ADVERTISEMENT

ಅಕ್ರಮ ಗಣಿಗಾರಿಕೆ ಆರೋಪ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಮೇ 2022, 14:47 IST
Last Updated 26 ಮೇ 2022, 14:47 IST
ಮುಳಬಾಗಿಲು ತಾಲ್ಲೂಕಿನ ಬಂಡಹಳ್ಳಿ ಗ್ರಾಮದ ಬಳಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ತಡೆಯುವಂತೆ ಒತ್ತಾಯಿಸಿ ಗ್ರಾಮಸ್ಥರು ಹಾಗೂ ದಲಿತ ಸಂಘಟನೆ ಸದಸ್ಯರು ಕೋಲಾರದಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದರು
ಮುಳಬಾಗಿಲು ತಾಲ್ಲೂಕಿನ ಬಂಡಹಳ್ಳಿ ಗ್ರಾಮದ ಬಳಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ತಡೆಯುವಂತೆ ಒತ್ತಾಯಿಸಿ ಗ್ರಾಮಸ್ಥರು ಹಾಗೂ ದಲಿತ ಸಂಘಟನೆ ಸದಸ್ಯರು ಕೋಲಾರದಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದರು   

ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಬಂಡಹಳ್ಳಿ ಗ್ರಾಮದ ಸರ್ವೆ ನಂಬರ್‌ 57ರ ಜಮೀನಿನಲ್ಲಿ ಅಕ್ರಮವಾಗಿ ಜಲ್ಲಿ ಕ್ರಷರ್ ನಡೆಸುತ್ತಿದ್ದು, ಗಣಿಗಾರಿಕೆ ತಡೆಯಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಹಾಗೂ ದಲಿತ ಸಂಘಟನೆ ಸದಸ್ಯರು ಇಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದರು.

‘ಮುಳಬಾಗಿಲು ತಾಲ್ಲೂಕಿನ ಊರಕುಂಟೆ ಮಿಟ್ಟೂರು ಗ್ರಾ.ಪಂ ವ್ಯಾಪ್ತಿಯ ಬಂಡಹಳ್ಳಿಯ ಸರ್ವೆ ನಂ 57ರ 11 ಎಕರೆ 20 ಗುಂಟೆ ವಿಸ್ತೀರ್ಣದಲ್ಲಿ ಜಮೀನಿನಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ಕೋರಿ ಕೆಸಿಸಿ ಬ್ಯುಲ್ಡ್ ಕಾನ್ ಸಂಸ್ಥೆಯವರು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಗಣಿಗಾರಿಕೆ ಅನುಮತಿ ನಿರಾಕರಿಸಿದ್ದಾರೆ’ ಎಂದು ಪ್ರತಿಭಟನಾಕಾರರು ಹೇಳಿದರು.

‘ಗಣಿಗಾರಿಕೆಗೆ ಅನುಮತಿ ಕೋರಲಾಗಿರುವ ಪ್ರದೇಶದಲ್ಲಿ ಪಾಳು ಬಿದ್ದ ಕಲ್ಲಿನ ಕಟ್ಟಡ ಇರುವುದಾಗಿ ಅಧಿಕಾರಿಗಳು ವರದಿ ನೀಡಿದ್ದಾರೆ. ರಾಜ್ಯ ಉಪ ಖನಿಜ ರಿಯಾಯಿತಿ ನಿಯಮಾವಳಿ 1994 ಹಾಗೂ ತಿದ್ದುಪಡಿ ನಿಯಮ 2016ರ 6ರ ಅನುಸಾರ 100 ಮೀಟರ್ ಅಂತರದಲ್ಲಿ ಸಾರ್ವಜನಿಕ ರಚನೆ ಮಾಡಬಾರದೆಂದು ಅಧಿಕಾರಿಗಳು ಅರ್ಜಿ ತಿರಸ್ಕರಿಸಿದ್ದಾರೆ. ಆದರೂ ಸಂಸ್ಥೆಯು ನಿಯಮಬಾಹಿರವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದೆ’ ಎಂದು ಗ್ರಾಮಸ್ಥ ಸಂಪತ್‌ಕುಮಾರ್‌ ದೂರಿದರು.

ADVERTISEMENT

‘ಗಣಿಗಾರಿಕೆ ನಡೆಯುತ್ತಿರುವ ಸ್ಥಳದಿಂದ ಸುಮಾರು 100 ಮೀಟರ್ ದೂರದಲ್ಲಿ ಗಾಮವಿದೆ. ಈ ಗ್ರಾಮದಲ್ಲಿ 200 ದಲಿತ ಕುಟುಂಬಗಳು ವಾಸಿಸುತ್ತಿದ್ದು, ಗಣಿಗಾರಿಕೆಯಿಂದ ಜನಜೀವನಕ್ಕೆ ಸಮಸ್ಯೆಯಾಗುತ್ತಿದೆ. ಜತೆಗೆ ಸುತ್ತಮುತ್ತ ಕೃಷಿ ಚಟುವಟಿಕೆಗಳಿಗೆ ಸಮಸ್ಯೆಯಾಗುತ್ತಿದೆ. ಗಣಿಗಾರಿಕೆ ದೂಳಿನಿಂದ ಬೆಳೆಗಳು ಹಾಳಾಗುತ್ತಿವೆ. ಗ್ರಾಮಗಳಲ್ಲಿ ಮನೆಗಳು ಬಿರುಕು ಬಿಟ್ಟಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಮುಲಾಜಿಲ್ಲದೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಜಿಲೆಟಿನ್‌ ಸಂಗ್ರಹಣೆ ಮತ್ತು ಸಾಗಾಟ ಪತ್ತೆಗೆ ಗಣಿ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಒಟ್ಟಾಗಿ ಕಾರ್ಯಾಚರಣೆ ನಡೆಸಬೇಕು. ಅಕ್ರಮ ಗಣಿಗಾರಿಕೆ ತಕ್ಷಣವೇ ಬಂದ್ ಆಗಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಬಂಡಹಳ್ಳಿ ಗ್ರಾಮಸ್ಥರಾದ ಮಂಜುನಾಥ್‌, ನಾರಾಯಣಸ್ವಾಮಿ, ಎಂ.ಶ್ರೀರಾಮ್‌, ಮುನೇಗೌಡ, ಲಕ್ಷ್ಮೀನಾರಾಯಣ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.