ADVERTISEMENT

ಉಚಿತ ಚಿಕಿತ್ಸೆ–ಲಸಿಕೆಗೆ ಒತ್ತಾಯ

ಮನೆಯಂಗಳದಲ್ಲಿ ಸಿಪಿಎಂ ಕಾರ್ಯಕರ್ತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 14:52 IST
Last Updated 1 ಜೂನ್ 2021, 14:52 IST
ಕೋವಿಡ್‌ ನಿಯಂತ್ರಣಕ್ಕೆ ಸಾರ್ವತ್ರಿಕವಾಗಿ ಉಚಿತ ಚಿಕಿತ್ಸೆ ಮತ್ತು ಲಸಿಕೆ ನೀಡುವಂತೆ ಒತ್ತಾಯಿಸಿ ಸಿಪಿಎಂ ಕಾರ್ಯಕರ್ತರು ಕೋಲಾರದಲ್ಲಿ ಮಂಗಳವಾರ ತಮ್ಮ ಮನೆಯಂಗಳದಲ್ಲಿ ಪ್ರತಿಭಟನೆ ಮಾಡಿದರು.
ಕೋವಿಡ್‌ ನಿಯಂತ್ರಣಕ್ಕೆ ಸಾರ್ವತ್ರಿಕವಾಗಿ ಉಚಿತ ಚಿಕಿತ್ಸೆ ಮತ್ತು ಲಸಿಕೆ ನೀಡುವಂತೆ ಒತ್ತಾಯಿಸಿ ಸಿಪಿಎಂ ಕಾರ್ಯಕರ್ತರು ಕೋಲಾರದಲ್ಲಿ ಮಂಗಳವಾರ ತಮ್ಮ ಮನೆಯಂಗಳದಲ್ಲಿ ಪ್ರತಿಭಟನೆ ಮಾಡಿದರು.   

ಕೋಲಾರ: ಕೋವಿಡ್‌ ನಿಯಂತ್ರಣಕ್ಕೆ ಸಾರ್ವತ್ರಿಕವಾಗಿ ಉಚಿತ ಚಿಕಿತ್ಸೆ ಮತ್ತು ಲಸಿಕೆ ನೀಡುವಂತೆ ಒತ್ತಾಯಿಸಿ ಸಿಪಿಎಂ ಕಾರ್ಯಕರ್ತರು ಜಿಲ್ಲೆಯಾದ್ಯಂತ ಮಂಗಳವಾರ ತಮ್ಮ ಮನೆಯಂಗಳದಲ್ಲಿ ಪ್ರತಿಭಟನೆ ಮಾಡಿದರು.

‘ಕೋವಿಡ್‌ 2ನೇ ಅಲೆ ವೇಳೆ ಜೀವ ಉಳಿಸಿ–ಜೀವನ ರಕ್ಷಿಸಿ 3ನೇ ಅಲೆಗೆ ಸನ್ನದ್ಧರಾಗಿ’ ಎಂಬ ಘೋಷಣೆಯೊಂದಿಗೆ ನಡೆದ ಹೋರಾಟದಲ್ಲಿ ಪ್ರತಿಭಟನಾಕಾರರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಕೋವಿಡ್ ಮತ್ತು ಲಾಕ್‌ಡೌನ್‌ ಕಾರಣಕ್ಕೆ ಜನರು ಮನೆಯಿಂದ ಹೊರ ಬರಲಾಗದ ಹಾಗೂ ಪ್ರತಿಭಟಿಸಲಾಗದ ಸ್ಥಿತಿಯಲ್ಲಿದ್ದಾರೆ. ಸರ್ಕಾರಗಳು ಪರಿಸ್ಥಿತಿಯ ಲಾಭ ಪಡೆದು ರೈತ ವಿರೋಧಿ ಕೃಷಿ ಕಾಯ್ದೆಗಳು ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿವೆ’ ಎಂದು ಕಿಡಿಕಾರಿದರು.

ADVERTISEMENT

‘ಕೋವಿಡ್ 2ನೇ ಅಲೆಯಲ್ಲಿ ಸಾವಿರಾರು ಜನ ಮೃತಪಟ್ಟಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಸಕಾಲದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಜನರನ್ನು ಸಾವಿನ ದವಡೆಗೆ ದೂಡಿವೆ. ದೇಶ ಪ್ರೇಮ, ದೇಶ ಭಕ್ತಿ ಬಗ್ಗೆ ಭಾಷಣ ಮಾಡುವ ನಾಯಕರು ಜನರ ಜೀವ ಉಳಿಸಲು ಅಗತ್ಯವಾದ ಆಸ್ಪತ್ರೆಗಳು, ಆಮ್ಲಜನಕ ಸಹಿತ ಹಾಸಿಗೆ ವ್ಯವಸ್ಥೆ ಮಾಡಲಿಲ್ಲ. ಇದು ನಾಚಿಕೆಗೇಡಿನ ಸಂಗತಿ’ ಎಂದು ಆರೋಪಿಸಿದರು.

‘ಕೋವಿಡ್‌ ಸಂಕಷ್ಟದಲ್ಲಿ ಸರ್ಕಾರಗಳು ಬಡ ಜನರ ಪರವಾಗಿ ನಿಲ್ಲುತ್ತಿಲ್ಲ. ಕೋವಿಡ್ ಹೆಸರಿನಲ್ಲಿ ಘೋಷಿಸಿರುವ ವಿಶೇಷ ಪ್ಯಾಕೇಜ್ ಅವೈಜ್ಞಾನಿಕವಾಗಿದೆ. ಕೋವಿಡ್ ವಿರುದ್ಧದ ಸಮರದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಮುಂಚೂಣಿ ಕಾರ್ಯಕರ್ತರಿಗೆ ಸರ್ಕಾರ ಅಗತ್ಯ ಜೀವರಕ್ಷಕ ಸಲಕರಣೆಗಳನ್ನು ಕೊಟ್ಟಿಲ್ಲ. ಅವರ ವೇತನ ಸಹ ಬಾಕಿ ಉಳಿಸಿಕೊಳ್ಳಲಾಗಿದೆ’ ಎಂದು ದೂರಿದರು.

ನೇರ ನಗದು: ‘ಆದಾಯ ತೆರಿಗೆಯಿಂದ ಹೊರಗಿರುವ ಕುಟುಂಬಗಳಿಗೆ 6 ತಿಂಗಳು ಮಾಸಿಕ ₹ 1೦ ಸಾವಿರ ನೇರ ನಗದು ವರ್ಗಾವಣೆ ಮಾಡಬೇಕು. ಪ್ರತಿ ಕುಟುಂಬಕ್ಕೆ ಉಚಿತವಾಗಿ ತಲಾ 1೦ ಕೆ.ಜಿ ಆಹಾರ ಧಾನ್ಯ ವಿತರಿಸಬೇಕು. ನರೇಗಾದಡಿ ಮಾನವ ದಿನಗಳನ್ನು 2೦೦ಕ್ಕೆ ಹೆಚ್ಚಿಸಿ ದಿನಕ್ಕೆ ₹ 6೦೦ ಕೂಲಿ ನೀಡಬೇಕು. ನಗರ ಪ್ರದೇಶಕ್ಕೂ ನರೇಗಾ ವಿಸ್ತರಿಸಬೇಕು. ರೈತ- ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.