ADVERTISEMENT

ಜಲ ಶಕ್ತಿ ಅಭಿಯಾನ ಅನುಷ್ಟಾನಗೊಳಿಸಿ

ನೋಡಲ್ ಅಧಿಕಾರಿ ಗುಮಾಲ್ ಮುಸ್ತಾಫ್ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2019, 15:32 IST
Last Updated 19 ಆಗಸ್ಟ್ 2019, 15:32 IST
ಕೋಲಾರ ಜಿಲ್ಲಾ ಪಂಚಾಯಿತಿ ಸಭಾಗಂಣದಲ್ಲಿ ಜಲ ಶಕ್ತಿ ಅಭಿಯಾನ ಕುರಿತು ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಜನಶಕ್ತಿ ಅಭಿಯಾನದ ನೋಡಲ್ ಅಧಿಕಾರಿ ಗುಮಾಲ್ ಮುಸ್ತಾಫ್ ಮಾತನಾಡಿದರು.
ಕೋಲಾರ ಜಿಲ್ಲಾ ಪಂಚಾಯಿತಿ ಸಭಾಗಂಣದಲ್ಲಿ ಜಲ ಶಕ್ತಿ ಅಭಿಯಾನ ಕುರಿತು ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಜನಶಕ್ತಿ ಅಭಿಯಾನದ ನೋಡಲ್ ಅಧಿಕಾರಿ ಗುಮಾಲ್ ಮುಸ್ತಾಫ್ ಮಾತನಾಡಿದರು.   

ಕೋಲಾರ: ‘ಜಲಶಕ್ತಿ ಅಭಿಯಾನದಡಿಯ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಟಾನಕ್ಕೆ ತಂದಾಗ ಮಾತ್ರ ನೀರಿನ ಸಮಸ್ಯೆಯನ್ನು ನಿವಾರಣೆ ಮಾಡಲು ಸಹಕಾರಿಯಾಗುತ್ತದೆ’ ಎಂದು ಜನಶಕ್ತಿ ಅಭಿಯಾನದ ನೋಡಲ್ ಅಧಿಕಾರಿ ಗುಮಾಲ್ ಮುಸ್ತಾಫ್ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಪಂಚಾಯಿತಿ ಸಭಾಗಂಣದಲ್ಲಿ ಜಲ ಶಕ್ತಿ ಅಭಿಯಾನ ಕುರಿತು ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಜಲ ಮೂಲಗಳನ್ನು ರಕ್ಷಿಸಿ ಅಭಿವೃದ್ಧಿಪಡಿಸುವುದೇ ಅಭಿಯಾನದ ಉದ್ದೇಶ, ಇದಕ್ಕೆ ಸಂಬಂಧಪಟ್ಟ ಇಲಾಖಾಧಿಕಾರಿಗಳು ಕ್ರಮಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

‘ದೇಶ, ರಾಜ್ಯ, ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಎದುರಾಗಲು ಕಾರಣಗಳು ಏನು ಎಂಬುದು ಪ್ರತಿಯೊಬ್ಬರಿಗೂ ಅರಿವುದೆ. ಅಭಿಯಾನದಡಿ ವಹಿಸಿರುವ ಕಾರ್ಯಕ್ರಮಗಳನ್ನು ಅನುಷ್ಟಾನಕ್ಕೆ ತರಲು ಪ್ರಮಾಣಿಕವಾಗಿ ಪ್ರಯತ್ನ ಮಾಡಬೇಕು. ಇಲ್ಲಿತನಕ ಅಗಿರುವ ಕೆಲಸ ಬಿಟ್ಟು, ಮುಂದೆ ಕೈಗೊಳ್ಳುವ ಕಾರ್ಯಕ್ರಮಗಳಿಗೆ ಕ್ರಿಯಾ ಯೋಜನೆ ತಯಾರಿಸಿ ಕಳುಹಿಸಬೇಕು’ ಎಂದು ಸೂಚಿಸಿದರು.

ADVERTISEMENT

‘ಜಲಸಂರಕ್ಷಣೆ ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳಲ್ಲಿ ಕಾರ್ಯಗತಗೊಳಿಸಿರುವ ಉತ್ತಮ ಅಭ್ಯಾಸ ಅಳವಡಿಸಿಕೊಂಡು ಸಾಧನೆ ಮಾಡಬೇಕು. 10ನೇ ಸ್ಥಾನದಲ್ಲಿದ್ದ ಜಿಲ್ಲೆ ಈಗ 206ನೇ ಸ್ಥಾನದಲ್ಲಿದೆ. ಶಾಲೆಗಳಲ್ಲಿ ಜಲಸಂರಕ್ಷಣೆಯ ಪ್ರತಿಜ್ಞೆ ಸ್ವೀಕಾರ, ಜಲಮೂಲಗಳ ಪುನಶ್ಚೇತನ, ಅರಣ್ಯೀಕರಣ ಇನ್ನಿತರೆ ಚಟುವಟಿಕೆ ನಡೆಸಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿ, ‘ಅಭಿಯಾನದಡಿ ಸರ್ಕಾರಿ ಕಟ್ಟಡ ಹಾಗೂ ಖಾಸಗಿ ಕಟ್ಟಡಗಳಿಗೆ ಮಳೆ ಕೊಯ್ಲು ಅಳವಡಿಸುವಂತೆ ಸೂಚಿಸಲಾಗಿತ್ತು, ಆದರೆ ಯಾವ ಇಲಾಖೆಯವರು ಯಾಕೆ ಕ್ರಮಕೈಗೊಂಡಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

‘ಮುಳಬಾಗಲು, ಬಂಗಾರಪೇಟೆಯ ಕೋರ್ಟ್ ಕಟ್ಟಡಕ್ಕೆ ಮಳೆ ಕೊಯ್ಲು ಅಳವಡಿಸದಿರುವುದು ಅಕ್ಷಮ್ಯ ಅಪರಾಧ. ಕ್ರಿಯಾಯೋಜನೆಯಲ್ಲಿ ಸೇರಿಲ್ಲವೆಂಬುದು ಸರಿಯಲ್ಲ. ಕೆಲಸ ಮಾಡಬೇಕು ಎಂಬ ಗಂಬೀರತೆ ಇದಿಯೋ ಇಲ್ಲವೋ‘ ಎಂದು ಪಿಡಬ್ಲ್ಯೂಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸರ್ಕಾರಿ ಕಟ್ಟಡ ಕಟ್ಟಲು ಅನುಮತಿ ಪಡೆಯುತ್ತಿಲ್ಲವೆಂದು ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಎಂ.ರಂಗಸ್ವಾಮಿ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮಂಜುನಾಥ್, ‘ಸರ್ಕಾರಕ್ಕೊಂದು, ಖಾಸಗಿ ಕಟ್ಟಡಕ್ಕೊಂದು ನಿಯಮವೇ. ನಕ್ಷೆಗೆ ಅನುಮತಿ ಹೇಗೆ ನೀಡುತ್ತೀರಿ. ಇರೋ ಕಾನೂನು ಅನುಷ್ಟಾನಕ್ಕೆ ತರುತ್ತಿಲ್ಲ. ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಪ್ರತಿ ಕಟ್ಟಡಕ್ಕೂ ಮಳೆಕೊಯ್ಲು ಹೇಗೆ ಮಾಡಿದ್ದಾರೆಂದು ನೋಡಿಕೊಂಡು ಬನ್ನಿ’ ಎಂದು ಸಲಹೆ ನೀಡಿದರು.

‘ಅಭಿಯಾನದಡಿ ನಡೆಯುವ ಕೆಲಸ ಕಾರ್ಯವನ್ನು ಪೋರ್ಟಲ್‌ನಲ್ಲಿ ದಾಖಲು ಮಾಡುವಲ್ಲಿ ಹಿಂದುಳಿದಿರುವುದು ಒಂದೆಡೆಯಾದರೆ ಕೆಸಿ ವ್ಯಾಲಿ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದ್ದು, 25 ಕೆರೆ ಭರ್ತಿಯಾಗಿ ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲಮಟ್ಟ ಹೆಚ್ಚಿದೆ. ಇಂತಹ ಕಾರ್ಯಕ್ರಮದ ಕುರಿತು ಮಾಹಿತಿ ತಂತ್ರಾಂಶದಲ್ಲಿ ದಾಖಲಿಸಲು ಆಗುತ್ತಿಲ್ಲ, ನಗರ ಪ್ರದೇಶದಲ್ಲಿನ ಚಟುವಟಕೆ ಬಗ್ಗೆ ದಾಖಲಿಸಲು ಆಗುತ್ತಿಲ್ಲ’ ಎಂದು ಅಧಿಕಾರಿಗಳ ಗಮನಕ್ಕೆ ತಂದರು.

‘ಅಭಿಯಾನದಡಿ ಗುರುತಿಸಿರುವ 20 ಕಾರ್ಯಚಟುವಟಿಕೆ ಸಂಬಂಧ ಕೆಸಿವ್ಯಾಲಿ ನೀರು ಹರಿಯಲಿರುವ ಕೆರೆಗಳು, ಅರಣ್ಯೀಕರಣಕ್ಕೆ ಉದ್ದೇಶಿತ ಸ್ಥಳ, ಚೆಕ್‌ಡ್ಯಾಂ ನಿರ್ಮಾಣ, ಮಳೆಕೊಯ್ಲು ಇನ್ನಿತರೆ ಕಾರ್ಯಕ್ರಮಗಳ ಕುರಿತು ಇಲಾಖಾಧಿಕಾರಿಳಿಂದ ಮಾಹಿತಿ ಪಡೆದರು.

ಜಲಶಕ್ತಿ ಅಭಿಯಾನದ ತಾಂತ್ರಿಕ ಅಧಿಕಾರಿ ರುಕ್ನಾ ಕೌಸರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಚ್.ಕೆ. ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.