ADVERTISEMENT

ಸ್ವಉದ್ಯೋಗಕ್ಕೆ ಉನ್ನತಿ ಯೋಜನೆ ಜಾರಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 14:06 IST
Last Updated 22 ಅಕ್ಟೋಬರ್ 2020, 14:06 IST
ಕೋಲಾರ ತಾಲ್ಲೂಕಿನ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಗುರುವಾರ ನಡೆದ ಹೊಲಿಗೆ ತರಬೇತಿ ಶಿಬಿರದಲ್ಲಿ ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್‌ ಉಪ ನಿರ್ದೇಶಕ ಏಕನಾಥಸ್ವಾಮಿ ಮಾತನಾಡಿದರು.
ಕೋಲಾರ ತಾಲ್ಲೂಕಿನ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಗುರುವಾರ ನಡೆದ ಹೊಲಿಗೆ ತರಬೇತಿ ಶಿಬಿರದಲ್ಲಿ ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್‌ ಉಪ ನಿರ್ದೇಶಕ ಏಕನಾಥಸ್ವಾಮಿ ಮಾತನಾಡಿದರು.   

ಕೋಲಾರ: ‘ಕೋವಿಡ್‌–19 ಕಾರಣಕ್ಕೆ ಹಲವರು ಉದ್ಯೋಗ ಕಳೆದುಕೊಂಡಿದ್ದು, ಅವರಿಗೆ ಸ್ವಉದ್ಯೋಗದ ಮೂಲಕ ಜೀವನ ರೂಪಿಸಿಕೊಳ್ಳಲು ಅವಕಾಶ ಕಲ್ಪಿಸುವ ಉದ್ದೇಶಕ್ಕೆ ಸರ್ಕಾರ ಉನ್ನತಿ ಎಂಬ ಹೊಸ ಯೋಜನೆ ಜಾರಿಗೊಳಿಸುತ್ತಿದೆ’ ಎಂದು ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್‌ ಉಪ ನಿರ್ದೇಶಕ ಏಕನಾಥಸ್ವಾಮಿ ಹೇಳಿದರು.

ತಾಲ್ಲೂಕಿನ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಮಹಿಳೆಯರಿಗೆ ಗುರುವಾರ ಹಮ್ಮಿಕೊಂಡಿದ್ದ ಉಚಿತ ಹೊಲಿಗೆ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

‘ಉನ್ನತಿ ಯೋಜನೆ ಮೂಲಕ ಗ್ರಾಮೀಣ ಭಾಗದಲ್ಲಿನ ಬಡತನ ರೇಖೆಗಿಂತ ಕೆಳಗಿರುವವರಿಗೆ, ಸ್ತ್ರೀಶಕ್ತಿ ಸ್ವ ಸಹಾಯ ಸಂಘಗಳ ಸದಸ್ಯರಿಗೆ ಹಾಗೂ ನರೇಗಾ ಉದ್ಯೋಗ ಚೀಟಿ ಹೊಂದಿರುವ ಕುಟುಂಬದವರಿಗೆ ಸ್ವಉದ್ಯೋಗ ಆಧಾರಿತ ತರಬೇತಿ ನೀಡಲಾಗುತ್ತದೆ. ಜತೆಗೆ ಅವರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತದೆ’ ಎಂದು ವಿವರಿಸಿದರು.

ADVERTISEMENT

‘ಹೊಲಿಗೆ ವೃತ್ತಿಯು ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಪೂರಕವಾಗಿದೆ. ಪ್ರತಿ ವೃತ್ತಿಗೂ ಗೌರವವಿದೆ. ಯಾವ ವೃತ್ತಿಯನ್ನೂ ಕಡೆಗಣಿಸುವಂತಿಲ್ಲ. ನಾವು ಮಾಡುವ ವೃತ್ತಿಯ ಬಗ್ಗೆ ಹೆಮ್ಮೆ ಇರಬೇಕು. ವೃತ್ತಿಯಲ್ಲಿ ಪ್ರಾಮಾಣಿಕತೆ ಇದ್ದರೆ ಖಂಡಿತ ಯಶಸ್ಸು ಸಿಗುತ್ತದೆ’ ಎಂದು ಕಿವಿಮಾತು ಹೇಳಿದರು.

‘ಸ್ವಉದ್ಯೋಗ ಮಾಡಲು ಆಸಕ್ತಿಯಿರುವ ಮಹಿಳೆಯರಿಗೆ ಹಲವು ಇಲಾಖೆಗಳು ಸಾಕಷ್ಟು ಅನುದಾನ ಮೀಸಲಿಟ್ಟಿವೆ. ಮಹಿಳೆಯರು ಸರ್ಕಾರಿ ಯೋಜನೆಗಳನ್ನು ತಿಳಿಯಬೇಕು. ಆದ ಸವಲತ್ತು ಸದ್ಬಳಕೆ ಮಾಡಿಕೊಳ್ಳಬಹುದು’ ಎಂದು ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್‌ ಯೋಜನಾ ವ್ಯವಸ್ಥಾಪಕಿ ಸುನಂದಾ ಅಭಿಪ್ರಾಯಪಟ್ಟರು.

ಗುರುತಿನ ಚೀಟಿ: ‘ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗಾಗಿ ಇಲಾಖೆಯು ಸಾಕಷ್ಟು ಯೋಜನೆ ಜಾರಿಗೊಳಿಸಿದೆ. ಅಸಂಘಟಿತ ಕಾರ್ಮಿಕರು ಇಲಾಖೆಯಿಂದ ನೀಡುವ ಗುರುತಿನ ಚೀಟಿ ಪಡೆದುಕೊಂಡರೆ ವೈದ್ಯಕೀಯ ವಿಮೆ, ಮಕ್ಕಳ ಶಿಕ್ಷಣಕ್ಕೆ ವಿದ್ಯಾರ್ಥಿವೇತನ, ಮದುವೆಗೆ ಸಹಾಯಧನ, ಅಂಗವಿಕಲರಾದರೆ ಪರಿಹಾರ ಧನ ಪಡೆಯಬಹುದು’ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಕಾಂತ್ ಮಾಹಿತಿ ನೀಡಿದರು.

ಜಿ.ಪಂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ (ಎನ್‌ಆರ್‌ಎಲ್‌ಎಂ) ಸಂಯೋಜಕ ಸುಂದರೇಶ್, ಯೋಜನಾ ವ್ಯವಸ್ಥಾಪಕ ಅಕ್ಬರ್, ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಪ್ರತಿನಿಧಿ ಸುಪ್ರೀತ್, ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ನಿರ್ದೇಶಕರಾದ ಎಂ.ಬಾಲಾಜಿ, ಬಿ.ರಮಾಕಾಂತ್ ಯಾದವ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.