ADVERTISEMENT

ಸೌಲಭ್ಯ: ಕೋರ್ಟ್‌ ಮೆಟ್ಟಿಲೇರುತ್ತೇವೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 14:32 IST
Last Updated 21 ಸೆಪ್ಟೆಂಬರ್ 2020, 14:32 IST

ಕೋಲಾರ: ‘ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸೌಲಭ್ಯ ನೀಡದಿರುವ ಸರ್ಕಾರದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುತ್ತೇವೆ’ ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾ ಮಂಡಳಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಸಿ.ಚಿನ್ನಮ್ಮ ಹೇಳಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹಲವು ಬಾರಿ ಹೋರಾಟ ಮಾಡಿದ್ದೇವೆ. ಆದರೆ, ಸರ್ಕಾರ ಬೇಡಿಕೆಗೆ ಸ್ಪಂದಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಇಲಾಖೆ ನಿವೃತ್ತಿ ವೇತನ ನೀಡಿಲ್ಲ. ನಿವೃತ್ತ ಕಾರ್ಯಕರ್ತೆಯರಲ್ಲಿ ಸಾಕಷ್ಟು ಮಂದಿ ಮೃತಪಟ್ಟಿದ್ದಾರೆ. ಸೆಪ್ಟೆಂಬರ್‌ ಅಂತ್ಯದೊಳಗೆ ಬೇಡಿಕೆ ಈಡೇರಿಸದಿದ್ದರೆ ಮುಂದಿನ ಆಗುಹೋಗುಗಳಿಗೆ ಸರ್ಕಾರವೇ ಹೊಣೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ಕೋವಿಡ್‌ ಸಂಕಷ್ಟದಲ್ಲೂ ಅಂಗನವಾಡಿ ನೌಕರರು ಮೂಲಸೌಕರ್ಯವಿಲ್ಲದೆ ಕಾರ್ಯ ನಿರ್ವಹಿಸಿದ್ದಾರೆ. ಮಾತೃವಂದನಾ ಯೋಜನೆಯ ಆರಂಭದಿಂದ ಎಲ್ಲಾ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಸೌಲಭ್ಯ ಕೊಡಿಸಲಾಗಿದೆ. ಆದರೆ, ನೌಕರರಿಗೆ ಮಾತ್ರ ಪ್ರೋತ್ಸಾಹಧನ ನೀಡಿಲ್ಲ, ಸಿಬ್ಬಂದಿ ಕೊರತೆ ನಡುವೆಯೂ ಇಲಾಖೆ ಕೆಲಸಗಳನ್ನು ಸಮರ್ಥವಾಗಿ ಮಾಡಿದ್ದೇವೆ’ ಎಂದು ತಿಳಿಸಿದರು.

‘ಅಂಗನವಾಡಿ ನೌಕರರು ಮೃತಪಟ್ಟಾಗ ಅವರ ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ಅನುಕೂಲ ಕಲ್ಪಿಸಬೇಕು. ನೌಕರರು ಮೃತಪಟ್ಟರೆ ಇಲಾಖೆಯು ಅಂತ್ಯಕ್ರಿಯೆಗೂ ಧನಸಹಾಯ ನೀಡುತ್ತಿಲ್ಲ. ಸಿಬ್ಬಂದಿ ಕನಿಷ್ಠ ಸೌಲಭ್ಯವಿಲ್ಲದೆ ಕೆಲಸ ಮಾಡುವುದು ಹೇಗೆ? ಸರ್ಕಾರ ಅಂಗನವಾಡಿ ನೌಕರರ ಬಗ್ಗೆ ಕಾಳಜಿ ವಹಿಸಬೇಕು’ ಎಂದು ಮನವಿ ಮಾಡಿದರು.

ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾ ಮಂಡಳಿ ಸದಸ್ಯರಾದ ಲೀಲಾವತಿ, ಮಂಜುಳಾ, ಪ್ರಭಾವತಿ, ಈಶ್ವರಮ್ಮ, ಉಷಾ, ರಾಜಮ್ಮ, ಭಾಗ್ಯಲಕ್ಷ್ಮೀ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.