ADVERTISEMENT

ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಿಸಲು ಒತ್ತಾಯ

ವಾಲ್ಮೀಕಿ ನಾಯಕ ಸಂಘಟನೆಗಳ ಯುವ ಒಕ್ಕೂಟದಿಂದ ಧರಣಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 13:34 IST
Last Updated 21 ಜೂನ್ 2019, 13:34 IST
ಪರಿಶಿಷ್ಟ ಪಂಗಡಕ್ಕೆ ಶೇ.7.5ರಷ್ಟು ಮೀಸಲಾತಿ ಹೆಚ್ಚಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ವಾಲ್ಮೀಕಿ ನಾಯಕ ಸಂಘಟನೆಗಳ ಯುವ ಒಕ್ಕೂಟದ ಸದಸ್ಯರು ಕೋಲಾರದಲ್ಲಿ ಕಾಲೇಜು ವೃತ್ತದಲ್ಲಿ ಶುಕ್ರವಾರ ಧರಣಿ ನಡೆಸಿದರು.
ಪರಿಶಿಷ್ಟ ಪಂಗಡಕ್ಕೆ ಶೇ.7.5ರಷ್ಟು ಮೀಸಲಾತಿ ಹೆಚ್ಚಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ವಾಲ್ಮೀಕಿ ನಾಯಕ ಸಂಘಟನೆಗಳ ಯುವ ಒಕ್ಕೂಟದ ಸದಸ್ಯರು ಕೋಲಾರದಲ್ಲಿ ಕಾಲೇಜು ವೃತ್ತದಲ್ಲಿ ಶುಕ್ರವಾರ ಧರಣಿ ನಡೆಸಿದರು.   

ಕೋಲಾರ: ರಾಜ್ಯದಲ್ಲಿನ ಪರಿಶಿಷ್ಟ ಪಂಗಡಕ್ಕೆ ಶೇ.7.5ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ವಾಲ್ಮೀಕಿ ನಾಯಕ ಸಂಘಟನೆಗಳ ಯುವ ಒಕ್ಕೂಟದ ಸದಸ್ಯರು ನಗರದ ಕಾಲೇಜು ವೃತ್ತದಲ್ಲಿ ಶುಕ್ರವಾರ ಧರಣಿ ನಡೆಸಿದರು.

ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಅಂಬರೀಶ್ ಮಾತನಾಡಿ, ‘ಪರಿಶಿಷ್ಟ ವರ್ಗದವರ ಮೀಸಲಾತಿಯನ್ನು ಕೇಂದ್ರ ಸರ್ಕಾರ ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಿದೆ. ರಾಜ್ಯದಲ್ಲಿ ಏರಿಕೆ ಮಾಡದೆ ರಾಜ್ಯ ಸರ್ಕಾರ ನಿರ್ಲಕ್ಷ ತೋರುತ್ತಿದೆ’ ಎಂದು ದೂರಿದರು.

‘1992ರಲ್ಲಿ ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಶೇ.3.5ರಷ್ಟು ಮೀಸಲಾತಿ ನೀಡಲಾಗಿತ್ತು. ಆದರೆ, ಈಗ ಪರಿಶಿಷ್ಟ ಪಂಗಡದ ಜನಸಂಖ್ಯೆ 76ಲಕ್ಷಕ್ಕೇರಿದೆ. ಅಂಬೇಡ್ಕರ್ ಅವರ ಆಶಯದಂತೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಕೇಂದ್ರ ಸರಕಾರ ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲಿ ಶೇ.7.5ರಷ್ಟು ಮೀಸಲಾತಿ ಕಲ್ಪಿಸಿದೆ. ಅದೇರಿತಿ ರಾಜ್ಯದಲ್ಲಿ ಕೂಡ, ಶೇ.3.5ರಷ್ಟು ಇರುವ ಮೀಸಲಾತಿಯನ್ನು ಶೇ.7.5ಕ್ಕೆ ಹೆಚ್ಚಿಸಬೇಕು. ವಾಲ್ಮೀಕಿ ಸಮುದಾಯದ ಅನೇಕ ಹಿರಿಯರು, ಜನಪ್ರತಿನಿಗಳು, ಸಂಘ ಸಂಸ್ಥೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಆದರೆ, ಈವರೆಗೂ ಕೂಡ ಸರಕಾರ ಗಮನ ಹರಿಸಿಲ್ಲ’ ಎಂದು ಆಕ್ರೋಶವ್ಯಕ್ತಪಡಿಸಿದರು.

‘ಮೀಸಲಾತಿ ವಿಷಯವಾಗಿ ಪ್ರಸನ್ನಾಂದಪುರ ಸ್ವಾಮೀಜಿ ಸುಮಾರು 270 ಕಿ.ಮೀ. ಪಾದಯಾತ್ರೆ ಕೈಗೊಂಡು, ಬೆಂಗಳೂರಿನತ್ತ ಸಾಗಿದ್ದಾರೆ. ಈ ಹೋರಾಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಇದು ಹೋರಾಟವನ್ನು ತೀವ್ರಗೊಳಿಸಲು ಅನುವು ಮಾಡಿಕೊಟ್ಟಿದೆ’ ಎಂದರು.

‘ಶೇ.7.5ರಷ್ಟು ಮೀಸಲಾತಿ ಕಲ್ಪಿಸದಿದ್ದರೆ ಜೂ.25ರಂದು ಬೆಂಗಳೂರಿಗೆ ತಲುಪಲಿರುವ ಬೃಹತ್ ಪಾದಯಾತ್ರೆ ಉಗ್ರ ಹೋರಾಟವಾಗಿ ರೂಪುಗೊಳ್ಳುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಒಕ್ಕೂಟದ ಸದಸ್ಯರಾದ ವೆಂಕಟರಾಮ್, ಆನಂದ್, ಬ್ಯಾಟಪ್ಪ, ನಾರಾಯಣಸ್ವಾಮಿ, ವೆಂಕಟೇಶನಾಯಕ್, ಬಾಬು, ಆಂಜಪ್ಪ, ನರೇಶ್, ಶ್ರೀನಿವಾಸ್, ಶ್ರೀನಿವಾಸ್, ಸುಬ್ಬರಾಯಪ್ಪ, ತಿಮ್ಮಣ್ಣ, ಸೋಮು, ನಾಗೇಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.