ADVERTISEMENT

ರಾಜ್ಯದಲ್ಲಿ ಅತ್ಯಾಚಾರ ಪ್ರಕರಣ ಹೆಚ್ಚಳ: ರೂಪಕ್‌ಕುಮಾರ್ ದತ್ತ

ಉಪನ್ಯಾಸದಲ್ಲಿ ಎಸ್‌ಎಚ್‌ಆರ್‌ಸಿ ಸದಸ್ಯ ಕಳವಳ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2019, 12:17 IST
Last Updated 23 ಸೆಪ್ಟೆಂಬರ್ 2019, 12:17 IST
ಕೋಲಾರದ ಸರ್ಕಾರಿ ಮಹಿಳಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗವು ಸೋಮವಾರ ಹಮ್ಮಿಕೊಂಡಿದ್ದ ‘ಮಾನವ ಹಕ್ಕುಗಳು ಮತ್ತು ಮಹಿಳೆ’ ಕುರಿತ ಉಪನ್ಯಾಸದಲ್ಲಿ ಎಸ್‌ಎಚ್‌ಆರ್‌ಸಿ ಸದಸ್ಯ ರೂಪಕ್‌ಕುಮಾರ್ ದತ್ತ ಮಾತನಾಡಿದರು.
ಕೋಲಾರದ ಸರ್ಕಾರಿ ಮಹಿಳಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗವು ಸೋಮವಾರ ಹಮ್ಮಿಕೊಂಡಿದ್ದ ‘ಮಾನವ ಹಕ್ಕುಗಳು ಮತ್ತು ಮಹಿಳೆ’ ಕುರಿತ ಉಪನ್ಯಾಸದಲ್ಲಿ ಎಸ್‌ಎಚ್‌ಆರ್‌ಸಿ ಸದಸ್ಯ ರೂಪಕ್‌ಕುಮಾರ್ ದತ್ತ ಮಾತನಾಡಿದರು.   

ಕೋಲಾರ: ‘ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಗಣನೀಯವಾಗಿ ಹೆಚ್ಚಿದ್ದು, ಶಿಕ್ಷೆ ಪ್ರಮಾಣ ಕೇವಲ ಶೇ 5ರಷ್ಟಿದೆ’ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ (ಎಸ್‌ಎಚ್‌ಆರ್‌ಸಿ) ಸದಸ್ಯ ರೂಪಕ್‌ಕುಮಾರ್ ದತ್ತ ಕಳವಳ ವ್ಯಕ್ತಪಡಿಸಿದರು.

ನಗರದ ಸರ್ಕಾರಿ ಮಹಿಳಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗವು ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಮಾನವ ಹಕ್ಕುಗಳು ಮತ್ತು ಮಹಿಳೆ’ ಕುರಿತ ಉಪನ್ಯಾಸ ಉದ್ಘಾಟಿಸಿ ಮಾತನಾಡಿ, ‘ಮಹಿಳೆಯರ ರಕ್ಷಣೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಅನೇಕ ತೀರ್ಪು ನೀಡಿದೆ. ಸರ್ಕಾರಗಳು ಕಾನೂನು ರೂಪಿಸಿವೆ. ಆದರೂ ಕಾನೂನನ್ನು ಮತ್ತಷ್ಟು ಬಲಪಡಿಸಬೇಕು’ ಎಂದು ಅಭಿಪ್ರಾಯಪಟ್ಟರು.

‘ಬೆಂಗಳೂರಿನಲ್ಲಿ ಶೇ 90ರಷ್ಟು ಮಹಿಳೆಯರು ಸಾರ್ವಜನಿಕ ಪ್ರದೇಶಕ್ಕೆ ಬರಲು ಹಿಂಜರಿಯುತ್ತಾರೆ ಎಂಬುದನ್ನು ಸಮೀಕ್ಷೆಗಳು ದೃಢಪಡಿಸಿವೆ. ದೇಶದ ನ್ಯಾಯ ದಾನ ವ್ಯವಸ್ಥೆ ಅವಲೋಕಿಸಿದರೆ ಜನರಿಗೆ ಅವರ ಹಕ್ಕುಗಳ ಬಗ್ಗೆ ತಿಳಿವಳಿಕೆ ಮೂಡಿಸುವ ಅಗತ್ಯವಿದೆ’ ಎಂದು ಹೇಳಿದರು.

ADVERTISEMENT

‘ರಾಷ್ಟ್ರೀಯ ಅಪರಾಧ ದಾಖಲಾತಿ ವಿಭಾಗದ (ಎನ್‌ಸಿಆರ್‌ಬಿ) ಅಂಕಿ ಅಂಶದ ಪ್ರಕಾರ ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅಪರಾಧ ಸಂಬಂಧ 2016ರಲ್ಲಿ 1.22 ಲಕ್ಷ ಪ್ರಕರಣ ದಾಖಲಾಗಿದ್ದವು. ಈ ಪೈಕಿ 23,094 (ಶೇ 18.9) ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ರಾಜ್ಯದಲ್ಲಿ ಕೇವಲ ಶೇ 4.70ರಷ್ಟು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ’ ಎಂದು ವಿವರಿಸಿದರು.

‘ಮಹಿಳೆಯರದು ದುರ್ಬಲ ಸಮುದಾಯವಾಗಿದೆ. ಅದರಲ್ಲೂ ದಲಿತ, ನಿರ್ಗತಿಕ, ವಿಧವೆ, ಲೈಂಗಿಕ ಅಲ್ಪಸಂಖ್ಯಾತರು, ವಿಚಾರಣಾಧೀನ ಮಹಿಳಾ ಕೈದಿಗಳು ತೀರಾ ದುರ್ಬಲರು. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 50ರಷ್ಟು ಮಹಿಳೆಯರಿದ್ದರೂ ಶೋಷಣೆ ತಪ್ಪಿಲ್ಲ. ಶಾಸನಸಭೆಗಳಲ್ಲಿ ಶೇ 33ರ ಮೀಸಲಾತಿ ಸಿಕ್ಕಿಲ್ಲ. ಪುರುಷರ ಜತೆಗೆ ಮಹಿಳೆಯರಿಂದಲೂ ಮಹಿಳೆಯರ ಮೇಲೆ ಶೋಷಣೆ ನಡೆಯುತ್ತಿದೆ’ ಎಂದು ವಿಷಾದಿಸಿದರು.

ಕರ್ತವ್ಯ ಪಾಲಿಸಿ: ‘ಎಲ್ಲರಂತೆ ಮಹಿಳೆಯರಿಗೂ ಘನತೆಯಿಂದ ಜೀವಿಸುವ, ಸ್ವಾತಂತ್ರ್ಯ, ಸಮಾನತೆ, ನಾಗರಿಕ ಮತ್ತು ರಾಜಕೀಯ ಅಧಿಕಾರ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಹಕ್ಕು ನೀಡಲಾಗಿದೆ. ಮಹಿಳಾ ಹಕ್ಕುಗಳ ಸಂಬಂಧ ಸುಪ್ರೀಂ ಕೋರ್ಟ್ ಅನೇಕ ತೀರ್ಪು ನೀಡಿದೆ. ಈ ತೀರ್ಪುಗಳನ್ನು ತಿಳಿಯಬೇಕು. ಜತೆಗೆ ಕರ್ತವ್ಯವನ್ನೂ ಪಾಲಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ನಂತರ ಅನೇಕರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಆದರೆ, ಜಮ್ಮು ಕಾಶ್ಮೀರದಲ್ಲಿ ಗಂಭೀರ ಪರಿಸ್ಥಿತಿ ಇರುವುದರಿಂದ ನ್ಯಾಯಾಲಯವು ಸುರಕ್ಷತೆ ಕಾರಣಕ್ಕೆ ಸರ್ಕಾರದ ಕ್ರಮ ಎತ್ತಿ ಹಿಡಿದಿದೆ’ ಎಂದು ತಿಳಿಸಿದರು.

ಬದಲಾವಣೆ ತರಬೇಕು: ‘ಮಹಿಳೆಯರ ರಕ್ಷಣೆಗಾಗಿ ಸಂವಿಧಾನದಲ್ಲಿ ಅನೇಕ ಅಂಶ ಅಳವಡಿಸಲಾಗಿದ್ದು, ಅವುಗಳನ್ನು ಕಾನೂನಾಗಿ ಜಾರಿಗೆ ತರಲಾಗಿದೆ. ಭ್ರೂಣಹತ್ಯೆ, ವರದಕ್ಷಿಣೆ ನಿಷೇಧ ಕಾಯ್ದೆ, ಬಾಲ್ಯವಿವಾಹ ನಿಷೇಧ, ಜಾಹೀರಾತುಗಳಲ್ಲಿ ಮಹಿಳೆಯರನ್ನು ಅಸಭ್ಯವಾಗಿ ತೋರಿಸುವುದು, ಕೌಟುಂಬಿಕ ದೌರ್ಜನ್ಯ, ಕೆಲಸದ ಸ್ಥಳದಲ್ಲಿ ದೌರ್ಜನ್ಯ ತಡೆಗೆ ಕಾನೂನು ರೂಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಮಾನವ ಹಕ್ಕು ಉಲ್ಲಂಘನೆಯಾಗಿ ಒಂದು ವರ್ಷದೊಳಗೆ ಪ್ರಕರಣವನ್ನು ಆಯೋಗದ ಮುಂದೆ ತರಬಹುದು. ಹಳೇ ಪ್ರಕರಣಗಳಾಗಿದ್ದರೆ ಸ್ವೀಕರಿಸಲು ಆಯೋಗಕ್ಕೆ ಅಧಿಕಾರವಿಲ್ಲ. ಮಾನವ ಹಕ್ಕುಗಳ ಕುರಿತು ಜನರಿಗೆ ಇತ್ತೀಚೆಗೆ ಅರಿವು ಮೂಡುತ್ತಿದೆ. ಹಿಂದಿನ ಪ್ರಕರಣ ದಾಲಿಸಿಕೊಳ್ಳಲು ನ್ಯಾಯಾಲಯಕ್ಕೆ ಇರುವ ಅಧಿಕಾರವನ್ನು ಆಯೋಗಕ್ಕೂ ನೀಡುವ ನಿಟ್ಟಿನಲ್ಲಿ ಬದಲಾವಣೆ ತರಬೇಕು’ ಎಂದರು.

ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಪಂಡಿತ್ ಮುನಿವೆಂಕಟಪ್ಪ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಜಿ.ಆರ್.ಅಶ್ವತ್ಥ್‌, ವಕೀಲ ಕೆ.ವಿ.ಸುರೇಂದ್ರಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.