

ಇನ್ನು ಸ್ವಲ್ಪ ದಿನದಲ್ಲಿ ಛತ್ತು ಹಾಕಿಸಿ, ಗೃಹಪ್ರವೇಶಕ್ಕೂ ನಾರಾಯಣಪ್ಪ ಸಿದ್ಧತೆ ನಡೆಸಿದ್ದ ಎಂದು ತಿಳಿದು ಬಂದಿದೆ. ಗ್ರಾಮ ಪಂಚಾಯತಿ ಸಿಬ್ಬಂದಿ ಕೃಷಿ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸುವ ಮೂಲಕ ಅದಕ್ಕೆ ತಡೆಬಿದ್ದಿದೆ.