ADVERTISEMENT

ರಾಜಕಾರಣದಲ್ಲಿ ಅನಾನುಭವಿಗಳ ಪಾರುಪತ್ಯ ಹೆಚ್ಚಳ

ವಿಧಾನ ಪರಿಷತ್‌ ಮಾಜಿ ಸಭಾಪತಿ ಸುದರ್ಶನ್ ಕಳವಳ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2021, 14:27 IST
Last Updated 2 ನವೆಂಬರ್ 2021, 14:27 IST
ಕೋಲಾರ ತಾಲ್ಲೂಕಿನ ನಾಗನಾಳ ಗ್ರಾಮದಲ್ಲಿ ಗ್ರಾಮೀಣ ಕೃಷಿ ಅನುಭವ ಕಾರ್ಯಾಗಾರದಲ್ಲಿ ವಾಸ್ತವ್ಯವಿರುವ ರೇಷ್ಮೆ ಮಹಾವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಮಂಗಳವಾರ ನಡೆದ ಸಂವಾದದಲ್ಲಿ ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್ ಮಾತನಾಡಿದರು
ಕೋಲಾರ ತಾಲ್ಲೂಕಿನ ನಾಗನಾಳ ಗ್ರಾಮದಲ್ಲಿ ಗ್ರಾಮೀಣ ಕೃಷಿ ಅನುಭವ ಕಾರ್ಯಾಗಾರದಲ್ಲಿ ವಾಸ್ತವ್ಯವಿರುವ ರೇಷ್ಮೆ ಮಹಾವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಮಂಗಳವಾರ ನಡೆದ ಸಂವಾದದಲ್ಲಿ ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್ ಮಾತನಾಡಿದರು   

ಕೋಲಾರ: ‘ಆಹಾರದಲ್ಲಿ ವೈವಿಧ್ಯತೆ ಮತ್ತು ನೆಲದ ತಾಜಾತನ ನಿಜವಾಗಿ ಉಳಿದಿರುವುದು ಸಣ್ಣ ರೈತರಿಂದ’ ಎಂದು ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ನಾಗನಾಳ ಗ್ರಾಮದಲ್ಲಿ ಗ್ರಾಮೀಣ ಕೃಷಿ ಅನುಭವ ಕಾರ್ಯಾಗಾರದಲ್ಲಿ ವಾಸ್ತವ್ಯವಿರುವ ರೇಷ್ಮೆ ಮಹಾವಿದ್ಯಾಲಯದ ಅಂತಿಮ ವರ್ಷದ ಕೃಷಿ ವಿಜ್ಞಾನ ವಿದ್ಯಾರ್ಥಿಗಳೊಂದಿಗೆ ಮಂಗಳವಾರ ನಡೆದ ಸಂವಾದದಲ್ಲಿ ಮಾತನಾಡಿದರು.

‘ವ್ಯವಸಾಯ ಎಂದರೆ ಭಾರತೀಯರಿಗೆ ಕೃಷಿ ಜೀವನಾಧಾರ ಮಾತ್ರ ಆಗಿರಲಿಲ್ಲ. ಅದೊಂದು ಪಾರಂಪರಿಕ ಸಂಸ್ಕೃತಿಯಾಗಿತ್ತು. ಬದುಕಿಗೊಂದು ಸಾತ್ವಿಕ ಶೈಲಿ ಒದಗಿಸಿತ್ತು. ನಯ ವಿನಯ, ಗೌರವ, ಸ್ನೇಹ, ಮೃದುತ್ವ, ಮನುಷ್ಯತ್ವ ಮತ್ತು ಸ್ವಾಭಿಮಾನ ಇವೆಲ್ಲವೂ ಕೃಷಿ ಜೀವನಶೈಲಿಯ ಲಕ್ಷಣಗಳಾಗಿದ್ದವು’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಒಂದು ಕಾಲದಲ್ಲಿ ಕೃಷಿ ಮಾಡುವವರಿಗೆ ವಿಶೇಷ ಗೌರವವಿತ್ತು. ಕೃಷಿಯೆಂದರೆ ಆತ್ಮಗೌರವ ಸೃಜನ ಕ್ರಿಯೆ ಎಂಬ ನಂಬಿಕೆಯಿತ್ತು. ಆದರೆ, ಈಗ ಗ್ರಾಮೀಣ ಪ್ರದೇಶದ ಯುವಪೀಳಿಗೆ ಕೃಷಿಯಿಂದ ವಿಮುಖರಾಗಿ ನಗರ ಪ್ರದೇಶ ಸೇರುತ್ತಿರುವುದು ಆತಂಕಕಾರಿ ಬೆಳವಣಿಗೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ವೈದ್ಯಕೀಯ ಕ್ಷೇತ್ರದಷ್ಟೇ ಕೃಷಿ ಕ್ಷೇತ್ರವು ಪ್ರಮುಖ ಕ್ಷೇತ್ರವಾಗಿದ್ದು, ಪ್ರಯೋಗಾಲಯದಲ್ಲಿ ನಡೆಯುವ ಸಂಶೋಧನೆಗಳು ಅಕಾಡೆಮಿಕ್‌ ಆಗಿ ವಿಶ್ವವಿದ್ಯಾಲಯಕ್ಕೆ ಸೀಮಿತವಾಗಬಾರದು. ಲ್ಯಾಬ್‌ ಟು ಲ್ಯಾಂಡ್‌ ಆಗಿ ರೈತರಿಗೆ ತಲುಪಬೇಕು. ಕೃಷಿ ಅಧಿಕಾರಿಗಳು ಕೃಷಿಕರೊಂದಿಗೆ ನೇರ ಮತ್ತು ನಿರಂತರ ಸಂಪರ್ಕದೊಂದಿಗೆ ಕಾಲಕಾಲಕ್ಕೆ ತಕ್ಕಂತೆ ವೈಜ್ಞಾನಿಕ ಮಾಹಿತಿ ನೀಡಬೇಕು’ ಎಂದು ಕಿವಿಮಾತು ಹೇಳಿದರು.

‘ಆಹಾರದಲ್ಲಿ ವೈವಿಧ್ಯತೆ ಮತ್ತು ನೆಲದ ತಾಜಾತನ ನಿಜವಾಗಿ ಉಳಿದಿರುವುದು ಸಣ್ಣ ಹಿಡುವಳಿದಾರರ ಪ್ರಯತ್ನದಲ್ಲಿ. ಭೂಮಿ ಮೇಲೆ ಬದುಕುವ ಪ್ರತಿ ಪ್ರಾಣಿಗೂ ಮತ್ತು ಭೂಮಿಗೂ ಸಣ್ಣ ರೈತರಿಂದ ಸುಸ್ಥಿರತೆ ಸಾಧ್ಯವಾಗುತ್ತದೆ. ವ್ಯಾಪಾರೀಕರಣ ಮತ್ತು ಜಾಗತೀಕರಣದಿಂದ ಇಂದು ಕೃಷಿ ಕೂಡ ಏಕವ್ಯಕ್ತಿ ಉದ್ಯಮವಾಗ ತೊಡಗಿದರೆ ಕೃಷಿ ಸಂಸ್ಕೃತಿ ಕಟ್ಟುವವರು ಯಾರು?’ ಎಂದು ಪ್ರಶ್ನಿಸಿದರು.

ವಿಪರ್ಯಾಸ: ‘ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ದೊಡ್ಡದು ಮಾತ್ರ ಚಂದ. ಸಣ್ಣವರೆಲ್ಲ ನಾಶವಾಗಬೇಕೆಂಬ ಇರಾದೆ ಹೆಚ್ಚುತ್ತಿರುವುದು ವಿಪರ್ಯಾಸ. ಒಂದಿಷ್ಟು ಹಣ್ಣು, ಧಾನ್ಯ, ತರಕಾರಿ, ನಾರು ಮತ್ತು ಬೇರು ಬೆಳೆಸುವ ಸಣ್ಣ ರೈತರಲ್ಲಿ ಇರುವಷ್ಟು ವೈವಿಧ್ಯತೆ ನೂರಾರು ಎಕರೆ ಏಕಬೆಳೆ ಮಾಡುವ ರೈತರಲ್ಲಿ ಇರುವುದಿಲ್ಲ’ ಎಂದರು.

‘ವಿದ್ಯಾರ್ಥಿಗಳು ತಾವು ಓದುವ ವಿಷಯ ಹೊರತುಪಡಿಸಿ ಕನಿಷ್ಠ ಸಾಮಾನಜ್ಞಾನ, ಶಿಸ್ತು ಮತ್ತು ಬದ್ಧತೆ ರೂಢಿಸಿಕೊಂಡು ಸಂವಿಧಾನ ಓದಿಕೊಳ್ಳಬೇಕು. ನಮ್ಮ ಹಕ್ಕುಗಳ ಜತೆಗೆ ಜವಾಬ್ದಾರಿಗಳ ಬಗ್ಗೆಯೂ ಅರಿವಿರಬೇಕು. ಪ್ರಸ್ತುತ ರಾಜಕಾರಣದಲ್ಲಿ ಅನುಭವಿಗಳ ವಿಮುಖತೆ ಹಾಗೂ ಅನಾನುಭವಿಗಳ ಪಾರುಪತ್ಯ ಹೆಚ್ಚಾಗುತ್ತಿದೆ. ಪ್ರಜ್ಞಾವಂತ ಯುವಕರು ಎಚ್ಚೆತ್ತುಕೊಳ್ಳದಿದ್ದರೆ ಪ್ರಜಾಪ್ರಭುತ್ವಕ್ಕೆ ಮಾರಕ’ ಎಂದು ಎಚ್ಚರಿಸಿದರು.

‘ವಿದ್ಯಾಭ್ಯಾಸ ಪದವಿ ಮತ್ತು ಮದುವೆಗಷ್ಟೇ ಸೀಮಿತವಾಗಬಾರದು. ಉನ್ನತ ಶಿಕ್ಷಣ, ಸಂಶೋಧನೆಯೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ನೈಪುಣ್ಯತೆಯನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿ’ ಎಂದು ಕಿವಿಮಾತು ಹೇಳಿದರು.

ಆರ್ಥಿಕ ಸ್ವಾವಲಂಬನೆ: ‘ನಮ್ಮ ಜಿಲ್ಲೆಗಳಲ್ಲಿ ರೈತರು ಏಕಬೆಳೆ ಪದ್ಧತಿ ಅಳವಡಿಸಿಕೊಂಡ ಪರಿಣಾಮ ಆರ್ಥಿಕ ಸ್ವಾವಲಂಬನೆ ಸಾಧ್ಯವಾಗುತ್ತಿಲ್ಲ. ಕೋಲಾರ ಜಿಲ್ಲೆಯ ರೈತರು ವಿಶೇಷವಾಗಿ ಮಹಿಳೆಯರು ಕೃಷಿ ಕ್ಷೇತ್ರದಲ್ಲಿ ಆಸಕ್ತಿ ವಹಿಸುತ್ತಿರುವುದನ್ನು ಕಂಡರೆ ಆಶ್ಚರ್ಯವಾಗುತ್ತಿದೆ’ ಎಂದು ದಾವಣಗೆರೆ ವಿದ್ಯಾರ್ಥಿ ಮಹಾಂತೇಶ್ ಮತ್ತು ಹಾಸನದ ವಿದ್ಯಾರ್ಥಿ ಮನೋಹರ್‌ ತಿಂಗಳ ಅನುಭವ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.