ADVERTISEMENT

15ರಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹ: ಎಚ್ಚರಿಕೆ

ರೇಷ್ಮೆಗೂಡಿಗೆ ಬೆಂಬಲ ಬೆಲೆ ಘೋಷಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 13:32 IST
Last Updated 11 ಜುಲೈ 2020, 13:32 IST

ಕೋಲಾರ: ‘ಸರ್ಕಾರ ರೇಷ್ಮೆಗೂಡಿಗೆ ಜುಲೈ 15ರೊಳಗೆ ಬೆಂಬಲ ಬೆಲೆ ಘೋಷಿಸದಿದ್ದರೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇವೆ’ ಎಂದು ಜಿಲ್ಲಾ ರೇಷ್ಮೆ ಬೆಳೆಗಾರರ ಅಭಿವೃದ್ಧಿ ಸಂಘದ ಅಧ್ಯಕ್ಷ ಸಿ.ವಿ.ನಾರಾಯಣಸ್ವಾಮಿ ಎಚ್ಚರಿಕೆ ನೀಡಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮೂರ್ನಾಲ್ಕು ತಿಂಗಳಿಂದ ರೇಷ್ಮೆಗೂಡು ಧಾರಣೆ ಕುಸಿಯುತ್ತಲೇ ಸಾಗಿದೆ. ರೇಷ್ಮೆ ಬೆಳೆಗಾರರಿಗೆ ಬೆಳೆಗೆ ಖರ್ಚು ಮಾಡಿದ ಹಣ ಸಹ ಸಿಗುತ್ತಿಲ್ಲ. ಇದರಿಂದ ಸಾಲದ ಸುಳಿಗೆ ಸಿಲುಕಿದ್ದಾರೆ’ ಎಂದು ಅಳಲು ತೋಡಿಕೊಂಡರು.

‘ಲಾಕ್‌ಡೌನ್‌ಗೂ ಮುನ್ನ ಮಿಶ್ರತಳಿ ಗೂಡಿನ ಬೆಲೆ ಕೆ.ಜಿಗೆ ₹ 500 ಮತ್ತು ದ್ವಿತಳಿ ಗೂಡಿನ ಬೆಲೆ ಕೆ.ಜಿಗೆ ₹ 600 ಇತ್ತು. ಕೋವಿಡ್–19 ಪರಿಸ್ಥಿತಿಯಿಂದ ಈಗ ಗೂಡಿನ ಬೆಲೆ ಕೆ.ಜಿಗೆ ₹ 200ಕ್ಕೆ ಕುಸಿದಿದೆ. ರೇಷ್ಮೆ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ರೇಷ್ಮೆಗೂಡಿಗೆ ಸೂಕ್ತ ಬೆಲೆ ಸಿಗುವಂತೆ ಮಾಡದಿದ್ದರೆ ರೇಷ್ಮೆ ಬೆಳೆಗಾರರು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ಹೇಳಿದರು.

ADVERTISEMENT

‘ಸಂಕಷ್ಟದಲ್ಲಿ ಸರ್ಕಾರ ರೇಷ್ಮೆ ಬೆಳೆಗಾರರ ಕೈ ಹಿಡಿಯುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಈ ಹಿಂದೆ ಸರ್ಕಾರ ಹಿಪ್ಪುನೇರಳೆಗೆ ನೀಡುತ್ತಿದ್ದ ಪ್ರೋತ್ಸಾಹಧನ ಸ್ಥಗಿತಗೊಳಿಸಿರುವುದರಿಂದ ರೇಷ್ಮೆ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದು ಅಲವತ್ತುಕೊಂಡರು.

ಬದುಕು ಬೀದಿ ಪಾಲು: ‘ಸರ್ಕಾರ ರೇಷ್ಮೆ ಕೃಷಿ ಮತ್ತು ರೈತರನ್ನು ಉಳಿಸಬೇಕು. ಸಂಘದ ಮನವಿಗೆ ಸ್ಪಂದಿಸಿ ರೇಷ್ಮೆ ಸಚಿವ ಕೆ.ನಾರಾಯಣಗೌಡರು ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಒಂದು ವರ್ಷ ಕಳೆದರೂ ಸಮಸ್ಯೆ ಬಗೆಹರಿಸಿಲ್ಲ. ರೇಷ್ಮೆ ಉದ್ಯಮ ನಂಬಿರುವವರ ಬದುಕು ಬೀದಿ ಪಾಲಾಗಿದೆ’ ಎಂದು ವಿಷಾದಿಸಿದರು.

‘ಸರ್ಕಾರ ಕೂಡಲೇ ರೇಷ್ಮೆ ಬೆಳೆಗಾರರ ನೆರವಿಗೆ ಧಾವಿಸಬೇಕು. ದ್ವಿತಳಿ ರೇಷ್ಮೆ ಗೂಡು ಕೆ.ಜಿಗೆ ₹ 150 ಮತ್ತಯ ಮಿಶ್ರತಳಿ ಗೂಡು ಕೆ.ಜಿಗೆ ₹ 100 ಪ್ರೋತ್ಸಾಹಧನ ನೀಡಬೇಕು. ಇಲ್ಲದಿದ್ದರೆ ರೇಷ್ಮೆ ಬೆಳೆಗಾರರು ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯ’ ಎಂದು ಎಚ್ಚರಿಕೆ ನೀಡಿದರು.

ಸಂಘದ ಉಪಾಧ್ಯಕ್ಷ ಎನ್.ಗೋಪಾಲಪ್ಪ, ಕಾರ್ಯದರ್ಶಿ ಬಿ.ಎಂ.ಶಂಕರೇಗೌಡ, ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್, ನಿರ್ದೇಶಕ ರಮೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.