ADVERTISEMENT

ಕ್ರೀಡಾಂಗಣಕ್ಕೆ ಮೂಲಸೌಕರ್ಯ: ಡಿ.ಸಿ ಭರವಸೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2019, 15:57 IST
Last Updated 17 ಡಿಸೆಂಬರ್ 2019, 15:57 IST
ಮಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿಜೇತರಾದ ಜಿಲ್ಲೆಯ ಕ್ರೀಡಾಪಟುಗಳನ್ನು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಕೋಲಾರದಲ್ಲಿ ಮಂಗಳವಾರ ಸನ್ಮಾನಿಸಿದರು.
ಮಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿಜೇತರಾದ ಜಿಲ್ಲೆಯ ಕ್ರೀಡಾಪಟುಗಳನ್ನು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಕೋಲಾರದಲ್ಲಿ ಮಂಗಳವಾರ ಸನ್ಮಾನಿಸಿದರು.   

ಕೋಲಾರ: ‘ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನಗರದಲ್ಲಿನ ಕ್ರೀಡಾಂಗಣಗಳಿಗೆ ಮೂಲ ಸೌಕರ್ಯ ಕಲ್ಪಿಸಿ ಮೇಲ್ದರ್ಜೆಗೆ ಏರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಭರವಸೆ ನೀಡಿದರು.

ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ 40ನೇ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿಜೇತರಾದ ಜಿಲ್ಲೆಯ ಕ್ರೀಡಾಪಟುಗಳನ್ನು ಇಲ್ಲಿ ಮಂಗಳವಾರ ಸನ್ಮಾನಿಸಿ ಮಾತನಾಡಿ, ‘ಜಿಲ್ಲೆಯಲ್ಲಿ ಕ್ರೀಡಾಪಟುಗಳಿಗೆ ಕೊರತೆಯಿಲ್ಲ. ಆದರೆ, ಅವರಿಗೆ ಸಮರ್ಪಕ ಪ್ರೋತ್ಸಾಹ ಸಿಗದೆ ಹಿಂದುಳಿಯುತ್ತಿದ್ದಾರೆ’ ಎಂದರು.

‘ಜಿಲ್ಲಾ ಕ್ರೀಡಾಂಗಣ ಹಾಗೂ ಕ್ರೀಡಾಪಟುಗಳಿಗೆ ಮೂಲಸೌಕರ್ಯ ಕಲ್ಪಿಸುವ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗುವುದು. ಕ್ರೀಡಾಪಟುಗಳು ಪಾಲ್ಗೊಂಡು ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತರಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ದೈಹಿಕ ಸದೃಢತೆ ಹೆಚ್ಚು ಮಹತ್ವ ಪಡೆದಿದೆ. ಕುಡಿಯುವ ನೀರು, ಸೇವಿಸುವ ಗಾಳಿ, ತಿನ್ನುವ ಆಹಾರದ ಗುಣಮಟ್ಟದಲ್ಲಿ ವ್ಯತ್ಯಾಸವಾದರೆ ಆರೋಗ್ಯ ಹಾಳಾಗುತ್ತದೆ. ದೈನಂದಿನ ಕಾರ್ಯ ಚಟುವಟಿಕೆಯಲ್ಲಿ ಒತ್ತಡಕ್ಕೆ ಸಿಲುಕಬೇಕಾಗುತ್ತದೆ. ವ್ಯಾಯಾಮ, ಯೋಗ, ಉತ್ತಮ ಆಹಾರ ಸೇವನೆ ಅತ್ಯಗತ್ಯ. ರಾಜ್ಯ ಮಟ್ಟದಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವ ಕ್ರೀಡಾಪಟುಗಳು ಗೆಲುವು ಸಾಧಿಸಿ ಜಿಲ್ಲೆಗೆ ಕೀರ್ತಿ ತರಬೇಕು’ ಎಂದು ಆಶಿಸಿದರು.

‘ಜಿಲ್ಲಾಡಳಿತ, ಕ್ರೀಡಾ ಇಲಾಖೆಯ ಅನುದಾನದ ಜತೆಗೆ ಕಾರ್ಪೊರೇಟ್‌ ಕಂಪನಿಗಳ (ಸಿಎಸ್‍ಆರ್) ಹಣಕಾಸು ನೆರವು ಬಳಸಿಕೊಂಡು ಕ್ರೀಡಾಪಟುಗಳಿಗೆ ಮೂಲಸೌಕರ್ಯ ಕಲ್ಪಿಸಲಾಗುವುದು. ಆರೋಗ್ಯವಂತ ದೇಹದಲ್ಲಿ ಆರೋಗ್ಯವಂತ ಮನಸ್ಸಿರುತ್ತದೆ. ಜೀವನದಲ್ಲಿ ಸದಾ ಲವಲವಿಕೆಯಿಂದಿರಲು ಕ್ರೀಡೆ ಅವಶ್ಯಕ’ ಎಂದು ಅಭಿಪ್ರಾಯಪಟ್ಟರು.

‘ಜಿಲ್ಲಾ ಕ್ರೀಡಾಂಗಣ ಸಿಂಥೆಟಿಕ್ ಟ್ರ್ಯಾಕ್ ಕಾಮಗಾರಿ ನನೆಗುದಿಗೆ ಬಿದ್ದಿದೆ. ಕ್ರೀಡಾಪಟುಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿರುವವರನ್ನು ಕ್ರೀಡಾ ಸಮಿತಿಯಲ್ಲಿ ಸದಸ್ಯರಾಗಿ ಮುಂದುವರಿಸಬೇಕು’ ಎಂದು ಅಮೆಚ್ಯೂರ್‌ ಅಥ್ಲೆಟಿಕ್ ಅಸೋಸಿಯೇಷನ್‌ ರಾಜ್ಯ ಪದಾಧಿಕಾರಿ ಜಯದೇವ್ ಮನವಿ ಮಾಡಿದರು.

ಧನಸಹಾಯ: ‘ಅಸೋಸಿಯೇಷನ್‌ನಲ್ಲಿ 35 ವರ್ಷ ಮೀರಿದ 150 ಮಂದಿ ಸದಸ್ಯರಿದ್ದಾರೆ. ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮಣಿಪುರದಲ್ಲಿ 2020ರ ಜನವರಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ 30 ಮಂದಿ ಆಯ್ಕೆಯಾಗಿದ್ದಾರೆ. ಹಿರಿಯರ ಕ್ರೀಡಾಕೂಟಗಳಿಗೆ ಧನಸಹಾಯ ನೀಡಬೇಕು’ ಎಂದು ಅಂತರರಾಷ್ಟ್ರೀಯ ಕ್ರೀಡಾಪಟು ಮಾರಪ್ಪ ಕೋರಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಕ್ರೀಡಾಪಟುಗಳಾದ ಅಶ್ವತ್ಥ್, ರಮೇಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಎಂ.ಎಲ್.ದೇವಿಕಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.